ಗುಳೇದಲೆಕ್ಕಮ್ಮ ಜಾತ್ರೆ: ದೇವಿ ದರ್ಶನಕ್ಕೆ ಮುಗಿಬಿದ್ದ ಭಕ್ತರು

KannadaprabhaNewsNetwork |  
Published : Jan 09, 2025, 12:45 AM IST
ಹರಪನಹಳ್ಳಿ ತಾಲೂಕಿನ ಹುಲ್ಲಿಕಟ್ಟಿ ಬಳಿ ಅರಣ್ಯ ಪ್ರದೇಶದಲ್ಲಿ ವೈಭವದಿಂದ ಜರುಗಿದ ಗುಳೇದಲೆಕ್ಕಮ್ಮ ಜಾತ್ರೆಯಲ್ಲಿ ದೇವಿ ದರ್ಶನಕ್ಕೆ ಮುಗಿಬಿದ್ದ ಭಕ್ತರು. | Kannada Prabha

ಸಾರಾಂಶ

ಎರಡು ವರ್ಷಕ್ಕೊಮ್ಮೆ ದೇವಿ ಉತ್ಸವ ಮೂರ್ತಿಗೆ ಅಕ್ಕಸಾಲಿಗರ ಮನೆಯಲ್ಲಿ ಅಲಂಕರಿಸಿ ದೇವಸ್ಥಾನಕ್ಕೆ ತಂದು ಪ್ರತಿಷ್ಠಾಪಿಸಿದರು.

ಹರಪನಹಳ್ಳಿ: ತಾಲೂಕಿನ ಹುಲ್ಲಿಕಟ್ಟಿ ಗ್ರಾಮದ ಬಳಿ ಅರಣ್ಯ ಪ್ರದೇಶದಲ್ಲಿ ಮಂಗಳವಾರದಿಂದ ಆರಂಭಗೊಂಡ ಗುಳೇದಲೆಕ್ಕಮ್ಮ ಜಾತ್ರೆಯಲ್ಲಿ ಭಕ್ತರು ಗೋದಿ ಸಸಿ ಅರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ದೇವಿಗೆ ಭಕ್ತಿ ಸಮರ್ಪಿಸಿದರು.

ಗುಳೇದಲೆಕ್ಕಮ್ಮನ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದು, ಗೋದಿ ಸಸಿ ಹೊತ್ತ ಭಕ್ತರು ಹಾಗೂ ಬೇವಿನ ಹಾಗೂ ಲೆಕ್ಕಪತ್ರಿ ಸೊಪ್ಪಿನಿಂದ ದೀಡ್‌ ನಮಸ್ಕಾರ, ದೇವಿಗೆ ಸಸ್ಯ ಹಾಗೂ ಮಾಂಸಹಾರದ ನೈವೆದ್ಯೆ ಮಾಡಿ ಭಕ್ತರು ಹರಕೆ ತೀರಿಸಿದರು.

ಎರಡು ವರ್ಷಕ್ಕೊಮ್ಮೆ ದೇವಿ ಉತ್ಸವ ಮೂರ್ತಿಗೆ ಅಕ್ಕಸಾಲಿಗರ ಮನೆಯಲ್ಲಿ ಅಲಂಕರಿಸಿ ದೇವಸ್ಥಾನಕ್ಕೆ ತಂದು ಪ್ರತಿಷ್ಠಾಪಿಸಿದರು. ಮಂಗಳವಾರ ತಡರಾತ್ರಿ ಗ್ರಾಮದ ಒಂಬತ್ತು ಜನಾಂಗದಿಂದ ಆರತಿ ಬಂದ ಬಳಿಕ ದೇವಿಯ ಉತ್ಸವ ಮೂರ್ತಿಯನ್ನು ಬಡಿಗೇರ ವಂಶದ ಅರ್ಚಕರು ತಲೆಮೇಲೆ ಹೊತ್ತುಕೊಂಡು ನೇರವಾಗಿ ಹೊಳೆ ಪೂಜೆಗೆ ತೆರಳಿತು. ಅಲ್ಲಿ ಗ್ರಾಮದ ಎಲ್ಲ ಜನಾಂಗದವರು ಐಕ್ಯತೆ, ಶ್ರದ್ದಾ ಭಕ್ತಿಯಿಂದ ಗಂಗಾ ಪೂಜೆ ನೆರವೇರಿಸಿದರು.

ಬಳಿಕ ಅಂದಾಜು ಎರಡು ಕಿ.ಮೀ. ದೂರದ ಅರಣ್ಯದಲ್ಲಿರುವ ದೇವಿ ಸನ್ನಿದಾನದ ಪಾದಗಟ್ಟೆವರೆಗೂ ಬೆಳಗಿನ ಜಾವ ನಾಲ್ಕು ಗಂಟೆಯವರೆಗೂ ಡೊಳ್ಳು ಕುಣಿತ, ಸಮ್ಮಾಳ, ಹಲಗೆ, ರುಮ್ಮಿ ಮೇಳದ ನಡುವೆ ಬೃಹತ್ ಮೆರವಣಿಗೆ ಸಾಗಿಬಂತು.

ಆಕರ್ಷಕವಾದ ಸಿಡಿಮದ್ದುಗಳನ್ನು ಸಿಡಿಸುವ ಮೂಲಕ ನೆರೆದಿದ್ದ ಜನರನ್ನು ರೋಮಾಂಚನಗೊಳಿಸಿತ್ತು. ಬುಧುವಾರ ಬೆಳಗಿನಜಾವ ಬೇವಿನ ಉಡುಗೆ, ದೀಡು ನಮಸ್ಕಾರ, ಒಂಭತ್ತು ದಿವಸ ಉಪವಾಸವಿದ್ದ ಭಕ್ತರು ಗೋದಿ ಸಸಿ ಸಲ್ಲಿಸಿದರು. ಮರಗಳಲ್ಲಿ ತೊಟ್ಟಿಲು, ಬಟ್ಟೆ ನೇತುಹಾಕುತ್ತಿದ್ದ ದೃಶ್ಯ ಕಂಡುಬಂದಿತು.

ತೊಗರಿಕಟ್ಟಿ, ಬಾಪೂಜಿನಗರ, ಹಾರಕನಾಳು ಸಣ್ಣ, ದೊಡ್ಡ ತಾಂಡ, ಹುಲಿಕಟ್ಟಿ ಗ್ರಾಮಗಳ ಜನರು ಮೂರು ದಿನಗಳ ಕಾಲ ಕುಟುಂಬದಲ್ಲಿ ಯಾರು ಇಲ್ಲದಂತೆ ಸಾಕುಪ್ರಾಣಿ ಸಮೇತ ಜಾತ್ರೆಯಲ್ಲಿ ದೇವಸ್ಥಾನದ ಬಳಿ ಟೆಂಟ್‌ಗಳನ್ನು ಹಾಕುವ ಮುಖಾಂತರ ಬಿಡಾರ ಹೂಡಿದ್ದರು. ಸುತ್ತಲಿನ ನಾಲ್ಕಾರು ಜಿಲ್ಲೆಯ ಅಸಂಖ್ಯಾತ ಭಕ್ತರು ಆಗಮಿಸಿ ದೇವಿಗೆ ಭಕ್ತಿ ಸಮರ್ಪಿಸಿದರು. ವಿಶೇಷವಾಗಿ ವಿವಿಧ ಭಾಗಗಳಿಂದ ಬಂಜಾರ ಸಮುದಾಯದ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವುದು ವಿಶೇಷ.

ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ, ಕೃಷ್ಣನಾಯ್ಕ, ಮಾಜಿ ಶಾಸಕರಾದ ಕರುಣಾಕರ ರೆಡ್ಡಿ, ಪಿ.ಟಿ. ಪರಮೇಶ್ವರ ನಾಯ್ಕ, ಎಚ್‌.ಎಂ. ಮಲ್ಲಿಕಾರ್ಜುನ, ಇತರ ಗಣ್ಯರು ಗುಳೇದಲೆಕ್ಕಮ್ಮ ದರ್ಶನ ಪಡೆದರು.

ಜಾತ್ರಾ ಸಮಿತಿಯ ಮುಖಂಡರಾದ ಎಚ್.ಚಂದ್ರಪ್ಪ, ಹಾಲೇಶ, ಬಾಷು ಸಾಹೇಬ್, ಗಂಗಾಧರಪ್ಪ ಹಾಗೂ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಅವರು ಜಾತ್ರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಸೂಕ್ತ ಬಂದೋಬಸ್ತ್ ಮಾಡಿದ ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ನಾಗರಾಜ ಎಂ. ಕಮ್ಮಾರ, ಹೊಸಪೇಟೆ ಸಿಪಿಐ ಹುಲುಗಪ್ಪ ಪಿಎಸ್ ಐ ಗಳಾದ ಶುಂಭಲಿಗಹಿರೇಮಠ, ಕಿರಣಕುಮಾರನಾಯ್ಕ ಇತರ ಸಿಬ್ಬಂದಿ ಅವರನ್ನು ಅಭಿನಂದಿಸಿದ್ದಾರೆ.

ಹರಪನಹಳ್ಳಿ ತಾಲೂಕಿನ ಹುಲ್ಲಿಕಟ್ಟಿ ಬಳಿ ಅರಣ್ಯ ಪ್ರದೇಶದಲ್ಲಿ ವೈಭವದಿಂದ ಜರುಗಿದ ಗುಳೇದಲೆಕ್ಕಮ್ಮ ಜಾತ್ರೆಯಲ್ಲಿ ದೇವಿ ದರ್ಶನಕ್ಕೆ ಮುಗಿಬಿದ್ದ ಭಕ್ತರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ