ಸಚಿವ ಎಸ್ಸೆಸ್ಸೆಂ, ಸಂಸದೆ ಡಾ.ಪ್ರಭಾ ಬಗ್ಗೆ ಟೀಕೆ ಸಲ್ಲದು: ಕಾಂಗ್ರೆಸ್ ಎಚ್ಚರಿಕೆ

KannadaprabhaNewsNetwork | Published : May 13, 2025 1:16 AM
Follow Us

ಸಾರಾಂಶ

ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರೆ ತಕ್ಕ ಪಾಠ ಕಲಿಸಬೇಕಾದೀತು ಎಂದು ಬಿಜೆಪಿ ರೈತ ಮೋರ್ಚಾ ಮುಖಂಡ ಲೋಕಿಕೆರೆ ನಾಗರಾಜ್‌ಗೆ ಕಾಂಗ್ರೆಸ್ ಪಕ್ಷವು ಎಚ್ಚರಿಸಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರೆ ತಕ್ಕ ಪಾಠ ಕಲಿಸಬೇಕಾದೀತು ಎಂದು ಬಿಜೆಪಿ ರೈತ ಮೋರ್ಚಾ ಮುಖಂಡ ಲೋಕಿಕೆರೆ ನಾಗರಾಜ್‌ಗೆ ಕಾಂಗ್ರೆಸ್ ಪಕ್ಷವು ಎಚ್ಚರಿಸಿದೆ.

ನಗರದಲ್ಲಿ ಸೋಮವಾರ ಪಾಲಿಕೆ ವಿಪಕ್ಷದ ಮಾಜಿ ನಾಯಕ ಎ.ನಾಗರಾಜ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ಸಲ ಸಚಿವರಾಗಿ ಎಸ್.ಎಸ್. ಮಲ್ಲಿಕಾರ್ಜುನ ಏನು ಮಾಡಿದ್ದಾರೆ, ನಿಮ್ಮ ಬಿಜೆಪಿ ಸರ್ಕಾರವಿದ್ದಾಗ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ತುಲನೆ ಮಾಡಿ. ನೀರು, ಸೂರು, ಸೌಲಭ್ಯ, ಅಭಿವೃದ್ಧಿ ಹೀಗೆ ಎಲ್ಲದರಲ್ಲೂ ಎಸ್ಸೆಸ್ಸೆಂಗೆ ನಿಮ್ಮ ಪಕ್ಷ ಯಾವುದರಲ್ಲೂ ಸಾಟಿ ಇಲ್ಲ ಎಂದರು.

ಹುಟ್ಟಿನಿಂದಲೇ ಚಿನ್ನದ ಚಮಚ ಹಿಡಿದು ಹುಟ್ಟಿದವರು ಎಸ್ಸೆಸ್ ಮಲ್ಲಿಕಾರ್ಜುನ. ಭ್ರಷ್ಟಾಚಾರದ ಹಣದಲ್ಲಿ ರಾಜಕೀಯ ಮಾಡುವ ದುಸ್ಥಿತಿ ನಮ್ಮ ನಾಯಕರಿಗೆ ಇಲ್ಲ. ಎಸ್ಸೆಸ್ ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಟೀಕಿಸಿದರೆ ಲೋಕಿಕೆರೆ ನಾಗರಾಜ ದೊಡ್ಡವರಾಗುವುದಿಲ್ಲ. ದಾವಣಗೆರೆ ಬಿಜೆಪಿಯಲ್ಲಿ ಮೂರು ಬಣಗಳಿದ್ದು, ಲೋಕಿಕೆರೆ ನಾಗರಾಜ ಈಗ ಯಾವ ಬಣದಲ್ಲಿದ್ದಾರೆ ಎಂಬುದನ್ನು ಮೊದಲು ಅರಿಯಲಿ. ಶಾಸಕ ಬಿ.ಪಿ.ಹರೀಶ ಜನ್ಮದಿನದ ಬ್ಯಾನರ್ ಎಲ್ಲ ಕಡೆ ಹಾಕಿದ್ದಾರೆ. ಆದರೆ, ಯಾವೊಂದು ಬ್ಯಾನರ್‌ನಲ್ಲೂ ನಾಗರಾಜ ಫೋಟೋ ಸಹ ಇಲ್ಲ ಎಂದು ಟೀಕಿಸಿದರು.

ಪಾಲಿಕೆ ಮಾಜಿ ಸದಸ್ಯ ಜಿ.ಎಸ್.ಮಂಜುನಾಥ ಗಡಿಗುಡಾಳ ಮಾತನಾಡಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ಬಗ್ಗೆ ಮಾತನಾಡುವ ಅರ್ಹತೆಯೂ ನಾಗರಾಜಗೆ ಇಲ್ಲ. ಜಿಲ್ಲಾಸ್ಪತ್ರೆ ಅಭಿವೃದ್ಧಿಗೆ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಸಭೆಯಲ್ಲೇ ಒತ್ತಾಯಿಸಿ, ಪತ್ರ ಬರೆದು ನಿರಂತರ ಪ್ರಯತ್ನ ನಡೆಸಿದ್ದಾರೆ. ಡಾ.ಪ್ರಭಾ ಅಧಿಕಾರವಧಿಯ ಅಲ್ಪಾವಧಿಯಲ್ಲೇ ಸದನದಲ್ಲಿ ಕೇಂದ್ರ ಸರ್ಕಾರಕ್ಕೆ ನಿರಂತರ ಪ್ರಶ್ನೆ ಕೇಳಿ, ಜಿಲ್ಲೆ, ರಾಜ್ಯ, ದೇಶದ ಜನರ ಪರ ಧ್ವನಿ ಎತ್ತಿದ್ದಾರೆ. ಇನ್ನು ನಿಮ್ಮ ಪಕ್ಷದಲ್ಲಿ ದಾಖಲೆ ಅ‍ವಧಿಗೆ ಸಂಸರಾಗಿದ್ದವರು ಸದನದಲ್ಲಿ ತುಟಿ ಬಿಚ್ಚುತ್ತಿರಲಿಲ್ಲ ಎಂದು ಟೀಕಿಸಿದರು.

ಹಿಂದಿನ ಸಂಸದರು ಕೇಂದ್ರ ಸಚಿವರಾಗಿ ದಾವಣಗೆರೆಗೆ ವಿಮಾನ ನಿಲ್ದಾಣ ತರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ವಾರಕ್ಕೊಮ್ಮೆ ಇಲ್ಲಿಗೆ ಬಂದು, ಕಲೆಕ್ಷನ್ ಮಾಡುತ್ತಿದ್ದರು. ಹೀಗೆ ಕಲೆಕ್ಷನ್ ಮಾಡಿ, ನಿಮ್ಮ ಸಂಸದರಿಗೂ ಕೊಡುತ್ತಿದ್ದರು. ಈಗ ಅಂತಹ ಕಾಲ ಇಲ್ಲ. ಲೋಕಿಕೆರೆ ನಾಗರಾಜ ಆರೋಪಿಸಿದಂತೆ ಯಾವುದೇ ಒಬ್ಬ ಅಧಿಕಾರಿ ಹಣ, ಲಂಚ ನೀಡಿದ್ದರೆ ದೂರು ನೀಡಲಿ. ನಾಗರಾಜ ಬಳಿ ಯಾವುದೇ ದಾಖಲೆ, ಸಾಕ್ಷ್ಯಗಳಿದ್ದರೆ ಬಿಡುಗಡೆ ಮಾಡಲಿ. ಸಚಿವ ಎಸ್ಸೆಸ್ಸೆಂ ಜಿಲ್ಲೆಯ ಕೆಲಸ, ಕಾರ್ಯಕ್ಕಾಗಿ ಏಜೆಂಟರನ್ನು ಇಟ್ಟುಕೊಂಡಿಲ್ಲ. ಅಂತಹ ಅಗತ್ಯವೂ ಸಚಿವರಿಗಿಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಉಪ ಮೇಯರ್ ಅಬ್ದುಲ್ ಲತೀಫ್, ನಾಗರಾಜ ಪಾಮೇನಹಳ್ಳಿ, ಉಮೇಶ ಇತರರು ಇದ್ದರು.

- - -

(ಕೋಟ್‌) ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಭ್ರಷ್ಟಾಚಾರದ ಹಣದಿಂದ ಜೀವನ ಮಾಡಬೇಕಾಗಿಲ್ಲ. ದೇಶದಲ್ಲೇ ದಾಖಲೆ ಸಕ್ಕರೆ ಉತ್ಪಾದನೆ ಮಾಡುವ ಸಕ್ಕರೆ ಕಾರ್ಖಾನೆ, ಎರಡು ವೈದ್ಯಕೀಯ ಕಾಲೇಜು ನಡೆಸುವ ಅವರ ಬಗ್ಗೆ ಲೋಕಿಕೆರೆ ನಾಗರಾಜ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ.

- ಕೆ.ಚಮನ್ ಸಾಬ್, ಮಾಜಿ ಮೇಯರ್, ಕಾಂಗ್ರೆಸ್ ಮುಖಂಡ

- - -

-12ಕೆಡಿವಿಜಿ15:

ದಾವಣಗೆರೆಯಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಮುಖಂಡರಾದ ಮಾಜಿ ಮೇಯರ್ ಕೆ.ಚಮನ್ ಸಾಬ್‌ ಇತರರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.