ಉಡುಪಿ: ನೀಟ್ ಪ್ರಶ್ನೆಪತ್ರಿಕೆ ಹಗರಣ ಮತ್ತು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಆಗ್ರಹಿಸಿದ್ದಾರೆ.ಉಡುಪಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭ ಚಾಯ್ ಪೇ ಚರ್ಚೆ ಮಾಡುವ ಪ್ರಧಾನಿ ಅವರು ದೆಹಲಿಯಲ್ಲಿ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಸೇರಿ ಪರೀಕ್ಷೆಯ ಅಕ್ರಮಗಳ ಬಗ್ಗೆ ಚರ್ಚೆ ಮಾಡೋಣ ಎಂದು ಕರೆದರೆ ಬರಲಿಲ್ಲ. ವಾರಗಟ್ಟಲೇ ಉಪವಾಸ ಸತ್ಯಾಗ್ರಹ ನಡೆಸಿದರೂ ಚರ್ಚೆಗೆ ಪ್ರಧಾನಿಯಾಗಲಿ ಶಿಕ್ಷಣ ಸಚಿವರಾಗಲಿ ಬರಲಿಲ್ಲ, ವಿದ್ಯಾರ್ಥಿಗಳು ಸಂಸತ್ತಿಗೆ ನಾವೇ ಬರುತ್ತೇವೆ ಚರ್ಚೆ ಮಾಡೋಣ ಎಂದರೆ ಅವರ ಮೇಲೆ ಪೊಲೀಸರ ಮೂಲಕ ದೌರ್ಜನ್ಯ ಮಾಡಿದರು. ಅದನ್ನು ಖಂಡಿಸಿ ಪ್ರಧಾನಿ ಮನೆ ಬಳಿ ಪ್ರತಿಭಟನೆ ಮಾಡಿದ ರಾಹುಲ್ ಗಾಂಧಿ ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಿದರು. ಇನ್ನಾದರೂ ಮೋದಿ ಅವರು ತಪ್ಪನ್ನು ಒಪ್ಪಿಕೊಂಡು ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಎಸ್‌ಐಆರ್‌ಗೆ ಕಾಂಗ್ರೆಸ್ ವಿರೋಧ ಇಲ್ಲ, ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡುತ್ತದೆ. ಆದರೆ ಎಸ್‌ಐಆರ್ ಮೂಲಕ ಅಲ್ಪಸಂಖ್ಯಾತರ ಮತಗಳನ್ನು ಕಡಿತಗೊಳಿಸುವ ಬಗ್ಗೆ ಸಂಶಯಗಳಿವೆ. ಅದಕ್ಕೆ ಅವಕಾಶ ನೀಡುವುದಿಲ್ಲ, ಆದ್ದರಿಂದ ಎಸ್‌ಐಆರ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೂತ್ ಮಟ್ಚದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ, ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದರು.
ರಾಮ ಮಂದಿರದ ಹುಂಡಿ ಕಳ್ಳತನ ಪ್ರಕರಣದಿಂದ ಸ್ವತಃ ಮೋದಿ ಅವರ ಗೌರವಕ್ಕೇ ಧಕ್ಕೆಯಾಗಿದೆ ಎಂದು ಮಂಜುನಾಥ ಭಂಡಾರಿ ಹೇಳಿದರು.