ಬೈಲೂರು ಬಲ್ಸೆಯಲ್ಲಿ ಭಟ್ಕಳ ಮಹಿಳಾ ಕಾಂಗ್ರೆಸ್ ಸಮಾಲೋಚನಾ ಸಭೆಕನ್ನಡಪ್ರಭ ವಾರ್ತೆ ಭಟ್ಕಳ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಮಹಿಳೆಯರು ಸ್ವಾವಲಂಬಿಗಳಾಗಲು ಅನುಕೂಲವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.ಭಾನುವಾರ ಬೈಲೂರಿನ ಬಲ್ಸೆಯ ಮೋದಕ ಪ್ರಿಯ ಆವರಣದಲ್ಲಿ ಏರ್ಪಡಿಸಲಾದ ಭಟ್ಕಳ ಬ್ಲಾಕ್ ಕಾಂಗ್ರೆಸ್ ಮಹಿಳಾ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಚುನಾವಣೆ ಪೂರ್ವ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದು ಮಹಿಳೆಯರು, ಬಡವರಿಗೆ ಹೆಚ್ಚು ಅನುಕೂಲವಾಗಿದೆ. ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದೆ. ನಾನು ರಾಜಕೀಯವನ್ನು ಉದ್ಯೋವನ್ನಾಗಿಸಿಕೊಂಡಿಲ್ಲ, ಸಮಾಜ ಸೇವೆಯಿಂದ ರಾಜಕೀಯಕ್ಕೆ ಬಂದ ನನಗೆ ಹಣ ಮಾಡುವ ಯಾವುದೇ ಶೋಕಿ ಇಲ್ಲ. ಹಣ ಮಾಡಲು ನನಗೆ ಉದ್ದಿಮೆ ಇದೆ ಎಂದರು.ನನ್ನ ಕ್ಷೇತ್ರದಲ್ಲಿ ಸುಮಾರು ೧೦ ಸಾವಿರ ಜನರಿಗೆ ಉದ್ಯೋಗ ನೀಡುವ ಉದ್ದೇಶ ಹೊಂದಿದ್ದು, ಅದಕ್ಕಾಗಿ ಈಗಾಗಲೇ ಜಾಗ ಖರೀದಿ ಮಾಡಿದ್ದೇನೆ. ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು ಸೇರಿದಂತೆ ಮೆಡಿಕಲ್ ಹಬ್ ನಿರ್ಮಾಣಕ್ಕಾಗಿ ಸರ್ಕಾರದ ನಿಯಮಾವಳಿಯಂತೆ ೩೦ ಎಕರೆ ಜಾಗ ಕೇಳಿದ್ದೇನೆ. ಅದಕ್ಕೂ ಅಪಸ್ವರ ಎತ್ತಿದವರಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಜನತೆಯೇ ಉತ್ತರ ಕೊಡಲಿದ್ದಾರೆ ಎಂದ ವೈದ್ಯ, ನನ್ನದೇನಿದ್ದರೂ ಕೂಡಾ ಜನರ ಕಾರ್ಯ ಮಾಡುವುದಾಗಿದೆ. ರಾಜಕೀಯವನ್ನು ನಾನು ಉದ್ಯೋಗವನ್ನಾಗಿ ಮಾಡಿಕೊಂಡಿಲ್ಲ, ನನ್ನ ಸಂಪಾದನೆಗೆ ನನ್ನದೇ ಆದ ಉದ್ಯೋಗ, ವ್ಯಾಪಾರ ವಹಿವಾಟುಗಳಿದೆ. ನಾನು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದ್ದೇನೆ. ಹಣ ಮಾಡುವುದಿದ್ದರೆ ಅದಕ್ಕೆ ಬೇರೆಯದೇ ದಾರಿ ಇತ್ತು ಎಂದು ಹೇಳಿದರು.
ಈಗಾಗಲೇ ಅನಂತವಾಡಿಯಲ್ಲಿ ೧೦ ಎಕರೆ ಜಾಗ ತೆಗೆದುಕೊಂಡು ದೊಡ್ಡದೊಂದು ಗಾರ್ಮೆಂಟ್ ಫ್ಯಾಕ್ಟರಿ ಮಾಡಲು ಮುಂದಾಗಿದ್ದೇನೆ. ಎಲ್ಲವೂ ಸರಿಯಾಗಿ ನಡೆದರೆ ಇನ್ನೊಂದು ವರ್ಷದಲ್ಲಿ ಉದ್ಘಾಟನೆಗೆ ಸಜ್ಜಾಗಲಿದೆ. ಅದರಲ್ಲಿ ೧೦ ಸಾವಿರ ಜನಕ್ಕೆ ಉದ್ಯೋಗ ದೊರೆಯಲಿದೆ ಎಂದ ಅವರು, ನಾನು ಭಟ್ಕಳದಲ್ಲಿ ವಿದ್ಯಾ ಸಂಸ್ಥೆ, ಮೆಡಿಕಲ್ ಕಾಲೇಜು, ಗಾರ್ಮೆಂಟ್ ಫ್ಯಾಕ್ಟರಿ ಮಾಡಲು ಹೊರಟ ಕಾರಣ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಸಲುವಾಗಿ. ಇದನ್ನೇ ನಾನು ವಾಣಿಜ್ಯ ಉದ್ಧೇಶಕ್ಕೆ ಮಾಡುವುದೇ ಆಗಿದ್ದಲ್ಲಿ ದೊಡ್ಡ ದೊಡ್ಡ ನಗರದಲ್ಲಿ ಇದೇ ಹಣವನ್ನು ಹೂಡಿಕೆ ಮಾಡಿದ್ದರೆ ಕೋಟಿ ಕೋಟಿ ಆದಾಯ ಬರುತ್ತಿತ್ತು ಎಂದು ತಮ್ಮ ಸಮಾಜದ ಕಡೆ ಇರುವ ಕಾಳಜಿಯನ್ನು ಪ್ರಶ್ನಿಸುವವರಿಗೆ ಉತ್ತರ ನೀಡಿದರು.ಮಹಿಳಾ ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಬೀನಾ ವೈದ್ಯ, ಮಹಿಳಾ ಕಾಂಗ್ರೆಸ್‌ನ್ನು ಭಟ್ಕಳದಲ್ಲಿ ಬಲ ಪಡಿಸುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಹಾಗೂ ಆಡಳಿತ ನಿರ್ದೇಶಕಿ ಪುಷ್ಪಲತಾ ವೈದ್ಯ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಗೇಶ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜು ನಾಯ್ಕ ಕೊಪ್ಪ, ಜಿಪಂ ಮಾಜಿ ಸದಸ್ಯ ಅಲ್ಬರ್ಟ ಡಿಕೋಸ್ತ, ಜಿಪಂ ಮಾಜಿ ಸದಸ್ಯೆ ಸಿಂಧು ಭಾಸ್ಕರ ನಾಯ್ಕ ಮಾತನಾಡಿದರು. ವೇದಕೆಯಲ್ಲಿ ಬೈಲೂರು ಗ್ರಾಪಂ ಅಧ್ಯಕ್ಷ ಕೃಷ್ಣಾ ನಾಯ್ಕ, ಜಿಲ್ಲಾ ಮಹಿಳಾ ಎಸ್ಟಿ ವಿಭಾಗದ ಉಪಾಧ್ಯಕ್ಷೆ ಮೋಹಿನಿ ಗೊಂಡ, ಸಾರಾ ಫರ್ಜಾನಾ, ಲಕ್ಷಾವತಿ, ಉಷಾ ನಾಯ್ಕ ಮಂಕಿ, ನಾಗರತ್ನಾ ಪಡಿಯಾರ್, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು. ರಾಧಾ ವೈದ್ಯ ಹಾಗೂ ಮೇಘನಾ ನಾಯ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.