ಗದಗ ಹುಬ್ಬಳ್ಳಿ ರಸ್ತೆ ತಡೆದು ಅತಿಥಿ ಉಪನ್ಯಾಸಕರ ಪ್ರತಿಭಟನೆ

KannadaprabhaNewsNetwork |  
Published : Dec 02, 2025, 02:00 AM IST
ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಅತಿಥಿ ಉಪನ್ಯಾಸಕರು ಅರ್ಧ ಗಂಟೆಗೂ ಅಧಿಕ ಸಮಯ ಗದಗ- ಹುಬ್ಬಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುತ್ತೇವೆ ಎನ್ನುವ ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯನ್ನು ಪ್ರದರ್ಶಿಸಿದರು.

ಗದಗ: ಕಾಲೇಜು ಶಿಕ್ಷಣ ಇಲಾಖೆ ನಡೆಸುತ್ತಿರುವ ಕೌನ್ಸೆಲಿಂಗ್ ನಿಲ್ಲಿಸಬೇಕು, ಸೇವೆಯಲ್ಲಿ ಇರುವವರನ್ನು ಮುಂದುವರಿಸಬೇಕು ಮತ್ತು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದಿಂದ ನಗರದ ಡಿಸಿ ಕಚೇರಿ ಎದುರು ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಧರಣಿ ಸತ್ಯಾಗ್ರಹ ಸೋಮವಾರ 8ನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ಅತಿಥಿ ಉಪನ್ಯಾಸಕರೊಬ್ಬರು ದಯಾಮರಣ ಕೋರಿ ರಾಷ್ಟ್ರಪತಿಗೆ ಅಂಚೆ ಮೂಲಕ ಪತ್ರ ರವಾಸಿದ್ದಾರೆ.ಅದೇ ರೀತಿ ದಯಾಮರಣಕ್ಕಾಗಿ 105 ಅತಿಥಿ ಉಪನ್ಯಾಸಕರು ಪತ್ರಗಳನ್ನು ಬರೆದಿಟ್ಟಿದ್ದು, ಬೇಡಿಕೆ ಶೀಘ್ರದಲ್ಲಿಯೇ ಈಡೇರದಿದ್ದರೆ ಅವರು ರಾಷ್ಟ್ರಪತಿಗೆ ಪತ್ರಗಳನ್ನು ರವಾನಿಸುವರು ಎಂದು ಹೋರಾಟಗಾರರು ಎಚ್ಚರಿಸಿದರು.

ಅತಿಥಿ ಉಪನ್ಯಾಸಕರು ಅರ್ಧ ಗಂಟೆಗೂ ಅಧಿಕ ಸಮಯ ಗದಗ- ಹುಬ್ಬಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುತ್ತೇವೆ ಎನ್ನುವ ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯನ್ನು ಪ್ರದರ್ಶಿಸಿದರು ಮತ್ತು ರಾಷ್ಟ್ರಪತಿಯವರೆಗೆ ಸಲ್ಲಿಸುವ ದಯಾಮರಣ ಪತ್ರ ಪ್ರದರ್ಶಿಸಿ ನಮ್ಮ ವಯಸ್ಸಾದ ತಂದೆ- ತಾಯಿ, ಮಕ್ಕಳನ್ನು ನೋಡಿಕೊಳ್ಳದಂತಹ ಸ್ಥಿತಿ ಇದೆ. 10, 20 ವರ್ಷಗಳ ಕಾಲ ಸೇವೆ ಸಲ್ಲಿಸಿದವರಿಗೆ ಏನು ಮಾಡಬೇಕು ಎಂದು ತೋಚದಂತಾಗಿದೆ. ನಮಗೂ ಮತ್ತು ನಮ್ಮ ಕುಟುಂಬದ ಎಲ್ಲರಿಗೂ ದಯಾಮರಣ ನೀಡಲು ಮುಂದಾಗಲಿ ಎಂದು ಆಗ್ರಹಿಸಿದರು. ಕಲಬುರಗಿಯ ಅತಿಥಿ ಉಪನ್ಯಾಸಕ ಚಂದ್ರಕಾಂತೆ ಶಿರೋಳೆ ಮಾತನಾಡಿ, 10 ವರ್ಷಕ್ಕೂ ಹೆಚ್ಚು ವರ್ಷದವರೆಗೆ ವಿದ್ಯಾರ್ಥಿಗಳಿಗೆ ಜ್ಞಾನದ ಸುಧೆ ಹರಿಸಿದ 6 ಸಾವಿರ ಅತಿಥಿ ಉಪನ್ಯಾಸಕರನ್ನು ಹೊರಗಿಟ್ಟು ಕೌನ್ಸೆಲಿಂಗ್‌ ಮಾಡಲಾಗುತ್ತಿದೆ. ತಕ್ಷಣವೆ ಕೌನ್ಸೆಲಿಂಗ್‌ ನಿಲ್ಲಿಸಬೇಕು. ಸೇವೆ ಸಲ್ಲಿಸುತ್ತಿರುವವರನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.ಹೊನ್ನಾಳಿಯ ಅತಿಥಿ ಉಪನ್ಯಾಸಕ ಹಲದಪ್ಪ ಮಾತನಾಡಿ, ಎಲ್ಲವೂ ತಮ್ಮ ಹಕ್ಕಿನ ಮಾನವೀಯ ಬದುಕಿಗಾಗಿ ಶ್ರಮಕ್ಕೆ ಮಾನ್ಯತೆ ಸಿಗಲಿ. ಅನಿಶ್ಚಿತತೆ ಕಳಚಲಿ ಎಂಬುದು ಏಕೈಕ ಬೇಡಿಕೆ. ನಾವು ವಿದ್ಯಾರ್ಥಿಗಳ ಭವಿಷ್ಯ ಕಟ್ಟುವವರಾದರೂ ನಮ್ಮದೇ ಬದುಕು ಪ್ರಶ್ನಾರ್ಥಕವಾಗಿ ಬೀದಿಯಲ್ಲಿ ಕುಳಿತುಕೊಳ್ಳುವಂತಹ ಸ್ಥಿತಿ ಬಂದಿದೆ. ಬೇಡಿಕೆಗೆ ಸ್ಪಂದಿಸದಿದ್ದರೆ ದಯಾಮರಣದ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.ಪ್ರತಿಭಟನೆಯಲ್ಲಿ ಗದಗ, ಬೀದರ್, ಕಲಬುರಗಿ, ಕಾರವಾರ, ಧಾರವಾಡ, ಬಾಗಲಕೋಟೆ, ವಿಜಯನಗರ, ಬಳ್ಳಾರಿ, ಹಾವೇರಿ, ತುಮಕೂರು, ಕೊಡಗು, ಬೆಳಗಾವಿ, ಕೋಲಾರ, ಚಿಕ್ಕಮಗಳೂರು, ಉಡುಪಿ, ಕಾರ್ಕಳ, ಹೊಸಪೇಟೆ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ಅತಿಥಿ ಉಪನ್ಯಾಸಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಮೋಟ್‌ ಕೇಸ್‌ ದಾಖಲಿಸಲು ಲೋಕಾಯುಕ್ತ ಸೂಚನೆ
ಗ್ರೇಟರ್‌ ಬೆಂಗಳೂರು ಸಮಗ್ರಉಪನಗರಕ್ಕೆ ಸಂಪುಟ ಅಸ್ತು