ಸೂಲಿಬೆಲೆ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ವಶವಾಗಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಹೊಸಕೋಟೆ ತಾಲೂಕಿನಲ್ಲಿ ಸುಮಾರು 50 ಸಾವಿರ ಕುಟುಂಬಗಳಿಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ತಲುಪಿವೆ. ಈ ಬಾರಿ ಹೊಸಕೋಟೆ ಕ್ಷೇತ್ರದಲ್ಲಿ ನಾರಿಶಕ್ತಿ ಮೊಳಗಬೇಕು. ಗೆಲುವು ನಮ್ಮದೇ ಎಂಬ ಉದ್ದಟತನದಿಂದ ಯಾವುದೇ ಕಾರ್ಯಕರ್ತರು ಮೈಮರೆಯಬೇಡಿ. ನಿರಂತರ ಆಯಾ ಗ್ರಾಮ, ವಾರ್ಡ್‌ಗಳಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮನದಟ್ಟು ಮಾಡಬೇಕು ಎಂದರು.
ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಯವರು ವಿಶೇಷ ಕಾಳಜಿಯಿಂದ ೬೦೦ ಕೋಟಿ ಅನುದಾನ ನೀಡಿದ್ದಾರೆ, ನಮ್ಮಗಳ ಧ್ವನಿ ಬಲಿಷ್ಠವಾಗಬೇಕಾದರೆ ಈ ಬಾರಿಯ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಿಂದ ೨೫ ಸಾವಿರ ಮತಗಳ ಲೀಡ್ ನೀಡಬೇಕು ಎಂದರು.ಹಿರಿಯ ಮುಖಂಡಬಿ.ಎನ್.ಗೋಪಾಲಗೌಡ ಮಾತನಾಡಿ, ಇಡೀ ದೇಶದಲ್ಲಿ ಬಿಜೆಪಿಗರಿಗೆ ಅಭ್ಯರ್ಥಿಗಳಿಲ್ಲದೆ ಮೋದಿಯ ಮುಖ ನೋಡಿ ಮತ ನೀಡಿ ಎಂದು ಗೋಗರೆಯುವ ಸ್ಥಿತಿ ನಿರ್ಮಾಣವಾಗಿದೆ. ಧರ್ಮಗಳ ನಡುವೆ ಸಂಘರ್ಷವುನ್ನುಂಟು ಮಾಡುವ, ಸಂವಿಧಾನದ ಬಗ್ಗೆ ಅಸಡ್ಡೆ ಮಾಡುವವರ ವಿರುದ್ಧ ನಾವು ಜಾಗೃತರಾಗಬೇಕು. ಈ ಬಾರಿ ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಬೇಕು ಎಂದರು.
ಯುವ ಮುಖಂಡ ಜಿ.ನಾರಾಯಣಗೌಡ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಕೆಲವು ಬೂತ್‌ಗಳಲ್ಲಿ ವ್ಯತ್ಯಾಸವಾಗಿದ್ದು ಈ ಬಾರಿ ಯಾರು ಮೈಮರೆಯಬೇಡಿ. ಇದು ಮುಂದಿನ ಚುನಾವಣೆಗಳಿಗೆ ದಾರಿದೀಪ ಎಂದರು.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಯುವ ಮುಖಂಡ ಜಿ.ನಾರಾಯಣಗೌಡ, ಸೂಲಿಬೆಲೆ ಗ್ರಾಪಂ ಅಧ್ಯಕ್ಷ ಜನಾರ್ದನರೆಡ್ಡಿ, ಲಕ್ಕೊಂಡಹಳ್ಳಿ ಮಂಜುನಾಥ್, ತಾಪಂ ಮಾಜಿ ಸದಸ್ಯ ಡಾ.ಡಿ.ಟಿ.ವೆಂಕಟೇಶ್, ಲಕ್ಕೊಂಡಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಆನಂದ್, ಹಸಿಗಾಳ ರಾಧಾಕೃಷ್ಣ, ಹಾಪ್‌ಕಾಮ್ಸ್ ನಿರ್ದೇಶಕ ಎಂ.ಬಿ.ವೆಂಕಟೇಶ್, ಸಹಕಾರ ಬ್ಯಾಂಕ್ ನಿರ್ದೇಶಕ ಸೈಯದ್ ಮಹಬೂಬ್, ಯನಗುಂಟೆ ರಮೇಶ್, ಸತ್ಯವಾರ ಗೋಪಾಲಪ್ಪ, ಲಾರಿಕೃಷ್ಣಪ್ಪ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ ಇತರರಿದ್ದರು.