ವಿದ್ಯಾರ್ಥಿಗಳಿಗೆ ಸರಿಯಾಗಿ ಮಾರ್ಗದರ್ಶಿಸಿ: ಸಚಿವ ಸುಧಾಕರ್

KannadaprabhaNewsNetwork |  
Published : Feb 05, 2024, 01:45 AM IST
ಚಿತ್ರ 1,2 | Kannada Prabha

ಸಾರಾಂಶ

ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸುವುದು ಪೋಷಕರ ಜವಾಬ್ದಾರಿಯಾಗಿದ್ದು, ಅವರನ್ನು ಸರಿಯಾಗಿ ಮಾರ್ಗದರ್ಧನ ನೀಡುವುದು ಶಿಕ್ಷಕರ ಕರ್ತವ್ಯವಾಗಿದೆ.

ಹಿರಿಯೂರು: ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸುವುದು ಪೋಷಕರ ಜವಾಬ್ದಾರಿಯಾಗಿದ್ದು, ಅವರನ್ನು ಸರಿಯಾಗಿ ಮಾರ್ಗದರ್ಧನ ನೀಡುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಹಾಗೂ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಕ್ಕಳು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮುಂದಿದ್ದಾರೆ. ಅವರ ಬದ್ಧತೆ ಮತ್ತು ಶ್ರದ್ಧೆ ಅವರನ್ನು ಪ್ರತಿ ಕ್ಷೇತ್ರದಲ್ಲೂ ಮುಂಚೂಣಿಗೆ ತರುತ್ತಿದೆ. ವಿದ್ಯಾರ್ಥಿನಿಯರು ಹೆಚ್ಚು ಹೆಚ್ಚು ಶಿಕ್ಷಿತರಾಗಿ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಬೇಕು. ಕಳೆದ ವರ್ಷದ ಫಲಿತಾಂಶವನ್ನು ಈ ವರ್ಷದ ವಿದ್ಯಾರ್ಥಿನಿಯರು ದಾಟಿ ಮುಂದೆ ಹೋಗುವಂತಾಗಬೇಕು. 2008ರಲ್ಲಿ ಮೊದಲ ಬಾರಿ ಶಾಸಕನಾಗಿ ಹಿರಿಯೂರಿಗೆ ಬಂದಾಗ 3-4 ಕೊಠಡಿಗಳಿದ್ದವು. ಆನಂತರ 10 ವರ್ಷದ ನನ್ನ ಆಡಳಿತದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಯಿತು.

ಅದೇ ರೀತಿ ಇನ್ನು ಮುಂದೆಯೂ ಈ ಕಾಲೇಜಿನ ಪ್ರಗತಿಗೆ ನನ್ನ ಸಹಕಾರವಿರುತ್ತದೆ. ಹೈಟೆಕ್ ಶೌಚಾಲಯ, ಆವರಣದಲ್ಲಿ ಹೈಮಾಸ್ಕ್ ದೀಪ, ಸಭಾಭವನ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಬಡವರ ಪರ, ಹೆಣ್ಣು ಮಕ್ಕಳ ಪರ ಸದಾ ನಿಂತಿರುವ ನಾಯಕರು ಮತ್ತು ನಮ್ಮ ಪಕ್ಷದ ಸರ್ಕಾರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ಮತ್ತು ಅನುದಾನ ನೀಡುತ್ತಾ ಬಂದಿದೆ. ಇದೀಗ ಹೆಣ್ಣು ಮಕ್ಕಳು ಉಚಿತವಾಗಿ ಶಾಲಾ ಕಾಲೇಜುಗಳಿಗೆ ಬರುತ್ತಿದ್ದೀರಿ. ಇರುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಫಲಿತಾಂಶ ಪಡೆಯುವ ಪ್ರಯತ್ನ ಮಾಡಿ. ಅತೀ ಹೆಚ್ಚು ಅಂಕ ಗಳಿಸಿದ ಮೂರೂ ವಿಭಾಗಗಳ ವಿದ್ಯಾರ್ಥಿನಿಯರಿಗೆ ನನ್ನ ಕಡೆಯಿಂದ ತಲಾ 25 ಸಾವಿರ ರು. ಪ್ರೋತ್ಸಾಹ ಧನದ ಸೌಲಭ್ಯವಿರುತ್ತದೆ. ಉತ್ತಮ ಫಲಿತಾಂಶ ಪಡೆದು ಉನ್ನತ ವ್ಯಾಸಂಗ ಮಾಡುವ ಕಡೆ ಗಮನ ನೆಟ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುವತ್ತ ಚಿಂತಿಸಿ. ಅಸಾಧ್ಯ ಎನ್ನುವುದು ಜಗತ್ತಿನಲ್ಲಿ ಯಾವುದೂ ಇಲ್ಲ. ಇದ್ದರೂ ಸಹ ಅದು ಬಹಳಷ್ಟು ದಿನ ಅಸಾಧ್ಯವಾಗಿ ಉಳಿಯುವುದಿಲ್ಲ. ನಿಮ್ಮಿಂದ ಆಗದ್ದು ಯಾವುದೂ ಇಲ್ಲ. ಪೋಷಕರ ಶ್ರಮ ಮತ್ತು ಶಿಕ್ಷಕರ ಕಾಳಜಿ ಮನದಲ್ಲಿಟ್ಟುಕೊಂಡು ವ್ಯಾಸಂಗ ಮಾಡಿ ಉತ್ತಮ ಬದುಕು ರೂಪಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾoಶುಪಾಲ ಜಿ. ಮನೋಹರ್, ಸಿಡಿಸಿ ಉಪಾಧ್ಯಕ್ಷೆ ವಾಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಈರಲಿಂಗೇಗೌಡ, ಖಾದಿ ರಮೇಶ್, ನಗರಸಭೆ ಮಾಜಿ ಅಧ್ಯಕ್ಷೆ ಶಿವರಂಜಿನಿ, ಮುಖಂಡರಾದ ಗಿಡ್ಡೋಬನಹಳ್ಳಿ ಅಶೋಕ್, ಕಲ್ಲಟ್ಟಿ ಹರೀಶ್, ಗೌರೀಶ್ ನಾಯಕ್, ವಿ.ಶಿವಕುಮಾರ್, ಟಿ ಜಯಂತ್, ಕೆ.ಲೋಕೇಶ್, ತಿಪ್ಪೇಸ್ವಾಮಿ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ