ಗ್ಯಾರಂಟಿ, ಅಭಿವೃದ್ಧಿ ಕಾರ್ಯ ನಿಲ್ಲಿಸುವ ಪ್ರಶ್ನೆಯೇ ಇಲ್ಲ : ಸಚಿವ ಡಾ.ಎಂಸಿ.ಸುಧಾಕರ್

KannadaprabhaNewsNetwork | Updated : Apr 06 2025, 01:16 PM IST

ಸಾರಾಂಶ

ವಿವಿಧ ಅಗತ್ಯ ಕಾರ್ಯಕ್ರಮಗಳಿಗೆ ಹಣ ಕೊಡುವುದರ ಜೊತೆಗೆ ಹೆಚ್ಚುವರಿ ಗ್ಯಾರಂಟಿಗಳಿಗೆ ಅನುದಾನವನ್ನು ಒದಗಿಸುವಂತಹ ಪ್ರಮಾಣಿಕ ಪ್ರಯತ್ನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ.

 ಬಾಗೇಪಲ್ಲಿ : ವಿವಿಧ ಅಗತ್ಯ ಕಾರ್ಯಕ್ರಮಗಳಿಗೆ ಹಣ ಕೊಡುವುದರ ಜೊತೆಗೆ ಹೆಚ್ಚುವರಿ ಗ್ಯಾರಂಟಿಗಳಿಗೆ ಅನುದಾನವನ್ನು ಒದಗಿಸುವಂತಹ ಪ್ರಮಾಣಿಕ ಪ್ರಯತ್ನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ಹಾಗೂ ಗ್ಯಾರಂಟಿಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂಸಿ.ಸುಧಾಕರ್ ಹೇಳಿದರು.

ಪಟ್ಟಣದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೂತನ ಕೊಠಡಿಗಳ ಉದ್ಘಾಟನೆ ಹಾಗೂ 3 ಕೋಟಿ ರೂ.ಗಳ ವೆಚ್ಚದಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ, 6ಕೋಟಿ ರೂ.ಗಳ ವೆಚ್ಚದಲ್ಲಿ ಪಾಲಿಟೆಕ್ನಿಕ್ ಕಾಲೇಜು ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗೂ 4 ಕೋಟಿ ರೂ.ಗಳ ವೆಚ್ಚದಲ್ಲಿ ಪಟ್ಟಣದಲ್ಲಿ ಬಿಸಿಎಂ ಇಲಾಖೆ ವಿದ್ಯಾರ್ಥಿನಿಲಯಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಹಳೇ ಕೋರ್ಸ್‌ಗಳ ಆರಂಭ

ಮಕ್ಕಳ ಹಾಜರಾತಿಗೆ ಅನುಗುಣವಾಗಿ ಕಾಲೇಜುಗಳ ಅಭಿವೃದ್ದಿ ಮಾಡುವುದಲ್ಲದೆ ಹಂತ ಹಂತವಾಗಿ ಸರ್ಕಾರಿ ಕಾಲೇಜುಗಳಲ್ಲಿ ಹಳೇ ಕೋರ್ಸ್‍ಗಳಾದ ಬಿಎ, ಬಿಕಾಂ ಜೊತೆಗೆ ಬಿಸಿಎ, ಬಿಬಿಎಂ ಇತ್ಯಾಧಿ ಹೊಸ ಹೊಸ ಕೋರ್ಸ್‍ಗಳನ್ನು ಪ್ರಾರಂಭಿಸುವ ಮೂಲಕ ಬಡವರ ಮಕ್ಕಳ ಶೈಕ್ಷನಿಕ ಅಭಿವೃದ್ದಿಗೆ ಒತ್ತು ನೀಡುವಂತಹ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಎಂದರು.

ಹಾಸನದ ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ಮೂರು ಪಾಲಿಟೆಕ್ನಿಕ್ ಕಾಲೇಜು, ಎಂಜಿನಿಯರಿಂಗ್ ಕಾಲೇಜುಗಳಿವೆ. ಶಿಕ್ಷಣ ಇಲಾಖೆ ಸೇರಿದಂತೆ ಲೋಕೋಪಯೋಗಿ ಇಲಾಖೆಗಳ ಸರ್ಕಾರಿ ದುಡ್ಡೆಲ್ಲ ಆ ಜಿಲ್ಲೆಗೆ ಹೋಗುತ್ತಿದೆ ಎಂದು ಹೆಸರು ಹೇಳದೆ ದೇವೇಗೌಡರ ಕುಟುಂಬದ ಕಡೆ ಬೆಟ್ಟುತೋರಿಸಿದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ ಕ್ಷೇತ್ರದ ಸರ್ವತೋಮು ಅಭಿವೃದ್ದಿಯ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದರು. ನಮ್ಮ ಕ್ಷೇತ್ರದ ಅಭಿವೃದ್ದಿಯ ವಿಚಾರದಲ್ಲಿ ನಮ್ಮ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚಿನ ಕಾಳಜಿವಹಿಸಿ ಅಗತ್ಯ ಅಭಿವೃದ್ದಿ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುಧಾನವನ್ನು ನೀಡುವ ಮೂಲಕ ಸಹಕರಿಸುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಮನೀಷಾ ಎನ್ ಪತ್ರಿ, ತಾ.ಪಂ ಇಒ ರಮೇಶ್,ಬಿಇಒ ವೆಂಕಟೇಶ್, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಪ್ರಾಂಶುಪಾಲರಾದ ನಾರಾಯಣ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Share this article