ಹಣಕಾಸು ಸಂಸ್ಥೆಗಳ ಸುರಕ್ಷತೆ ಹೆಚ್ಚಿಸಲು ಮಾರ್ಗಸೂಚಿ : ಸಚಿವ ದಿನೇಶ್‌ ಗುಂಡೂರಾವ್‌

KannadaprabhaNewsNetwork | Updated : Jan 27 2025, 12:36 PM IST

ಸಾರಾಂಶ

ಬ್ಯಾಂಕ್‌ಗಳು ಸೇರಿ ಹಣಕಾಸು ಸಂಸ್ಥೆಗಳ ಸುರಕ್ಷತೆ ಹೆಚ್ಚಿಸಲು ಸೂಕ್ತ ಮಾರ್ಗಸೂಚಿ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

 ಮಂಗಳೂರು : ಬ್ಯಾಂಕ್‌ಗಳು ಸೇರಿ ಹಣಕಾಸು ಸಂಸ್ಥೆಗಳ ಸುರಕ್ಷತೆ ಹೆಚ್ಚಿಸಲು ಸೂಕ್ತ ಮಾರ್ಗಸೂಚಿ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಟೆಕಾರು ಸಹಕಾರಿ ಬ್ಯಾಂಕ್‌ ದರೋಡೆ ಪ್ರಕರಣ ಭೇದಿಸಿರುವ ಪೊಲೀಸರ ಕಾರ್ಯಾಚರಣೆ ಅಭಿನಂದನೀಯ. ಇದರಲ್ಲಿ ಯಾರು ಭಾಗಿಯಾಗಿದ್ದಾರೆ, ಹಿಂದಿರುವವರು ಯಾರು ಎಲ್ಲವನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ ಎಂದರು.

ಯೂನಿಸೆಕ್ಸ್‌ ಸೆಲೂನ್‌ನಲ್ಲಿ ರಾಮ ಸೇನೆ ಕಾರ್ಯಕರ್ತರ ದಾಂಧಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್‌ ಗುಂಡೂರಾವ್‌, ಈ ರೀತಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಪೊಲೀಸರ ಗಮನಕ್ಕೆ ತರಬೇಕು. ಗೂಂಡಾಗಿರಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ತರುವುದು ಸರಿಯಲ್ಲ. ಈ ರೀತಿಯ ಘಟನೆಗಳು ನಡೆದಾಗ ಬಂಡವಾಳ ಹೂಡಿಕೆ, ಧಾರ್ಮಿಕ ಕ್ಷೇತ್ರಗಳಿಗೆ ಬರುವ ಪ್ರವಾಸಿಗರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇಂತಹ ದುಷ್ಕೃತ್ಯಗಳ ವಿರುದ್ಧ ಎಲ್ಲರೂ ಧ್ವನಿ ಎತ್ತುವ ಅಗತ್ಯವಿದೆ. ಕೆಲವರು ಇನ್ನೂ ಈ ಘಟನೆಯನ್ನು ಖಂಡಿಸಿಲ್ಲ ಎಂದು ಎಂದರು.

ಸಿಎಂ ಬದಲಾವಣೆ ಚರ್ಚೆ ಅಗತ್ಯವೇ ಇಲ್ಲ: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಒಬ್ಬರು ಮುಖ್ಯಮಂತ್ರಿ ಆಗಿರುವಾಗ ಇನ್ನೊಬ್ಬರು ಸಿಎಂ ಆಗುವ ಪ್ರಶ್ನೆ ಬರಲ್ಲ. ಅಂತಹ ವಿಚಾರಗಳ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಸಿದ್ದರಾಮಯ್ಯ ಅವರು ಎಲ್ಲರಿಗೂ ಶೇ. 100ರಷ್ಟು ವಿಶ್ವಾಸ ಇರುವ ನಾಯಕ ಎಂದು ಹೇಳಿದರು.

ರಾಜ್ಯಪಾಲರ ಭಾಷಣದಲ್ಲಿ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪ್ರಯೋಜನಗಳನ್ನು ಉಲ್ಲೇಖಿಸಿದ ಕುರಿತು ಪ್ರತಿಕ್ರಿಯಿಸಿ, ದೇಶದಲ್ಲಿ ಯಾವುದೇ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಸಿದ್ದರಾಮಯ್ಯ ಸರ್ಕಾರ ನಾಲ್ಕೇ ತಿಂಗಳಲ್ಲಿ ಎಲ್ಲವನ್ನೂ ಅನುಷ್ಠಾನಗೊಳಿಸಿದೆ. ಎಷ್ಟೇ ಜನ ಟೀಕೆ ಮಾಡಿದರೂ, ನಾವು ಜನರ ಪರವಾದ ಬದ್ಧತೆಯನ್ನು ತೋರಿಸಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Share this article