- ತಾಲೂಕು ಗ್ಯಾರಂಟಿ ಪ್ರಾಧಿಕಾರದ ನೂತನ ಕಚೇರಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯದಲ್ಲಿ ಜಾರಿಗೆ ತರಲಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ನಿರೀಕ್ಷೆಗೂ ಮೀರಿ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಪ್ರಣಾಳಿಕೆಯಾಗಿ ಬಳಸಿಕೊಂಡು ಮುನ್ನಡೆಯಲು ಕಾರಣವಾಗುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಗ್ಯಾರಂಟಿ ಪ್ರಾಧಿಕಾರದ ನೂತನ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆಗಳು ಜನರಿಗೆ ಆರ್ಥಿಕ ಮಟ್ಟವನ್ನು ಹಂತ ಹಂತವಾಗಿ ಸುಧಾರಿಸಲು ಸಹಕಾರಿಯಾಗಿವೆ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ದೈನಂದಿನ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಆಧಾರವಾಗುವ ಜೊತೆಗೆ ಸ್ವಾವಲಂಬಿ ಬದುಕಿಗೆ ಪೂರಕವಾಗಿವೆ ಎಂದರು.ಬಾಲ್ಯದಿಂದಲೇ ಸಂಕಷ್ಟ ದಿನಗಳನ್ನು ಅರಿತಿದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊಟ್ಟಮೊದಲು ಅನ್ನಭಾಗ್ಯ ಜಾರಿಗೆ ತಂದು ಜನ ಹಸಿವಿನಿಂದ ಬಳಲದಂತೆ ಆದ್ಯತೆ ಕೊಟ್ಟರು. ಇದರಿಂದ ರಾಜ್ಯದ ಕೋಟ್ಯಂತರ ಜನರು ಇಂದಿಗೂ ಮುಖ್ಯ ಮಂತ್ರಿಯವರನ್ನು ಸ್ಮರಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ನಾಡಿನ ಹಲವಾರು ಮಹಿಳೆಯರು ಹಣಕಾಸಿನ ಒತ್ತಡದಿಂದ ತೀರ್ಥ ಕ್ಷೇತ್ರಗಳಿಗೆ ತೆರಳಲು ಅಡ್ಡಿಯಾಗುತ್ತಿತ್ತು. ಇದೀಗ ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿ ಅನೇಕ ಪುಣ್ಯ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಸಾರಿಗೆ ಸಂಸ್ಥೆಗೆ ನಷ್ಟವೇನಿಲ್ಲ. ದೇಗುಲದ ಕಾಣಿಕೆ ಹುಂಡಿಯಿಂದ ಮುಜರಾಯಿ ಇಲಾಖೆಗೆ ದ್ವಿಗುಣ ಲಾಭವಾಗಿದೆ ಎಂದರು.ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಳಿಸಿ ಯಶಸ್ವಿಗೊಂಡ ಬಳಿಕ ದೇಶದಲ್ಲಿ ನಡೆದಂಥ ಹಲವಾರು ಚುನಾವಣೆಗಳಲ್ಲಿ ಕಾಂಗ್ರೆಸ್ ತಂತ್ರಗಾರಿಕೆ ಸೂತ್ರ ಬಳಸುತ್ತಿದೆ. ಈ ಯೋಜನೆಗಳು ಜನಸಾಮಾನ್ಯರ ಒಳಿತಿಗೂ ಪೂರಕವಾದ ಕಾರಣ ಬಹುತೇಕ ರಾಜಕೀಯ ಪಕ್ಷಗಳು ಕಾಂಗ್ರೆಸ್ ನಡೆಯನ್ನೇ ಪಾಲಿಸುತ್ತಿವೆ ಎಂದು ಹೇಳಿದರು.
ರಾಜ್ಯ ಸರ್ಕಾರ ವೈಯಕ್ತಿಕವಾಗಿ ಹಣ ವ್ಯಯಿಸಿಲ್ಲ. ಬದಲಾಗಿ ಜನರಿಂದ ಸಂಗ್ರಹಗೊಂಡ ತೆರಿಗೆ ಹಣವನ್ನು ಜನರಿಗಾಗಿಯೇ ವ್ಯಯಿಸುವ ಮೂಲಕ ಯಾವುದೇ ಏಜೆಂಟರಿಲ್ಲದೇ ನೇರವಾಗಿ ಖಾತೆಗೆ ಜಮಾವಣೆ ಮಾಡುತ್ತಿದೆ. ಜೊತೆಗೆ ಅಭಿವೃದ್ಧಿ ವಿಚಾರದಲ್ಲೂ ಸರ್ಕಾರ ಹಿಂದೇಟು ಹಾಕದೇ ಕ್ಷೇತ್ರದ ಅಭಿವೃದ್ಧಿಗೆ ₹25 ಕೋಟಿ ಮಂಜೂರು ಮಾಡಲು ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು ಸದ್ಯದಲ್ಲೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.ಭದ್ರಾ ಕಾಡ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್ ಮಾತನಾಡಿ, ಗ್ಯಾರಂಟಿ ಬಗ್ಗೆ ಕೆಲವು ವಿರೋಧ ಪಕ್ಷದ ಮುಖಂಡರು ಬಿಟ್ಟಿ ಭಾಗ್ಯವೆಂದು ಅಪಹಾಸ್ಯದಲ್ಲಿ ತೊಡಗಿವೆ. ಬಡವರಿಗೆ ಮುಡಿಪಿಟ್ಟ ಯೋಜನೆಗಳು ವಿರೋಧಿಸುವವರು ಸೌಲಭ್ಯವನ್ನು ಸರ್ಕಾರಕ್ಕೆ ವಾಪಸ್ ಮಾಡಲಿ. ಈ ಹೊರತಾಗಿ ಪುಕ್ಕಟ್ಟೆ ಪ್ರಚಾರಕ್ಕೆ ಟೀಕಿಸುವುದು ಸರಿಯಲ್ಲ ಎಂದರು.
ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಗ್ಯಾರಂಟಿ ಸೌಲಭ್ಯಗಳು ಜಿಲ್ಲೆಯಲ್ಲಿ ಯಶಸ್ವಿಗೊಳ್ಳಲು ಜನಪ್ರತಿನಿಧಿಗಳು, ಅಧಿಕಾರಿಗಳೇ ನೇರ ಕಾರಣ. ಹಾಗಾಗಿ ರಾಜ್ಯದಲ್ಲೇ ಗ್ಯಾರಂಟಿ ತಲುಪಿಸುವಲ್ಲಿ ಜಿಲ್ಲೆ ಮೊದಲ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.ರಾಜ್ಯ ಪರಿಸರ ತಜ್ಞರ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ರಾಜ್ಯದ ಜನತೆಗೆ ತಾರತಮ್ಯ ಎಸಗದೇ ಎಲ್ಲರೂ ಒಂದೇ ಎಂಬ ಮನೋಭಾವದಿಂದ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವ ಕಾರ‍್ಯ ಮಾಡಲಾಗಿದೆ. ಈ ತಂತ್ರಗಾರಿಕೆ ಯನ್ನು ಹಲವಾರು ರಾಜ್ಯಗಳಲ್ಲಿ ಬಳಸಿಕೊಳ್ಳಲು ರಾಜ್ಯದಲ್ಲಿನ ಹಿರಿಯ ಕಾಂಗ್ರೆಸ್ಸಿಗರು ಕಾರಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ. ಮಲ್ಲೇಶ್, ಅತ್ಯಂತ ದೊಡ್ಡ ಜವಾಬ್ದಾರಿಯನ್ನು ಸರ್ಕಾರ ಹೊರೆಸಿರುವ ಕಾರಣ ತಾಲೂಕಿನ ಹೋಬಳಿ, ಗ್ರಾಮಗಳಿಗೆ ತೆರಳಿ ಸೌಲಭ್ಯದಿಂದ ವಂಚಿತರಾಗಿರುವ ಫಲಾನುಭವಿಗಳಿಗೆ ಸೇರ್ಪಡಿಸುವ ಕಾರ್ಯಕ್ಕೆ ಮುಂದಾಗುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಡಿ.ಎಲ್. ವಿಜಯ್‌ಕುಮಾರ್, ರೇಖಾ ಹುಲಿಯಪ್ಪಗೌಡ, ತಾಲೂಕು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಅನ್ಸರ್ ಆಲಿ, ಸದಸ್ಯರಾದ ವಿಂದ್ಯಾ, ಜಯಂತಿ, ಗೌಸ್ ಮೊಹಿಯುದ್ದೀನ್, ನಾಗೇಶ್ ರಾಜ್ ಅರಸ್, ಧರ್ಮಯ್ಯ, ಕೃಷ್ಣ ಉಪಸ್ಥಿತರಿದ್ದರು. 20 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕು ಪಂಚಾಯಿತಿ ಆವರಣದಲ್ಲಿ ತಾಳೂಕು ಗ್ಯಾರಂಟಿ ಪ್ರಾಧಿಕಾರದ ನೂತನ ಕಚೇರಿಯನ್ನು ಶಾಸಕ ಎಚ್.ಡಿ. ತಮ್ಮಯ್ಯ ಸೋಮವಾರ ಉದ್ಘಾಟಿಸಿದರು. ಗಾಯತ್ರಿ ಶಾಂತೇಗೌಡ, ರೇಖಾ ಹುಲಿಯಪ್ಪಗೌಡ, ಬಿ.ಎಚ್. ಹರೀಶ್, ಎ.ಎನ್. ಮಹೇಶ್ ಇದ್ದರು.
-----------------------