ಕನ್ನಡಪ್ರಭ ವಾರ್ತೆ ಕೊರಟಗೆರೆ
ಪಟ್ಟಣದ ರಾಜೀವ ಭವನದಲ್ಲಿ ನಡೆದ ತಾಲೂಕು ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ತಾಲೂಕಿನಿಂದ ತುಮುಲ್ ನಿರ್ದೇಶಕರ ಸ್ಥಾನಕ್ಕೆ ಹುಲಿಕುಂಟೆ ಪ್ರಸಾದ್ ಮತ್ತು ಗುಂಡಿನಪಾಳ್ಯ ಈಶ್ವರಯ್ಯ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು, ಸಮಸ್ಯೆ ಜಟಿಲವಾದ ಹಿನ್ನೆಲೆಯಲ್ಲಿ ಅಂತಿಮವಾಗಿ ಆಯ್ಕೆ ಪ್ರಕ್ರಿಯೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ನಿರ್ಧಾರಕ್ಕೆ ಬಿಡಲಾಯಿತು, ಗೃಹ ಸಚಿವರು ಗುಂಡಿನಪಾಳ್ಯ ಈಶ್ವರಯ್ಯರವರನ್ನು ಅಭ್ಯರ್ಥಿ ಎಂದು ಸೂಚಿಸಿ ಮುಚ್ಚಿದ ಲಕೋಟೆ ಮೂಲಕ ಕಳುಹಿಸಿದ್ದರು. ಅಂತಿಮವಾಗಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಅವರು ಈಶ್ವರಯ್ಯನವರ ಹೆಸರನ್ನು ಘೋಷಿಸಿದರು.
ಆಭ್ಯರ್ಥಿ ಗುಂಡಿನಪಾಳ್ಯ ಈಶ್ವರಯ್ಯ ಮಾತನಾಡಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಆದೇಶಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಈ ಹಿಂದೆ ನಾನು ಎರಡು ಬಾರಿ ಕೊರಟಗೆರೆ ತಾಲೂಕಿನಿಂದ ತುಮುಲ್ ನಿರ್ದೇಶಕನಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸಿ, ಹಾಲು ಉತ್ಪಾದಕರ ಸಂಘದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ನಾನು ಮತ್ತು ಹೂಲಿಕುಂಟೆ ಪ್ರಸಾದ್ ಉತ್ತಮ ಸ್ನೇಹಿತರಾಗಿದ್ದು ನನ್ನ ಗೆಲುವಿಗೆ ಅವರೂ ಸಹ ಶ್ರಮಿಸುತ್ತಾರೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಬಲ, ಸಹಕಾರ ಸಚಿವ ಕೆ.ಎನ್.ರಾಜಣ್ಣನವರ ಬೆಂಬಲ, ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಹಕಾರ ಹಾಗೂ ತಾಲೂಕಿನ ಎಲ್ಲಾ ಹಾಲು ಉತ್ಪಾದಕ ಸಂಘಗಳ ಮತದಾರರ ಆಶೀರ್ವಾದದಿಂದ ನಾನು ನ.೧೦ ರಂದು ನಡೆಯುವ ಈ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಜಯಗಳಿಸುತ್ತೇನೆ ಎಂದರು.ಆಕಾಂಕ್ಷಿಯಾಗಿದ್ದ ಹೂಲಿಕುಂಟೆ ರುದ್ರಪ್ರಸಾದ್ ಮಾತನಾಡಿ, ಸಚಿವ ಡಾ.ಜಿ.ಪರಮೇಶ್ವರ್ ಅವರ ಆದೇಶಕ್ಕೆ ನಾವೆಲ್ಲರೂ ತಲೆಬಾಗುತ್ತೇವೆ, ಈ ಬಾರಿ ತುಮುಲ್ ನಿರ್ದೇಶಕನ ಸ್ಥಾನಕ್ಕೆ ಪಕ್ಷದ ಬೆಂಬಲ ಸಿಗುವುದಾಗಿ ನಿರೀಕ್ಷಿಸಿದ್ದೆ, ಆದರೆ ಡಾ.ಜಿ.ಪರಮೇಶ್ವರ್ ರವರು ನಮಗೆ ಹೈಕಮಾಂಡ್ ಇದ್ದಂತೆ. ಅವರ ಆದೇಶದಂತೆ ನಾವೆಲ್ಲರೂ ಬದ್ಧರಾಗಿ ಈಶ್ವರಯ್ಯನವರ ಗೆಲುವಿಗೆ ಶ್ರಮವಹಿಸಬೇಕಾಗಿದೆ ಎಂದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ, ಎಲ್ಲರೂ ಒಟ್ಟಾಗಿ ಈಶ್ವರಯ್ಯರವರನ್ನು ಗೆಲ್ಲಿಸಿಕೊಂಡು ತಾಲೂಕು ನಿರ್ದೇಶಕರನ್ನಾಗಿ ಆಯ್ಕೆ ಮಾಡಿ ತುಮುಲ್‌ಗೆ ಕಳುಹಿಸಿ ಕೊಡಬೇಕೆಂದು ಮನವಿ ಮಾಡಿದರು.