ಕನ್ನಡಪ್ರಭ ವಾರ್ತೆ ವಿಜಯಪುರ
ಬಿಜೆಪಿ ಸರ್ಕಾರ ನೀಡಿದ್ದ 600 ಭರವಸೆಯಲ್ಲಿ 500ಕ್ಕೂ ಹೆಚ್ಚು ಭರವಸೆಗಳು ಹಾಗೆ ಉಳಿದಿವೆ. ಆದರೆ, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.ನಗರದ ರಾಣಿ ಚನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಲೋಕಸಭೆ ಚುನಾವಣೆಗೆ ಶ್ರೀರಕ್ಷೆಯಾಗಲಿದ್ದು, ವಿಜಯಪುರದಲ್ಲಿ ಕಾಂಗ್ರೆಸ್ ಗೆಲುವು ಶತಃಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶದಲ್ಲಿ ಬಿಜೆಪಿ ದುರಾಡಳಿತದ ಫಲವಾಗಿ ಸಾಮಾನ್ಯರ ಜೀವನ ಸ್ಥಿತಿ ಚಿಂತಾಜನಕವಾಗಿದ್ದು, ಇದೆಲ್ಲ ಮರೆಮಾಚಲು ಬರೀ ಭಾವನಾತ್ಮಕ ವಿಚಾರಗಳನ್ನು ಬಿಜೆಪಿಗರು ಪ್ರಸ್ತಾಪಿಸುತ್ತಿದ್ದಾರೆ. ಜನರಿಗೆ ಇವರ ಆಟ ಅರ್ಥವಾಗಿದೆ ಎಂದು ಟೀಕಿಸಿದರು.ವಿಜಯಪುರ ಲೋಕಸಭೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ೧ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ. ಇದರಲ್ಲಿ ಯಾವ ಸಂಶಯವೂ ಇಲ್ಲ. ಇವರ ಬೆನ್ನಿಗೆ ನಮ್ಮ ಗ್ಯಾರಂಟಿಗಳ ಅಭಯವಿದೆ. ರಾಜ್ಯ ಸರ್ಕಾರದ ಜನಪರ ಆಡಳಿತದ ಬೆಂಬಲವಿದೆ. ಚುನಾವಣೆಯಲ್ಲಿ ಧೈರ್ಯವಾಗಿ ಮತ ಕೇಳುವ ನೈತಿಕ ಹಕ್ಕು ನಮಗಿದೆ. ಪಕ್ಷದ ಎಲ್ಲರೂ ಸಂಘಟಿತರಾಗಿ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ. ಬಹು ವರ್ಷಗಳ ನಂತರ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಗೆಲ್ಲುವ ಕಾಲ ಕೂಡಿ ಬಂದಿದೆ ಎಂದರು.
ಲೋಕಸಭೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಈ ಬಾರಿ ಒಂದು ಅವಕಾಶ ಕರುಣಿಸಬೇಕು ಎಂದು ಕೋರಿದರು.ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇದನ್ನು ನಾವು ಹೇಳುತ್ತಿಲ್ಲ, ಬಿಜೆಪಿಗೆ ಅಡಿಪಾಯ ಹಾಕಿದ ದೊಡ್ಡ ನಾಯಕರೇ ಹೇಳಿದ್ದಾರೆ. ಇದು 140 ಕೋಟಿ ಜನರ ಭವಿಷ್ಯ ನಿರ್ಮಿಸುವ ಚುನಾವಣೆ ಎಂದರು.ಜನರ ಮನಸಿನ ಅರ್ಥ ಮಾಡಿಕೊಂಡು ಸೂಕ್ಷ್ಮದಿಂದ ಈ ಚುನಾವಣೆ ಮಾಡಬೇಕಿದೆ. ಜಿಲ್ಲೆಯಲ್ಲಿ ಅನೇಕ ವ್ಯತ್ಯಾಸ ಇದೆ. ಅದು ನಮ್ಮ ನಮ್ಮ ಚುನಾವಣೆ ಬಂದಾಗ ನೋಡೋಣಾ. ಈಗ ಜವಾಬ್ದಾರಿಯಿಂದ ಚುನಾವಣೆ ಮಾಡೋಣ. ನಾವು ಯಾವ ಪಕ್ಷದಲ್ಲಿ ಇದ್ದೇವೆಂದು ತಿಳಿದು ನಾವು ಚುನಾವಣೆ ಮಾಡಬೇಕು ಎಂದು ತಿಳಿಸಿದರು.ಈ ವೇಳೆ ಶಾಸಕ ವಿಠ್ಠಲ ಕಟಕದೊಂಡ, ಸುನೀಲಗೌಡ ಪಾಟೀಲ, ಅಶೋಕ ಮನಗೂಳಿ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಮಕ್ಬೂಲ್ ಬಾಗವಾನ, ಹಮೀದ್ ಮುಶ್ರೀಫ್, ಕಾಂತಾ ನಾಯಕ, ಜಮೀರ ಭಕ್ಷಿ, ವಿದ್ಯಾರಾಣಿ ತುಂಗಳ, ಸುಭಾಶ ಛಾಯಾಗೋಳ, ಡಿ.ಎಲ್. ಚೌಹಾಣ್, ಮಲ್ಲಣ್ಣ ಸಾಲಿ, ಅರ್ಜುನ ರಾಠೋಡ, ಸುಜಾತಾ ಕಳ್ಳಿಮನಿ, ಎಸ್.ಎಂ.ಪಾಟೀಲ ಗಣಿಹಾರ, ಆರ್.ಆರ್.ಪಾಟೀಲ, ಬಸವರಾಜ ದೇಸಾಯಿ, ಸಿದ್ದು ಗೌಡನವರ, ಈರನಗೌಡ ಬಿರಾದಾರ, ಇಲಿಯಾಸ ಬೋರಾಮಣಿ, ಅಬ್ದುಲ್ ರಜಾಕ್ ಹೊರ್ತಿ, ಕನ್ನಾನ ಮುಶ್ರಿಫ್, ಆರತಿ ಶಹಾಪುರ, ಬಿ.ಎಸ್.ಪಾಟೀಲ ಯಾಳಗಿ, ಟಪಾಲ್ ಎಂಜಿನಿಯರ್ ಸೇರಿದಂತೆ ಮುಂತಾದವರು ಇದ್ದರು. ಸಂಗಮೇಶ ಬಬಲೇಶ್ವರ ಸ್ವಾಗತಿಸಿದರು. ಶಬ್ಬೀರ್ ಜಾಹಗೀರದಾರ ನಿರೂಪಿಸಿದರು.