ಆರ್ಥಿಕ ಸಮಾನತೆಗಾಗಿ ಗ್ಯಾರಂಟಿ ಯೋಜನೆಗಳು ಜಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : May 13, 2025, 01:16 AM IST
50 | Kannada Prabha

ಸಾರಾಂಶ

ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೆ ನ್ಯಾ.ನಾಗಮೋಹನ್ ದಾಸ್ ಅವರ ಏಕ ಸದಸ್ಯ ಆಯೋಗವನ್ನು ರಚಿಸಿ ಸಮೀಕ್ಷೆ ಮಾಡಿಸಲಾಗುತ್ತಿದೆ. ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯಬೇಕು. ಜನರು ಅಭಿವೃದ್ದಿ ಹೊಂದಲು ಆರ್ಥಿಕವಾಗಿ ಸಭಲರಾಗಲು ಶಿಕ್ಷಣ ಅತಿ ಮುಖ್ಯ. ನಾವೆಲ್ಲರೂ ಮನುಷ್ಯರಾಗಿ ಬದುಕಬೇಕು. ಆಗ ನಾವು ಬುದ್ಧ ಬಸವ ಅಂಬೇಡ್ಕರ್ ಗಾಂಧಿ ಅವರಿಗೆ ಗೌರವ ನೀಡಿದಂತೆ ಆಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಆರ್ಥಿಕ ಸಮಾನತೆಯನ್ನು ತಂದರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಆರ್ಥಿಕ ಸಮಾನತೆಯನ್ನು ತರಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಎಚ್.ಡಿ.ಕೋಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ, ಡಾ.ಅಂಬೇಡ್ಕರ್ ಪುತ್ಥಳಿ ಅನಾವರಣ, 2569ನೇ ಬುದ್ಧ ಪೂರ್ಣಿಮೆ ಭಗವಾನ್ ಬುದ್ಧ ಜಯಂತಿ ಹಾಗೂ ಎಚ್.ಡಿ.ಕೋಟೆ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೆ ನ್ಯಾ.ನಾಗಮೋಹನ್ ದಾಸ್ ಅವರ ಏಕ ಸದಸ್ಯ ಆಯೋಗವನ್ನು ರಚಿಸಿ ಸಮೀಕ್ಷೆ ಮಾಡಿಸಲಾಗುತ್ತಿದೆ. ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯಬೇಕು. ಜನರು ಅಭಿವೃದ್ದಿ ಹೊಂದಲು ಆರ್ಥಿಕವಾಗಿ ಸಭಲರಾಗಲು ಶಿಕ್ಷಣ ಅತಿ ಮುಖ್ಯ. ನಾವೆಲ್ಲರೂ ಮನುಷ್ಯರಾಗಿ ಬದುಕಬೇಕು. ಆಗ ನಾವು ಬುದ್ಧ ಬಸವ ಅಂಬೇಡ್ಕರ್ ಗಾಂಧಿ ಅವರಿಗೆ ಗೌರವ ನೀಡಿದಂತೆ ಆಗುತ್ತದೆ ಎಂದರು.

ನಾವು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಆರ್ಥಿಕವಾಗಿ ಸಬಲವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಕಳೆದ ವರ್ಷ 52 ಸಾವಿರ ಕೋಟಿ ಹಾಗೂ 1 ಲಕ್ಷದ 34 ಸಾವಿರ ಕೋಟಿಯನ್ನು ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡಲಾಗುತ್ತಿದೆ ಎಂದರು.

ಹಸಿವು ಮುಕ್ತ ಮಾಡಲು ಅನ್ನ ಭಾಗ್ಯ ಯೋಜನೆ, ರಾಜ್ಯದ 1.2 ಕೋಟಿ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000, ಗೃಹ ಜ್ಯೋತಿ ಯೋಜನೆಯಡಿ 200 ಯುನಿಟ್ ವರೆಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ಯುವ ನಿಧಿ ಯೋಜನೆಯಡಿ ಪದವಿ ಪಡೆದ ನಿರುದ್ಯೋಗಿಗಳಿಗೆ 3000 ಹಾಗೂ ಡಿಪ್ಲೊಮಾ ಪಡೆದ ನಿರುದ್ಯೋಗಿಗಳಿಗೆ 1500 ರೂ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಭಾರತ ವೈವಿಧ್ಯಮಯವಾದ ದೇಶ. ಬಹುತ್ವ ದಿಂದ ಕೂಡಿರುವ ದೇಶದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ದೇಶಕ್ಕೆ ಅಪಾಯ ಬಂದರೆ ನಾವೆಲ್ಲರೂ ಒಟ್ಟಾಗಿ ನಿಲ್ಲುತ್ತೇವೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಶ್ರೇಷ್ಟವಾದ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿ ನನ್ನನ್ನು ಟೀಕೆ ಮಾಡಿ ಎಂದು ಜನರಿಗೆ ತಿಳಿಸಿದ್ದಾರೆ ಎಂದರು.

ಅಭಿವೃದ್ಧಿಗೆ ಅವಕಾಶ:

ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಮಾತನಾಡಿ, ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಈ ಭಾಗದ ಜಿಲ್ಲೆಗಳ ಅಭಿವದ್ಧಿಗೆ 3400 ಕೋಟಿಗಳನ್ನು ನೀಡಲಾಗಿದೆ. ಅನಿಲ್ ಚಿಕ್ಕಮಾದು ಅವರು ಉತ್ತಮವಾಗಿ ತಾಲೂಕಿನ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದೇ ರೀತಿ ಅಭಿವೃದ್ದಿ ಮಾಡಲು ಮುಂದೆಯೂ ತಮ್ಮ ಅವಕಾಶ ಅತಿ ಮುಖ್ಯ ಎಂದರು.

ಗ್ಯಾರಂಟಿ ಯೋಜನೆಗಳು ಜನರ ಜೀವನ ಮಟ್ಟವನ್ನು ಸುಧಾರಿಸಿವೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಯನ್ನು ಮಾಡುತ್ತಿದ್ದೇವೆ ಎಂದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಡಾ. ಅಂಬೇಡ್ಕರ್ ಅವರು ತೋರಿಸಿರುವ ಹಾದಿಯಲ್ಲಿ ನಾವು ನಡೆಯಬೇಕು. ನಾವು ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಬೆಳೆಯಬೇಕು. ನಾವು ಹಿಂದೆ ಕಳೆದುಕೊಂಡ ಎಲ್ಲಾ ಹಕ್ಕುಗಳನ್ನು ನಾವು ಪಡೆಯಲು ಶಿಕ್ಷಣವನ್ನು ಪಡೆಯಬೇಕು ಎಂದರು.

ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷರಾದ ಶಾಸಕ ಅನಿಲ್ ಚಿಕ್ಕಮಾದು ಅಧ್ಯಕ್ಷತೆ ವಹಿಸಿದ್ದರು. ಸಂಸದ ಸುನಿಲ್ ಬೋಸ್, ಶಾಸಕರಾದ ಡಿ. ರವಿಶಂಕರ್, ಎಚ್.ಎಂ.ಗಣೇಶ್ ಪ್ರಸಾದ್, ಡಾ.ಡಿ. ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್ ಮೊದಲಾದವರು ಇದ್ದರು.ಎಚ್.ಡಿ.ಕೋಟೆಯ ಹ್ಯಾಂಡ್ ಪೋಸ್ಟ್ ನಿಂದ ಬಾವಲಿವರೆಗೆ ರಸ್ತೆ ವಿಸ್ತರಣೆಗೆ ಕಳೆದ ಬಾರಿ ಅನುದಾನ ನೀಡಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ರಸ್ತೆ ಆಗಿಲ್ಲ. ಈ ಬಾರಿ ಆಗುತ್ತದೆ. ತಾಲೂಕಿನ ಎಲ್ಲಾ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು.

- ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ

ಹೆಚ್ಚು ಗಾರ್ಮೆಂಟ್ಸ್, ಕಾರ್ಖಾನೆಗಳು ಬೇಕು: ಅನಿಲ್ ಚಿಕ್ಕಮಾದು

ಅಧ್ಯಕ್ಷತೆ ವಹಿಸಿದ್ದ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ತಾಲೂಕಿಗೆ ಡಬಲ್ ರಸ್ತೆಗೆ ಮನವಿ ಮಾಡಲಾಗಿದ್ದು, ಇದಕ್ಕೆ 300 ಕೋಟಿ ಅನುದಾನವನ್ನು ನೀಡಿದ್ದಾರೆ. ನಮ್ಮ ತಾಲೂಕಿಗೆ ಹೆಚ್ಚು ಗಾರ್ಮೆಂಟ್ಸ್ ಗಳು ಹಾಗೂ ಕಾರ್ಖಾನೆಗಳು ಬೇಕು. ಇದರಿಂದ ಇಲ್ಲಿನ ಜನರಿಗೆ ಉದ್ಯೋಗಗಳು ದೊರೆಯುತ್ತವೆ. ನಮ್ಮ ತಾಲೂಕಿನಲ್ಲಿ ಹೆಚ್ಚು ಎಸ್ಸಿ, ಎಸ್ಟಿ ಜನಸಂಖ್ಯೆಯಿದ್ದು, ಇಲ್ಲಿಗೆ ಎಸ್ ಸಿಪಿ ಹಾಗೂ ಟಿಎಸ್ ಪಿ ಅನುದಾನ ನೀಡಬೇಕು. ತಾಲೂಕಿಗೆ 5 ಎಕರೆ ಜಾಗ ನೀಡಿ ಅಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿ ಕೊಡಬೇಕು ಎಂದು ಮನವಿ ಮಾಡಿದರು..

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುರ್ತು ಸಂಪುಟ ಸಭೆ ತೀರ್ಮಾನ : ಜಿ ರಾಮ್‌ ಜಿ ವಿರುದ್ಧ 22ರಿಂದ ಸಮರಾಧಿವೇಶನ
ಮುಜರಾಯಿ ದೇಗುಲಗಳಲ್ಲಿ ಇಂದು ಭಕ್ತರಿಗೆ ಎಳ್ಳು-ಬೆಲ್ಲ