ಕುಮಟಾ: ಗ್ಯಾರಂಟಿಗಳ ಬಗ್ಗೆ ಅಂದು ಟೀಕಿಸಿದವರು ಇಂದು ಬಾಯಿ ಮುಚ್ಚಿಕೊಂಡಿದ್ದಾರೆ. ಪ್ರತಿ ಕುಟುಂಬವೂ ಒಂದಿಲ್ಲೊಂದು ಗ್ಯಾರಂಟಿ ಯೋಜನೆಯ ಲಾಭ ಪಡೆದಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಹೇಳಿದರು.
ತಾಪಂ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.ಈ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಗೆ ದೊಡ್ಡ ತೊಡಕೇನೂ ಆಗಿಲ್ಲ. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯಿಂದ ಪ್ರತಿಯೊಬ್ಬರಿಗೂ ಯೋಜನೆಯ ಲಾಭ ಸಿಗುವಂತೆ ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದ್ದೇವೆ ಎಂದರು.
ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಉದ್ದೇಶದಿಂದ ಪ್ರಾಧಿಕಾರ ರಚಿಸಿ ನಮಗೆ ಅಧಿಕಾರ ಕೊಟ್ಟು ವರ್ಷವಾಗುತ್ತಿದೆ. ಎಲ್ಲ ೫ ಗ್ಯಾರಂಟಿ ಭಾಗ್ಯಗಳಲ್ಲಿ ಶೇ.೯೫ಕ್ಕಿಂತ ಹೆಚ್ಚು ಸಾಧನೆ ಮಾಡಿದ್ದೇವೆ. ರಾಜ್ಯದಲ್ಲಿ ನಮ್ಮ ಜಿಲ್ಲೆ ಅತಿಹೆಚ್ಚು ಪ್ರಗತಿ ಸಾಧಿಸಿದೆ. ರೇಷನ್ ಅಂಗಡಿಯಲ್ಲಿ ಕೆಲ ವಯಸ್ಸಾದವರಿಗೆ ಬೆರಳಚ್ಚು ಸರಿಯಾಗಿ ಬಾರದಿದ್ದರೂ ಅಕ್ಷಿಪಟಲ ದಾಖಲೆಯ (ಐ ಮ್ಯಾಪಿಂಗ್) ಮೂಲಕ ರೇಷನ್ ಕೊಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.ಶಕ್ತಿ ಯೋಜನೆಯಲ್ಲಿ ೧೧.೨೦ ಕೋಟಿ ಮಹಿಳೆಯರು ಸಾರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಿದ್ದು ಪ್ರತಿದಿನ ಸರಾಸರಿ ೧.೭೦ ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಪ್ರತಿದಿನ ₹೪೮.೭೧ ಲಕ್ಷನಂತೆ ಒಟ್ಟು ಪ್ರಯಾಣದ ವೆಚ್ಚ ₹೩೨೨.೪೦ ಕೋಟಿ ಸರ್ಕಾರ ಭರಣ ಮಾಡಿದೆ. ಯುವ ನಿಧಿಯಡಿ ೬೪೦೦ ಅರ್ಜಿ ನೋಂದಣಿಯಾಗಿದ್ದು ಅರ್ಹರಾದ ೪೪೬೯ ಮಂದಿ ಫಲಾನುಭವಿಗಳಿಗೆ ಈವರೆಗೆ ₹೮ ಕೋಟಿ ಸಂದಾಯವಾಗಿದೆ ಎಂದರು.
ಗೃಹಜ್ಯೋತಿ ಯೋಜನೆಯಡಿ ಪ್ರಸಕ್ತ ಮಾರ್ಚ್ ೨೦೨೫ ಅಂತ್ಯಕ್ಕೆ ಸಂಬಂಧಿಸಿ ೪,೨೧, ೮೯೭ ಗೃಹಬಳಕೆ ವಿದ್ಯುತ್ ಸ್ಥಾವರಗಳಲ್ಲಿ ೩,೮೯,೭೦೯ ಸ್ಥಾವರಗಳು ನೋಂದಣಿಯಾಗಿದ್ದವು. ಪ್ರತಿ ತಿಂಗಳಿಗೆ ಸರಾಸರಿ ₹೧೭.೨೦ ಕೋಟಿಯಂತೆ ಆಗಸ್ಟ್ ೨೦೨೩ ರಿಂದ ಈವರೆಗೆ ಒಟ್ಟು ₹೩೨೬.೮೬ ಕೋಟಿ ಸಹಾಯಧನ ನೀಡಲಾಗಿದೆ ಎಂದರು.ಜಿಲ್ಲೆಯಲ್ಲಿ ೩,೬೧,೪೮೧ ಪಡಿತರ ಚೀಟಿದಾರರಿದ್ದು, ೩,೩೫,೦೪೫ ಪಡಿತರ ಚೀಟಿದಾರರು ಗೃಹಲಕ್ಷ್ಮೀ ಯೋಜನೆಗೆ ಅರ್ಹರಿದ್ದರು. ಈ ಪೈಕಿ ೩,೩೪,೬೬೨ ಪಡಿತರ ಚೀಟಿ ಕುಟುಂಬಗಳು ನೋದಣಿಯಾಗಿದ್ದು ₹೧೦೯೫ ಕೋಟಿ ಅನುದಾನ ಮಹಿಳೆಯರಿಗೆ ಸಂದಾಯವಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ೩,೧೦,೫೧೨ ಪಡಿತರ ಚೀಟಿಗಳಿಂದ ೧೧,೨೨,೪೯೪ ಪಡಿತರ ಚೀಟಿದಾರರಿಗೆ ಡಿಬಿಟಿ ಮೂಲಕ ಜುಲೈ ೨೦೨೩ ರಿಂದ ಮಾರ್ಚ ೨೦೨೫ ರವರೆಗೆ ₹೨೯೮.೮೯ ಕೋಟಿ ಸಂದಾಯವಾಗಿದೆ. ೧೨.೯೬ ಲಕ್ಷ ಟನ್ ಅಕ್ಕಿ ಸರಬರಾಜು ಆಗಿದೆ ಎಂದು ಸತೀಶ ನಾಯ್ಕ ತಿಳಿಸಿದರು.
ಸಮಿತಿಯ ತಾಲೂಕಾಧ್ಯಕ್ಷ ಅಶೋಕ ಗೌಡ, ಸದಸ್ಯರಾದ ರಾಜೇಂದ್ರ ರಾಣೆ, ಹನುಮಂತ ಪಟಗಾರ, ಅನಂತ ನಾಯಕ, ಗೀತಾ ಭಂಡಾರಕರ, ಭವ್ಯಾ ಗಾವಡಿ, ರವಿ ಪಟಗಾರ, ನಾರಾಯಣ ಉಪ್ಪಾರ, ಲಕ್ಷ್ಮೀ ವಾಲೇಕರ, ಬಾಲಕೃಷ್ಣ ನಾಯಕ, ಶಂಭು ನಾಯ್ಕ ರಮೇಶ ನಾಯ್ಕ, ಅಬು ಮಹಮದ್ ಮಿರ್ಜಾನ ಇದ್ದರು.