ಕನ್ನಡಪ್ರಭ ವಾರ್ತೆ ಕಮಲನಗರ
ಕಳೆದ ವಿಧಾನ ಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ನೀಡಿದ್ದ ಭರವಸೆಯಂತೆ 5 ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದು, ನಮ್ಮದು ನುಡಿದಂತೆ ನಡೆದ ಸರ್ಕಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.ಪಟ್ಟಣದ ಅಲ್ಲಮಪ್ರಭು ವೃತ್ತದ ಬಳಿ ಕಾಂಗ್ರೆಸ್ ಪಕ್ಷದ ಪ್ರಚಾರ ನಿಮಿತ್ತ ಹಮ್ಮಿಕೊಂಡ ಬಹಿರಂಗ ಸಭೆಯಲ್ಲಿ ಮಾತನಾಡಿ, ಎಲ್ಲಾ ಜಾತಿ, ಮತ, ಜನಾಂಗದವರನ್ನು ಸಮಾನವಾಗಿ ಕಾಣುವ ಮತ್ತು ಸಮಾನ ಅವಕಾಶ ನೀಡುವ ಏಕೈಕ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆ ಮತ್ತು 5 ಗ್ಯಾರಂಟಿ ಯೋಜನೆಗಳ ಮೂಲಕ ಇದನ್ನು ಸಾಕಾರಗೊಳಿಸುತ್ತಿದೆ ಎಂದರು.
ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿಯವರು ರೈತರ ಖರ್ಚು ದುಪ್ಪಟ್ಟು ಮಾಡಿದ್ದಾರೆ. ದಿನದಿಂದ ದಿನಕ್ಕೆ ರೈತರ ಖರ್ಚು ಹೆಚ್ಚಾಗುತ್ತಿದೆ. ಗೊಬ್ಬರ ಹಾಗೂ ಬೀಜಗಳ ಬೆಲೆ ದುಪ್ಪಟ್ಟಾಗಿದೆ. ಇದರಿಂದ ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ ಎಂದು ದೂರಿದರು.ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರ ಕೊಡುಗೆ ಶೂನ್ಯವಾಗಿದೆ. 10 ವರ್ಷಗಳ ಕಾಲ ಅವಕಾಶ ಸಿಕ್ಕರೂ ಹಾಲಿ ಸಂಸದರು ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಅದಕ್ಕಾಗಿ ಬೀದರ್ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅತ್ಯಂತ ಕಿರಿಯ ವಯಸ್ಸಿನ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆರನ್ನು ಗೆಲ್ಲಿಸಬೇಕು. ಮೇ 7ರಂದು ಎಲ್ಲರೂ ಕಾಂಗ್ರೆಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.
ಸಚಿವ ರಹೀಂಖಾನ್ ಮಾತನಾಡಿ, ಪಕ್ಷದ ಅಭಿಮಾನಿಗಳು, ಕಾರ್ಯಕರ್ತರ ಪ್ರೀತಿ, ವಿಶ್ವಾಸ, ಜನ ಸಾಗರ ನೋಡಿದರೆ ಸಾಗರ ಖಂಡ್ರೆ ಅವರ ಗೆಲುವು ನಿಶ್ಚಿತವಾಗಿದೆ. ಈಗಾಗಲೇ ಕ್ಷೇತ್ರದ ಎಲ್ಲಾ ಕಡೆಯಲ್ಲಿಯೂ ಜನರ ಬೆಂಬಲ ವ್ಯಕ್ತವಾಗಿದೆ ಎಂದರು.ಡಾ. ಭೀಮಸೇನರಾವ ಶಿಂಧೆ, ಆನಂದ ಚವ್ಹಾಣ, ರಾಜಕುಮಾರ ಹಲಬರ್ಗೆ, ಅರುಣ ಪಾಟೀಲ್, ಕೆ. ಪುಂಡಲಿಕರಾವ, ವಿಜಯಕುಮಾರ ಕೌಡಿಯಾಳ, ಝರೇಪ್ಪ ಮಮದಾಪೂರ್, ಪ್ರಕಾಶ ಪಾಟೀಲ್ ಮತ್ತಿತರರು ಇದ್ದರು.