ಫ್ಲೆಕ್ಸ್ ಪ್ರಿಂಟಿಂಗ್ ಹಾಗೂ ಡಿಜೆ ಸೌಂಡ್ ಸಿಸ್ಟಮ್ ಮಾಲೀಕರೊಂದಿಗೆ ಜಿಲ್ಲಾಮಟ್ಟದ ಸಭೆ । 5 ದಿನ ಮಾತ್ರ ಉತ್ಸವಕ್ಕೆ ಅನುಮತಿ
ಸೆ. 14 ರಿಂದ ನಡೆಯುವ ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದ ಯುತವಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಸಮುದಾಯ ಭವನದಲ್ಲಿ ಜಿಲ್ಲೆಯ ಎಲ್ಲಾ ಫ್ಲೆಕ್ಸ್ ಪ್ರಿಂಟಿಂಗ್ ಹಾಗೂ ಡಿಜೆ ಸೌಂಡ್ ಸಿಸ್ಟಮ್ ಮಾಲೀಕರೊಂದಿಗೆ ಜಿಲ್ಲಾ ಮಟ್ಟದ ಸಭೆ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಮಾತನಾಡಿ, ಸರ್ವೋಚ್ಛ ನ್ಯಾಯಾಲಯ ಹಾಗೂ ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಆದೇಶ ಮತ್ತು ಮಾರ್ಗಸೂಚಿಗಳ ಪ್ರಕಾರವೇ ಗಣೇಶೋತ್ಸವ ಮೊದಲಾದ ಹಬ್ಬದ ಆಚರಣೆಗೆ ಅವಕಾಶ ಕಲ್ಪಿಸಲಾಗುವುದು. ಅದರಂತೆ ಈ ಬಾರಿ ಐದು ದಿನದ ಗಣೇಶೋತ್ಸವಕ್ಕೆ ಮಾತ್ರ ಅನುಮತಿ ನೀಡಲಾಗುವುದು. ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಹಾಗೂ ಉತ್ಸವ ಆಯೋಜಕರು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಸಹಕರಿಸಬೇಕು ಎಂದು ಸೂಚಿಸಿದರು.ಫ್ಲೆಕ್ಸ್ ಮುದ್ರಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ನಿಯಮಗಳನ್ನು ಪಾಲಿಸಬೇಕು. ಉತ್ಸವದ ಸಂದರ್ಭದಲ್ಲಿ ಡಿಜೆಗೆ ಅವಕಾಶವಿಲ್ಲ. ಆದರೆ ನಿಗದಿತ ಪ್ರಮಾಣದ ಶಬ್ದ ಹೊರಸೂಸುವ ಧ್ವನಿವರ್ಧಕ ಬಳಕೆಗೆ ಸದ್ಯಕ್ಕೆ ಅವಕಾಶವಿರುತ್ತದೆ. ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಧ್ವನಿವರ್ಧಕ ಬಳಕೆಗೆ ನಿಯಮಾವಳಿ ಪ್ರಕಾರ ಅನುಮತಿ ನೀಡಲಾಗುವುದು. ಡಿಜೆ ಸೌಂಡ್ ಸಿಸ್ಟಮ್ ಬಳಕೆಯಲ್ಲಿಯೂ ಸರ್ಕಾರ ನಿಗದಿಪಡಿಸಿರುವ ನಿಯಮ, ಸಮಯ ಹಾಗೂ ಧ್ವನಿಮಿತಿ ಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘನೆಯಾಗದಂತೆ ಮಾಲೀಕರು ಹಾಗೂ ಆಯೋಜಕರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಸಿಕೆಬಿ-1 ನಗರದ ಪೊಲೀಸ್ ಸಮುದಾಯ ಭವನದಲ್ಲಿ ಜಿಲ್ಲೆಯ ಎಲ್ಲಾ ಫ್ಲೆಕ್ಸ್ ಪ್ರಿಂಟಿಂಗ್ ಹಾಗೂ ಡಿಜೆ ಸೌಂಡ್ ಸಿಸ್ಟಮ್ ಮಾಲೀಕರೊಂದಿಗೆ ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಮಾತನಾಡಿದರು