ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕ ಮಟ್ಟ ಸುಧಾರಣೆ : ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ. ಚಿದಾನಂದಪ್ಪ

KannadaprabhaNewsNetwork | Updated : Feb 23 2025, 12:47 PM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರವು ಬಡ ಜನರು, ಮಧ್ಯಮ ವರ್ಗದ ಜನರ ಆರ್ಥಿಕ ಮಟ್ಟ ಸುಧಾರಿಸಲು ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದು ರಾಜ್ಯದಲ್ಲಿ ಆರ್ಥಿಕ ಶಕ್ತಿ ತುಂಬಿದ್ದಾರೆ

ಬಳ್ಳಾರಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಮ್ಮಿಕೊಳ್ಳಲಾಗಿರುವ ಎಲ್‌ಇಡಿ ವಾಹನ ಹಾಗೂ ಬೀದಿ ನಾಟಕದ ಮೂಲಕ ಗ್ಯಾರಂಟಿ ಯೋಜನೆಗಳ ಪ್ರಚಾರ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ. ಚಿದಾನಂದಪ್ಪ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶನಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರವು ಬಡ ಜನರು, ಮಧ್ಯಮ ವರ್ಗದ ಜನರ ಆರ್ಥಿಕ ಮಟ್ಟ ಸುಧಾರಿಸಲು ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದು ರಾಜ್ಯದಲ್ಲಿ ಆರ್ಥಿಕ ಶಕ್ತಿ ತುಂಬಿದ್ದಾರೆ ಎಂದರು.

ರಾಜ್ಯದಲ್ಲಿ ಸರ್ಕಾರದ ಪ್ರಮುಖ ಐದು ಗ್ಯಾರಂಟಿ ಯೋಜನೆಗಳನ್ನು ಶೇ. 98 ರಷ್ಟು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಶೇ.100 ರಷ್ಟು ಅನುಷ್ಠಾನಗೊಳಿಸಲು ಯೋಜನೆಗಳ ಅರಿವು ಅಗತ್ಯವಾಗಿದೆ. ಹಾಗಾಗಿ ಎಲ್‌ಇಡಿ ವಾಹನವು ಬೀದಿ ನಾಟಕ ಕಾರ್ಯಕ್ರಮ ಆಯೋಜಿಸುವ ಕಲಾವಿದರ ತಂಡದೊಂದಿಗೆ ಜಿಲ್ಲೆಯ ಆಯ್ದ 20 ಗ್ರಾಮಗಳಲ್ಲಿ ಸಂಚರಿಸಿ ಗ್ರಾಮೀಣ ಭಾಗದ ಜನರಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದು ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಯಾವುದೇ ಮಧ್ಯವರ್ತಿಗಳಿಲ್ಲದೇ ಜನರಿಗೆ ತಲುಪಿಸಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ಯಾರೂ ವಂಚಿತರಾಗಬಾರದು. ಅರ್ಹರು ಸದುಪಯೋಗ ಪಡೆದುಕೊಳ್ಳಬೇಕು. ಇದಕ್ಕಾಗಿ ಗ್ಯಾರಂಟಿ ಯೋಜನೆಗಳ ಕುರಿತ ಅರಿವು ಬಹುಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಮೂಡಿಸಬೇಕು ಎಂದರು.

ಗೃಹಲಕ್ಷ್ಮೀ ಯೋಜನೆಯ ಕಳೆದ 16 ತಿಂಗಳ ಎಲ್ಲ ಕಂತಿನ ಹಣವನ್ನು ಗೃಹಲಕ್ಷ್ಮೀಯರ ಖಾತೆಗೆ ಜಮೆ ಮಾಡಲಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕಳೆದ 3 ತಿಂಗಳ ಗೃಹಲಕ್ಷಿ ಹಣ ಬಂದಿಲ್ಲ. ಈಗಾಗಲೇ ಮುಖ್ಯಮಂತ್ರಿ, ಇಲಾಖಾ ಸಚಿವರು ಮುಂದಿನ ದಿನಗಳಲ್ಲಿ ಹಣ ಪಾವತಿಸುವ ಕುರಿತು ತಿಳಿಸಿದ್ದಾರೆ ಎಂದರು.

ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯ ಬದಲಾಗಿ ನೀಡುವ ಹಣವು ಜಮೆಯಾಗಿಲ್ಲ. ಬಾಕಿ ಇರುವ ಹಣ ಪಾವತಿ ಜತೆಗೆ ಮುಂದಿನ ತಿಂಗಳಿನಿಂದ ಎಲ್ಲ ಅರ್ಹ ಪಡಿತರಿಗೆ ಕೊಟ್ಟ ಮಾತಿನಂತೆ 10 ಕೆಜಿ ಅಕ್ಕಿ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ಕಡ್ಡಾಯವಾಗಿ ತಲುಪಿಸಬೇಕೆಂಬ ಬದ್ಧತೆ ಹೊಂದಿದೆ. ತಲುಪಿಸುವಲ್ಲಿ ವಿಳಂಬವಾಗಬಹುದು. ಈ ಕುರಿತು ಜನರು ಉಹಾಪೋಹಗಳಿಗೆ ಕಿವಿಕೊಡಬಾರದು ಎಂದರು.

ಈ ವೇಳೆ ಮುಖಂಡರಾದ ವೆಂಕಟೇಶ್ ಹೆಗಡೆ, ಲಿಂಗರಾಜ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಥಮ ದರ್ಜೆ ಸಹಾಯಕ ವಿ.ಸಿ. ಗುರುರಾಜ, ಸಿಬ್ಬಂದಿ ಹನುಮೇಶ್. ಎಚ್., ಕಲಾವಿದರಾದ ಎಸ್.ಎಂ. ಹುಲುಗಪ್ಪ, ಎಚ್.ಜಿ. ಸುಂಕಪ್ಪ, ಡಿ.ಹೇಮಂತ್, ಎರ‍್ರಿಸ್ವಾಮಿ, ಹನುಮಯ್ಯ ತಿಮ್ಮಲಾಪುರ ಇತರರಿದ್ದರು.

Share this article