ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ 2024- 25ನೇ ಸಾಲಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ 10 ಗ್ರಾಮ ಪಂಚಾಯಿತಿಗಳಿಗೆ ತುಮಕೂರು ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.ತುಮಕೂರು ನಗರದ ಡಾ.ಎಚ್.ಎಂ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ತುಮಕೂರು ಜಿಪಂ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಶಿವಪುರ ಗ್ರಾಮ ಪಂಚಾಯಿತಿಗೆ ಸಮಗ್ರ ಶಾಲಾಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕಾಗಿ, ಅಳಿಲುಘಟ್ಟ ಗ್ರಾಪಂಗೆ ಹಸಿರು ಗ್ರಾಮ ಅಭಿಯಾನದಡಿ ಅತಿ ಹೆಚ್ಚು ಗಿಡಗಳನ್ನು ನೆಟ್ಟು ಸಂರಕ್ಷಿಸಿದ್ದಕ್ಕಾಗಿ, ಬ್ಯಾಡಗೆರೆ ಗ್ರಾಪಂಗೆ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿದ ಗಣನೀಯ ಸಾಧನೆಗಾಗಿ, ಸಿ.ಎಸ್.ಪುರ ಗ್ರಾಪಂಗೆ ಸಮಗ್ರ ಶಾಲಾಭಿವೃದ್ಧಿ ಕಾಮಗಾರಿಗಳ ಸಮರ್ಪಕ ಅನುಷ್ಠಾನಕ್ಕಾಗಿ, ಕುನ್ನಾಲ ಗ್ರಾಪಂಗೆ ಎನ್.ಆರ್.ಎಲ್.ಎಂ ಅತ್ಯುತ್ತಮ ಒಕ್ಕೂಟಕ್ಕಾಗಿ, ಅಮ್ಮನಘಟ್ಟ ಗ್ರಾಪಂಗೆ ಅತಿ ಹೆಚ್ಚು ಇ- ಸ್ವತ್ತು ಸೃಜನೆಗಾಗಿ, ಕೊಪ್ಪ ಅತ್ಯುತ್ತಮ ಸ್ವಚ್ಛ ಗ್ರಾಪಂ ಅಭಿಯಾನಕ್ಕಾಗಿ ಹಾಗೂ ಪ್ರಗತಿ ಪರ ರೈತರಿಗಾಗಿ, ಕೊಂಡ್ಲಿ ಗ್ರಾಪಂಗೆ ಉತ್ತಮ ಆಡಳಿತ ನಿರ್ವಹಣೆಗಾಗಿ, ಅತ್ಯುತ್ತಮ ಅನುಷ್ಠಾನ ಇಲಾಖೆ ತೋಟಗಾರಿಕೆ ಇಲಾಖೆಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಶಾಸಕ ಬಿ.ಸುರೇಶಗೌಡ ,ಎಚ್.ಎ.ವೆಂಕಟೇಶ್, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಗುಬ್ಬಿ ತಾಪಂ ಕಾರ್ಯನಿರ್ವಾಹಕ ಶಿವಪ್ರಕಾಶ್ ಎಸ್., ಸಹಾಯಕ ನಿರ್ದೇಶಕ(ಗ್ರಾ.ಉ) ಜೆ.ಬಿ.ರಂಗನಾಥ್, ತಾಲೂಕು ಯೋಜನಾಧಿಕಾರಿ ಎಂ.ಜೆ.ಜಗನ್ನಾಥಗೌಡ, ಸಹಾಯಕ ಲೆಕ್ಕಾಧಿಕಾರಿ ಸುಧೀಂದ್ರ, ತಾಲೂಕು ಐಇಸಿ ಸಂಯೋಜಕ ರಾಘವೇಂದ್ರರವರು ಹಾಜರಿದ್ದರು.