ತೊಗಲುಗೊಂಬೆ ವಿರಳ ಕಲಾಪ್ರಕಾರ

KannadaprabhaNewsNetwork |  
Published : Dec 02, 2025, 02:00 AM IST
ಬಳ್ಳಾರಿಯ ಗುಗ್ಗರಹಟ್ಟಿ  ಪ್ರದೇಶದಲ್ಲಿ ಜರುಗಿದ ಕಲೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತೊಗಲುಗೊಂಬೆ ಪ್ರದರ್ಶನಕ್ಕೆ ಸಹ ಶಿಕ್ಷಕ ಬಸಪ್ಪ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ತೊಗಲುಗೊಂಬೆ ಕಲಾ ಪ್ರಕಾರವು ಅತ್ಯಂತ ವಿರಳ ಕಲಾಪ್ರಕಾರವಾಗಿದೆ.

ಬಳ್ಳಾರಿ: ನಗರದ ಗುಗ್ಗರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ ಹಾಗೂ ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕಲೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಉದ್ಘಾಟಿಸಿ ಮಾತನಾಡಿದ ಶಾಲೆ ಸಹ ಶಿಕ್ಷಕ ಬಸಪ್ಪ ಉಕ್ಕಲಿ, ತೊಗಲುಗೊಂಬೆ ಕಲಾ ಪ್ರಕಾರವು ಅತ್ಯಂತ ವಿರಳ ಕಲಾಪ್ರಕಾರವಾಗಿದೆ. ಈ ಕಲಾಪ್ರಕಾರವನ್ನು ಮುನ್ನಡೆಸಿಕೊಂಡು ಹೋಗುವ ಕಲಾವಿದರು ಸಹ ಕಡಿಮೆಯಾಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಎರಡು ತಂಡಗಳು ಸಕ್ರೀಯವಾಗಿ ತೊಗಲುಗೊಂಬೆ ಪ್ರದರ್ಶನ ನೀಡುತ್ತಿರುವುದು ಹೆಚ್ಚು ಸಂತಸ ತಂದಿದೆ ಎಂದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಟಿವಿ, ಮೊಬೈಲ್‌ಗಳೇ ಮನೋರಂಜನೆಗೆ ಸಾಧನೆಗಳಾಗಿವೆ. ಹೀಗಾಗಿ ಜನರು ಬೇಸರ ಕಳೆಯಲು ವಿವಿಧ ತಂತ್ರಜ್ಞಾನದ ಸಾಧನೆಗಳಿಗೆ ಮೊರೆ ಹೋಗುತ್ತಿದ್ದು, ತೊಗಲುಗೊಂಬೆ ಕಲಾ ಪ್ರಕಾರಗಳನ್ನು ಹಳ್ಳಿಗಳಲ್ಲಿ ಪ್ರದರ್ಶನ ನೀಡುವುದರಿಂದ ರಾಮಾಯಣ ಹಾಗೂ ಮಹಾಭಾರತದಂತಹ ಮಹಾಕಾವ್ಯಗಳ ಪರಿಚಯವಾಗುತ್ತದೆ. ಜನರಲ್ಲಿ ನಮ್ಮ ಪರಂಪರೆ ಹಾಗೂ ನಮ್ಮ ಐತಿಹ್ಯದ ಬಗ್ಗೆ ಜಾಗೃತಿ ಮೂಡುತ್ತದೆ ಎಂದು ತಿಳಿಸಿದರು.

ಗೌರಿ ಹಳ್ಳಿಮನೆ ಹೋಟೆಲ್‌ನ ಮಾಲೀಕ ಹಾಗೂ ಕಲಾವಿದ ಶ್ರೀಧರಗಡ್ಡೆ ದೊಡ್ಡಬಸಪ್ಪ ಯಾಟೆ ಮಾತನಾಡಿ, ತೊಗಲುಗೊಂಬೆ, ಬಯಲಾಟ ಪ್ರದರ್ಶನಗಳು ನಡೆದರೆ ಊರಿನಲ್ಲಿ ಮಳೆ, ಬೆಳೆ, ಆಗುತ್ತದೆ ಎಂಬ ನಂಬಿಕೆಗಳಿವೆ. ಕೆಲವು ಕಲಾಪ್ರಕಾರಗಳಿಗೆ ದೈವತ್ವದ ನಂಬಿಕೆ ಇರಿಸಿಕೊಳ್ಳಲಾಗಿದೆ. ತೊಗಲುಗೊಂಬೆ ಹಾಗೂ ಬಯಲಾಟ ಪ್ರದರ್ಶನಗಳಿಂದ ಊರು ಸಮೃದ್ಧಿಯಾಗುತ್ತದೆ ಎಂಬ ಮಾತನ್ನು ಹಿರಿಕರು ಈ ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದು, ಇಂದಿಗೂ ಜನರಿಗೆ ಕೆಲವು ಪ್ರಕಾರಗಳ ಬಗ್ಗೆ ದೈವತ್ವದ ನಂಬಿಕೆಗಳನ್ನು ಇಟ್ಟುಕೊಂಡು ಬಂದಿದ್ದಾರೆ ಎಂದು ವಿವರಿಸಿದರು. ತೊಗಲುಗೊಂಬೆ ಪ್ರದರ್ಶನದ ಕಲೆಗಳನ್ನು ಇಂದಿನ ಯುವ ಸಮುದಾಯಕ್ಕೆ ಕಲಿಸಿಕೊಡುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.

ಶಾಲೆ ಎಸ್‌ಡಿಎಂಸಿ ಉಪಾಧ್ಯಕ್ಷ ಎಂ.ಪುರುಷೋತ್ತಮ, ನಿವೃತ್ತ ಶಿಕ್ಷಕ ವೆಂಕಟೇಶಲು ಮತ್ತಿತರರಿದ್ದರು. ಕೊನೆಯಲ್ಲಿ ಶಾಲೆಯತ್ತ ವಿದ್ಯಾರ್ಥಿಗಳನ್ನು ಕರೆ ತರುವ ದಿಸೆಯ ಜಾಗೃತಿಗಾಗಿ ಮರಳಿ ಬಾ ಶಾಲೆಗೆ ವಿಷಯನ್ನಾಧರಿಸಿದ ತೊಗಲುಗೊಂಬೆ ಪ್ರದರ್ಶನ ನಡೆಯಿತು. ಗುಗ್ಗರಹಟ್ಟಿ ಶಾಲಾ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಪ್ರದರ್ಶನ ಗಮನ ಸೆಳೆಯಿತು.

ಶ್ರೀ ಹುಲಿಕುಟೆರಾಯ ತೊಗಲುಗೊಂಬೆ ಕಲಾ ತಂಡದ ಅಧ್ಯಕ್ಷ ಕೆ.ಹೊನ್ನೂರಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.

ಶಾಲಾ ಸಹ ಶಿಕ್ಷಕ ಸಿದ್ದೇಶ್, ಸಹ ಶಿಕ್ಷಕಿ ಜ್ಞಾನೇಶ್ವರಿ ಹಾಗೂ ವೈ.ಪ್ರಭು ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ