ಗ್ಯಾರಂಟಿ ಯೋಜನೆಗಳೇ ಈ ಬಾರಿ ಗೆಲುವಿಗೆ ಸಹಕಾರಿ: ಗೀತಾ

KannadaprabhaNewsNetwork | Published : Apr 12, 2024 1:01 AM

ಸಾರಾಂಶ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳೆ ನಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಜನಸಾಮಾನ್ಯರನ್ನು ನೇರವಾಗಿ ತಲುಪುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಈ ಬಾರಿಯ ಚುನಾವಣೆಯಲ್ಲಿ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ತಿಳಿಸಿದರು.

ಗುರುವಾರ ತಾಲೂಕಿನ ಮುದ್ದನಹಳ್ಳಿ, ಬೇಗೂರು, ಹೊಸೂರು, ಜಕ್ಕಿನಕೊಪ್ಪ, ಕಾಗಿನಲ್ಲಿ, ಕಿಟ್ಟದಹಳ್ಳಿ, ಮಟ್ಟಿಕೋಟೆ, ನೆಲವಾಗಿಲು, ಅಂಬಾರಗೊಪ್ಪ, ಹಾರೋಗೊಪ್ಪ ಮತ್ತಿತರ ಕಡೆ ಬಿರುಸಿನ ಚುನಾವಣಾ ಪ್ರಚಾರಸಭೆಯಲ್ಲಿ ಅವರು ಮಾತನಾಡಿದ ಅವರು ಇನ್ನು, ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮನೆ ಇಲ್ಲ ಅವರು ಬೆಂಗಳೂರು ಮೂಲದವರು ಗೀತಾರವರು ಜನಸಾಮಾನ್ಯರಿಗೆ ಸಿಗುವುದಿಲ್ಲ ಎಂದು ಕೆಲವರು ಟೀಕಿಸುತ್ತಿದ್ದು, ಮತದಾರರು ಈ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಈ ರೀತಿ ಟೀಕಿಸುವವರಿಗೂ ಬೆಂಗಳೂರಿನಲ್ಲಿ ಮನೆಗಳಿವೆ. ಜನ ಸೇವೆ ಮಾಡಲು ಬೇಕಿರುವುದು ಮನೆಯಲ್ಲ ಮಾನವೀಯ ಮೌಲ್ಯ, ಅದು ನನಗಿದೆ ಎಂದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಎಲ್ಲ ಭರವಸೆಯನ್ನು ಈಡೇರಿಸಿದ್ದು ಈ ದಿಸೆಯಲ್ಲಿ ನೀಡಿದ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ರೂ.2 ಸಾವಿರ, ಉಚಿತ ಬಸ್ ಪ್ರಯಾಣ,ಉಚಿತ ವಿದ್ಯುತ್, ಅನ್ನಭಾಗ್ಯ, ಉದ್ಯೋಗ ನಿಧಿ ಯೋಜನೆಯನ್ನು ಜಾರಿಗೊಳಿಸಿ ನುಡಿ ದಂತೆ ನಡೆದ ಹೆಗ್ಗಳಿಕೆಯನ್ನು ಹೊಂದಿದೆ ಎಂದು ತಿಳಿಸಿದ ಅವರು, ಇದೀಗ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಕೇಂದ್ರದಲ್ಲಿ ಅಧಿಕಾರಗಳಿಸಿದಲ್ಲಿ ಪ್ರತಿ ಕುಟುಂಬಕ್ಕೆ 1 ಲಕ್ಷ ರು. ನೀಡುವ ಯೋಜನೆಯನ್ನು ಜಾರಿಗೊಳಿಸಲಿದೆ ಹಗರಣಕ್ಕೆ ಆಸ್ಪದವಿಲ್ಲದ ರೀತಿ ಮದ್ಯವರ್ತಿ ಇಲ್ಲದೆ ನೇರವಾಗಿ ರಾಜ್ಯ ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪುವ ರೀತಿಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಗಳಿಸಿದ್ದಲ್ಲಿ ಜನತೆಗೆ ಯೋಜನೆಗಳು ತಲುಪಲಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿ ರೈತ ವರ್ಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಾಗುವಳಿದಾರರಿಗೆ ಹಕ್ಕುಪತ್ರ ನೀಡದೆ ವಂಚಿಸಲಾಗಿದೆ. ಪಕ್ಕದ ಸೊರಬದಲ್ಲಿ ಶಾಸಕ ಸಹೋದರ ಮಧು 7 ಸಾವಿರ ಅಧಿಕ ಅರ್ಹರಿಗೆ ಹಕ್ಕುಪತ್ರ ವಿತರಿಸಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾದ ಅವಧಿಯಲ್ಲಿ ರೈತರ 50 ಸಾವಿರ ರು. ಸಾಲಮನ್ನಾಗೊಳಿಸಿದ್ದು, ಈ ಬಾರಿ ಪಕ್ಷ ಅಧಿಕಾರ ಗಳಿಸಿದಲ್ಲಿ ಸಂಪೂರ್ಣ ಸಾಲಮನ್ನಾಕ್ಕೆ ರಾಹುಲ್ ಗಾಂಧಿ, ಸೋನಿಯಾ, ಖರ್ಗೆ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿಸಿದರು.

ರೈತರ ಬೆಳೆಗೆ ಪೂರ್ಣ ಬೆಲೆ ದೊರೆಯಬೇಕು ಈ ದಿಸೆಯಲ್ಲಿ ಬೆಂಬಲ ಬೆಲೆ ಘೋಷಣೆ ಅತ್ಯಗತ್ಯವಾಗಿದೆ. ಸಹೋದರ ಮಧು ಜತೆ ಸೇರಿ ಒಟ್ಟಿಗೆ ಕೆಲಸ ಮಾಡುವು ದಾಗಿ ತಿಳಿಸಿದ ಅವರು ಜಿಲ್ಲೆಯ ಬದಲಾವಣೆಗಾಗಿ ನನ್ನನ್ನು ಗೆಲ್ಲಿಸಿ ಬೆಳೆಸುವ ಜವಾಬ್ದಾರಿಯನ್ನು ನೀವು ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಮುಖಂಡ ಆಯನೂರು ಮಂಜುನಾಥ್ ಮಾತನಾಡಿ, ಸತತ 40 ವರ್ಷದಿಂದ ಅಧಿಕಾರ ನಡೆಸಿದವರು ಗ್ರಾಮವನ್ನು ಬರಗಾಲ ಪ್ರದೇಶವಾಗಿಸಿದ್ದಾರೆ. ತೋಟ ಗದ್ದೆಗಳು ಹಸಿರಾಗಲು ಬಂಗಾರಪ್ಪ ನೀಡಿದ ಉಚಿತ ವಿದ್ಯುತ್ ಕಾರಣವಾಗಿದೆ. ದೂರದಲ್ಲಿನ ರಾಮಮಂದಿರ ನಿರ್ಮಾಣದ ಮೂಲಕ ಮತ ಕೇಳುವ ಬಿಜೆಪಿ ಯವರು ಇಲ್ಲಿನ ದುರ್ಗಮ್ಮ, ಮಾರಮ್ಮ, ಚೌಡಮ್ಮ, ಸೇವಾಲಾಲ್ ದೇವಸ್ಥಾನ ಕಟ್ಟಲಿಲ್ಲ. ಆರಾಧನಾ ಯೋಜನೆಯಲ್ಲಿ ಬಂಗಾರಪ್ಪನವರು ಸಣ್ಣ ಸಮುದಾಯ ದೇವಸ್ಥಾನಗಳಿಗೆ ಸುಣ್ಣ ಬಣ್ಣ ದುರಸ್ತಿಗೆ ಅನುದಾನ ನೀಡಿದ್ದು, ಈ ಹೆಸರಿನಲ್ಲಿ ಎಂದೂ ಮತ ಕೇಳಲಿಲ್ಲ ಎಂದರು.

ಶ್ರೀ ರಾಮ ತಂದೆಯ ಮಾತು ಉಳಿಸಲು ವನವಾಸಕ್ಕೆ ತೆರಳಿದ್ದು, ಇಂದು ಮಕ್ಕಳು ಉಳಿದುಕೊಳ್ಳಲು ತಂದೆಯನ್ನು ಜೈಲಿಗೆ ಕಳುಹಿಸಿದ್ದಾರೆ. ರಾಮನ ಹೆಸರು ಹೇಳಬಾರದ ಹರಾಮ್ ಮಕ್ಕಳು ಎಂದು ಟೀಕಿಸಿದ ಅವರು, ಇದೀಗ ಎಲ್ಲದಕ್ಕೂ ಉತ್ತರ ನೀಡುವ ಸಂದರ್ಭ ಬಂದಿದೆ ಗೀತಾರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಮುಖಂಡ ಗೋಣಿ ಮಾಲತೇಶ್ ಮಾತನಾಡಿ,ಕಷ್ಟ ಕಾಲದಲ್ಲಿ ಗ್ಯಾರೆಂಟಿ ಯೋಜನೆಗಳು ಜನತೆಯ ಜೀವ ಉಳಿಸಿದೆ ಸರ್ಕಾರದ ಋಣ ತೀರಿಸಲು ಗೀತಾರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಕೆಪಿಸಿಸಿ ಪ್ರ.ಕಾ ನಾಗರಾಜಗೌಡ ಮಾತನಾಡಿ,ಚುನಾವಣಾ ಪೂರ್ವದಲ್ಲಿ ಬಿಜೆಪಿ ನಾಯಕರು ನೀಡಿದ್ದ ಮಾತು ಉಳಿಸಿಕೊಂಡಿಲ್ಲ.ಮಧು ರವರ ಪಾದಯಾತ್ರೆಯಿಂದ ಏತ ನೀರಾವರಿ ಯೋಜನೆ ಜಾರಿಯಾಗಿದೆ ಬಂಗಾರಪ್ಪನವರು ಜಾರಿಗೊಳಿಸಿದ ಯೋಜನೆಗಳು ಮಾತ್ರ ಜೀವಂತವಾಗಿದೆ ಎಂದರು.

ವೇದಿಕೆಯಲ್ಲಿ ಶಿವಮೊಗ್ಗ ಚುನಾವಣಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಮುದ್ದನಹಳ್ಳಿ ಗ್ರಾ.ಪಂ ಅಧ್ಯಕ್ಷ ಸಿದ್ದನಗೌಡ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಂ ಪಾರಿವಾಳದ,ನಗರದ ಮಹಾದೇವಪ್ಪ, ರಾಘವೇಂದ್ರ ನಾಯ್ಕ,ಪಾಲಾಕ್ಷಪ್ಪ ಬಡಗಿ,ಭಂಡಾರಿ ಮಾಲತೇಶ್,ರವಿಗೌಡ್ರು,ವೈ.ಎಚ್ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

Share this article