ಪುತ್ತೂರು: ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವ ಕೆಲಸ ಸರ್ಕಾರದಿಂದ ನಡೆಯುತ್ತಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಬಡವರಲ್ಲಿ ಅಲ್ಪ ಮಟ್ಟದ ಚೇತರಿಕೆಯಾಗಿದೆ. ಶಿಕ್ಷಣ ಮತ್ತು ಅರಿವಿನ ಕೊರತೆಯ ಕಾರಣದಿಂದಾಗಿ ಸರ್ಕಾರದ ಸೌಲಭ್ಯಗಳು ಇನ್ನೂ ತಳ ಮಟ್ಟದ ಜನರಿಗೆ ತಲುಪುವುದಕ್ಕೆ ಸಾಧ್ಯವಾಗಿಲ್ಲ. ಬಡ ಮತ್ತು ಅಶಕ್ತರಾಗಿ ಉಳಿದಿರುವ ಮಹಿಳೆಯರನ್ನು ಆಶಾ ಕಾರ್ಯಕರ್ತೆಯರು, ಅಂಗನವಾಡಿನ ಕಾರ್ಯಕರ್ತೆಯರು ಗುರುತಿಸಿ ಸರಕಾರದ ಸವಲತ್ತು ದೊರಕಿಸಲು ಸಹಕಾರ ನೀಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ದ.ಕ. ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಪಂ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ, ಶಿಶು ಅಭಿವೃದ್ಧಿ ಯೋಜನೆ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘ ಹಾಗೂ ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಪುತ್ತೂರು ಇವರ ಸಹಯೋಗದೊಂದಿಗೆ ಪುರಭವನದಲ್ಲಿ ಭಾನುವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿ, ಮಹಿಳೆಯರು ಶಿಕ್ಷಣದಲ್ಲಿ ಮಂದಿರುವಂತೆ ರಾಜಕೀಯ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಮುಂದೆ ಬರುವಂತಾಗಬೇಕು. ಇದಕ್ಕಾಗಿ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪುತ್ತೂರು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಮಾತನಾಡಿದರು.ಸಂಪನ್ಮೂಲ ವ್ಯಕ್ತಿಯಾಗಿದ್ದ ನ್ಯಾಯವಾದಿ ರಾಜೇಶ್ವರಿ ಎಂ. ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದರು. ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಸನ್ಮಾನಿಸಲಾಯಿತು. ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಜಿಲ್ಲಾ ಅಧ್ಯಕ್ಷೆ ಶಕುಂತಲಾ, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ತಾಲೂಕು ಅಧ್ಯಕ್ಷೆ ಕಮಲ, ಸಹಾಯಕ ಸಿಡಿಪಿಓ ಮಂಗಳಾ ಕಾಳೆ ಇದ್ದರು. ತಾಲೂಕು ಸಿಡಿಪಿಓ ಹರೀಶ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮೇಲ್ವಿಚಾರಕಿ ಸುಜಾತ ನಿರೂಪಿಸಿದರು.