ಕಾರ್ಕಳ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಆರ್ಥಿಕವಾಗಿ ಹಿಂದುಳಿದಿರುವ ಅನೇಕ ಕುಟುಂಬಗಳಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿವೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಕಳ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಹೇಳಿದರು.
ಯುವನಿಧಿ ಯೋಜನೆಯಡಿ ತಾಲೂಕಿನಲ್ಲಿ 669 ಮಂದಿ ನೋಂದಾಯಿಸಿಕೊಂಡಿದ್ದು, 589 ಫಲಾನುಭವಿಗಳಿಗೆ ಒಟ್ಟು ₹1.63 ಕೋಟಿ ಅನುದಾನ ಪಾವತಿಸಲಾಗಿದೆ ಎಂದು ಜಿಲ್ಲಾ ಜಾಬ್ ಡೆವಲಪ್ಮೆಂಟ್ ಎಕ್ಸಿಕ್ಯೂಟಿವ್ ಲತಾ ಮಾಹಿತಿ ನೀಡಿದರು.
ಅನ್ನಭಾಗ್ಯ ಯೋಜನೆ ಕುರಿತು ಆಹಾರ ಇಲಾಖೆ ಅಧಿಕಾರಿಗಳು ಮಾತನಾಡಿ, ಬಿಪಿಎಲ್ ಕಾರ್ಡ್ ಹೊಂದಿರುವ ಎಸ್‌ಸಿ/ಎಸ್‌ಟಿ ಸಮುದಾಯದವರು ಕಡ್ಡಾಯವಾಗಿ ಜಾತಿ ಪ್ರಮಾಣಪತ್ರವನ್ನು ನ್ಯಾಯಬೆಲೆ ಅಂಗಡಿಯಲ್ಲಿ ಸಲ್ಲಿಸಬೇಕು ಎಂದು ತಿಳಿಸಿದರು. ಹೊಸ ಬಿಪಿಎಲ್ ಕಾರ್ಡ್ ವಿತರಣೆ ಸದ್ಯ ಸ್ಥಗಿತಗೊಂಡಿದ್ದು, ಮಾರಣಾಂತಿಕ ಕಾಯಿಲೆ ಇರುವವರಿಗೆ ಮಾತ್ರ ಹೊಸ ಕಾರ್ಡ್‌ಗೆ ಅವಕಾಶವಿದೆ ಎಂದು ಹೇಳಿದರು.ಮೆಸ್ಕಾಂ ಎಇಇ ಶಿಲ್ಪಾ ಮಾಹಿತಿ ನೀಡಿ, ಜೂನ್ ತಿಂಗಳಲ್ಲಿ ಗೃಹಜ್ಯೋತಿ ಯೋಜನೆಯಡಿ 41,642 ಫಲಾನುಭವಿಗಳಿಗೆ ₹2.79 ಕೋಟಿ ಅನುದಾನ ಪಾವತಿಸಲಾಗಿದೆ. ತಾಲೂಕಿನಲ್ಲಿ ಶೇ.60ರಷ್ಟು ಪರಿಶೀಲನಾ ಕಾರ್ಯ ಪೂರ್ಣಗೊಂಡಿದ್ದು, ಉಳಿದ ಪರಿಶೀಲನೆಯನ್ನು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ಸಹಕಾರದೊಂದಿಗೆ ಪೂರ್ಣಗೊಳಿಸಲಾಗುವುದು ಎಂದರು.ಗ್ಯಾರಂಟಿ ಯೋಜನೆಗಳ ಪರಿಣಾಮ ಕುರಿತು ಲಂಡನ್ ವಿಶ್ವವಿದ್ಯಾಲಯದ ಅಧ್ಯಯನದ ಭಾಗವಾಗಿ ನಿಟ್ಟೆ ವಿಶ್ವವಿದ್ಯಾಲಯದ ಮೂಲಕ ಕಾರ್ಕಳ ತಾಲೂಕಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು ಎಂದು ಅಜಿತ್ ಹೆಗ್ಡೆ ತಿಳಿಸಿದರು.ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಕೃಷ್ಣಾನಂದ ಸೇರಿದಂತೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.