ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಬಳ್ಳೂರು ಗ್ರಾಮದ ದೊಡ್ಡಮ್ಮ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಮನೆ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು.ದುಡಿಯಲು ಶಕ್ತಿ ಇಲ್ಲದ ಅಸಹಾಯಕ ಸ್ಥಿತಿಯಲ್ಲಿರುವ ಅಶಕ್ತರಾದ ದೊಡ್ಡಮ್ಮ ಅವರಿಗೆ ಜೀವನ ನಿರ್ವಹಣೆಗಾಗಿ ಯೋಜನೆಯಿಂದ ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತಿದೆ. ಇವರ ಹಳೆಯ ಮನೆ ಜೀರ್ಣಾವಸ್ಥೆಗೆ ತಲುಪಿದ್ದು, ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿಯಾಗಿದ್ದ ಹಿನ್ನೆಲೆಯಲ್ಲಿ ಯೋಜನೆ ವತಿಯಿಂದ ವಾತ್ಸಲ್ಯ ಮನೆ ಮಂಜೂರು ಮಾಡಲಾಗಿದೆ. ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ಮಂಜುಳಾ ಅವರು ವಿವರವಾಗಿ ಮಾತನಾಡಿ, “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇವಲ ಆರ್ಥಿಕ ನೆರವಿಗೆ ಸೀಮಿತವಾಗಿಲ್ಲ. ಸಮಾಜದ ಅತ್ಯಂತ ಹಿಂದುಳಿದ, ಅಶಕ್ತ ಮತ್ತು ನಿರ್ಗತಿಕ ಕುಟುಂಬಗಳಿಗೆ ಮಾನವೀಯ ಮೌಲ್ಯಗಳ ಆಧಾರದ ಮೇಲೆ ನೆರವು ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ವಾತ್ಸಲ್ಯ ಯೋಜನೆಯಡಿ ಮನೆ ಇಲ್ಲದೆ ಸಂಕಷ್ಟದಲ್ಲಿರುವವರಿಗೆ ಸುರಕ್ಷಿತ ಹಾಗೂ ಗೌರವಯುತ ವಾಸಸ್ಥಳ ಒದಗಿಸಲಾಗುತ್ತಿದೆ. ಇದು ಹೇಮಾವತಿ ಅಮ್ಮನವರ ಕರುಣೆಯ ಫಲವಾಗಿದೆ. ಮನೆ ಎನ್ನುವುದು ಕೇವಲ ಕಟ್ಟಡವಲ್ಲ, ಅದು ಭದ್ರತೆ, ಆತ್ಮಗೌರವ ಮತ್ತು ನೆಮ್ಮದಿಯ ಜೀವನದ ಆಧಾರವಾಗಿದೆ. ದೊಡ್ಡಮ್ಮ ಅವರು ಇನ್ನುಮುಂದೆ ಮಳೆ-ಗಾಳಿಗೆ ಹೆದರದೇ ಸುರಕ್ಷಿತವಾಗಿ ಬದುಕುವಂತಾಗುವುದು ನಮ್ಮೆಲ್ಲರ ಸಂತೋಷದ ಸಂಗತಿ ಎಂದು ಹೇಳಿದರು.