ಗ್ಯಾರಂಟಿ ಯೋಜನೆಗಳು ಜನರ ಪಾಲಿಗೆ ವರದಾನ: ಬಸವರಾಜ ರಾಯರಡ್ಡಿ

KannadaprabhaNewsNetwork | Published : Dec 10, 2024 12:30 AM

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಜನರ ಪಾಲಿಗೆ ವರದಾನವಾಗಿವೆ.

ಯಲಬುರ್ಗಾ-ಕುಕನೂರು ಬ್ಲಾಕ್‌ಗಳ ಅಧ್ಯಕ್ಷರು, ವಿವಿಧ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಯಲಬುರ್ಗಾ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಜನರ ಪಾಲಿಗೆ ವರದಾನವಾಗಿವೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಯಲಬುರ್ಗಾ ಹಾಗೂ ಕುಕನೂರು ಬ್ಲಾಕ್‌ಗಳಿಗೆ ನೂತನವಾಗಿ ನೇಮಕಗೊಂಡ ಅಧ್ಯಕ್ಷರು ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇಂತಹ ಬೃಹತ್ ಗಾತ್ರದ ಮೊತ್ತದಲ್ಲಿ ಯೋಜನೆಗಳನ್ನು ಜಾರಿಗೊಳಿಸಿದ ಸರ್ಕಾರ ಯಾವುದೂ ಇಲ್ಲ. ಅದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾತ್ರ. ಇವುಗಳಿಗೆ ಯಾವ ಹಣಕಾಸಿನ ಕೊರತೆಯಿಲ್ಲ ಎಂದರು.

ರಾಜ್ಯದ ಜನತೆ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಗೆಲುವು ನೀಡುವ ನೀಡಿ ೧೩೮ ಸ್ಥಾನಗಳನ್ನು ಪಡೆಯುವ ಮೂಲಕ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಗಟ್ಟಿಯಾಗಿದ್ದು, ಬಿಜೆಪಿಯವರು ಅಧಿಕಾರ ಕಳೆದುಕೊಂಡು ವಿಲವಿಲ ಒದ್ದಾಡುತ್ತಿದ್ದಾರೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು, ಹುಮ್ಮಸ್ಸು ಕಡಿಮೆಯಾಗಿದೆ. ಮೋದಿಯವರು ಹತ್ತು ವರ್ಷದಲ್ಲಿ ಯಾವ ಅಭಿವೃದ್ಧಿಯನ್ನು ಮಾಡಿಲ್ಲ. ಕೇವಲ ಅವರು ತಮ್ಮ ಮಾತುಗಳನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ದೇಶದ ಜನರಿಗೆ ಸುಳ್ಳು ಹೇಳಲು ಹೊರಟಿದ್ದಾರೆ. ಜನರು ಸತ್ಯವನ್ನು ಅರಿತುಕೊಂಡಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು.

2025ರ ಫೆಬ್ರವರಿ ಕೊನೆಯ ವಾರದಲ್ಲಿ ಮಂಡನೆಯಾಗುವ ರಾಜ್ಯದ ಬಜೆಟ್ ನಾಲ್ಕು ಲಕ್ಷ ಕೋಟಿ ರೂ. ಗಾತ್ರದ್ದಾಗಿದೆ. ಈಗಾಗಲೇ ಸಿಎಂ ಜತೆ ಚರ್ಚಿಸಿ ಸಾಕಷ್ಟು ಸಲಹೆ ನೀಡಿದ್ದೇನೆ. ನಾನು ಶಾಸಕನಾಗಿ ಒಂದುವರೆ ವರ್ಷದಲ್ಲಿ ತಾಲೂಕಿನಲ್ಲಿ ಕುಡಿವ ನೀರು ಯೋಜನೆ, ಕೆರೆಗಳಿಗೆ ನೀರು ತುಂಬಿಸುವುದು, ೧೫ ಬಸ್ ನಿಲ್ದಾಣ, ಯಲಬುರ್ಗಾ-ಕುಕನೂರು ಪಟ್ಟಣಕ್ಕೆ ಬೈಪಾಸ್ ರಸ್ತೆ ನಿರ್ಮಾಣ, ಕುಕನೂರಿಗೆ ₹೪೨ ಕೋಟಿಯಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ, ಕಾತ್ರಾಳದಿಂದ ಮ್ಯಾದನೇರಿಯವರಿಗೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕೋಟ್ಯಾಂತರ ರೂಗಳ ಅನುದಾನವನ್ನು ತಂದು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ ಎಂದರು.ತಾಲೂಕಿನಲ್ಲಿ ಪಕ್ಷವನ್ನು ಇನ್ನಷ್ಟು ಬಲವರ್ಧನೆಗೊಳಿಸಲು ಹಿಂದೆ ಇದ್ದ ಅಧ್ಯಕ್ಷ, ಉಪಾಧ್ಯಕ್ಷರನ್ನು ಮುಂದುವರೆಸಲಾಗಿದೆ. ಇನ್ನೂ ಪಕ್ಷದ ನಾನಾ ಸಮಿತಿಗಳಲ್ಲಿ ಯುವಕರಿಗೆ, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನೂತನವಾಗಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳು ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟಿಸಿ ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶಕ್ತಿ ಮೀರಿ ಶ್ರಮಿಸಬೇಕು ಎಂದು ಹೇಳಿದರು.

ಮುಖಂಡರಾದ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಪಾಟೀಲ, ಯಂಕಣ್ಣ ಯರಾಶಿ, ರಾಘವೇಂದ್ರ ಜೋಶಿ, ರಾಮಣ್ಣ ಸಾಲಭಾವಿ, ಬಿ.ಎಂ. ಶಿರೂರ, ಅಡಿವೆಪ್ಪ ಭಾವಿಮನಿ, ಸತ್ಯನಾರಾಯಣಪ್ಪ ಹರಪನಹಳ್ಳಿ, ಮಹೇಶ ಹಳ್ಳಿ, ಕೆರಿಬಸಪ್ಪ ನಿಡಗುಂದಿ, ಶರಣಪ್ಪ ಗಾಂಜಿ, ಡಾ. ಶಿವನಗೌಡ ದಾನರಡ್ಡಿ, ಅಂದಾನಗೌಡ ಪೋಲಿಸ್ ಪಾಟೀಲ, ಆನಂದ ಉಳ್ಳಾಗಡ್ಡಿ, ಸುಧೀರ್ ಕೋರ್ಲಳ್ಳಿ, ಸಂಗಮೇಶ ಗುತ್ತಿ, ಹಂಪಯ್ಯ ಹಿರೇಮಠ, ಸಾವಿತ್ರಿ ಗೊಲ್ಲರ್, ಫರಿದಾಬೇಗಂ, ಜಯಶ್ರೀ ಕಂದಕೂರ, ಭಾಗೀರಥಿ ಜೋಗಿನ್, ಶರಣಮ್ಮ ಪೂಜಾರ ಇತರ ಪದಾಧಿಕಾರಿಗಳು, ಮುಖಂಡರು ಇದ್ದರು.

Share this article