ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಪರಿಮಿತಿಯ ಮೈಸೂರು-ಊಟಿ, ಗುಂಡ್ಲುಪೇಟೆ-ಚಾಮರಾಜನಗರ, ಗುಂಡ್ಲುಪೇಟೆ-ಕೇರಳ ಜೋಡಿ ರಸ್ತೆಯಲ್ಲಿ ಬಹುತೇಕ ಬೀದಿ ದೀಪಗಳು ಅಲ್ಲಲ್ಲಿ ಕೆಟ್ಟಿವೆ.ಕಳೆದ 6 ತಿಂಗಳ ಹಿಂದೆ ಶಾಸಕ ಗಣೇಶ್ ಪ್ರಸಾದ್‌ರ ಸೂಚನೆ ಮೇರೆಗೆ ಜೋಡಿ ರಸ್ತೆಯ ಎಲ್ಲ ಬೀದಿ ದೀಪಗಳು ಜಗಮಗಿಸಿದ್ದವು. ಇದೀಗ ಹಲವು ಕಡೆ ಕೆಟ್ಟು ರಾತ್ರಿ ವೇಳೆ ಹೆದ್ದಾರಿಯು ಅಲ್ಲಲ್ಲಿ ಕಗ್ಗತ್ತಲಲ್ಲಿ ಮುಳುಗಿದೆ.
ಪಟ್ಟಣದ ಜಿಪಂ ಕಚೇರಿಯಿಂದ ಆರಂಭವಾಗುವ ಜೋಡಿ ರಸ್ತೆಯಿಂದ (ಮೈಸೂರು-ಊಟಿ ರಸ್ತೆ) ಪ್ರವಾಸಿ ಮಂದಿರದ ತನಕ, ಪ್ರವಾಸಿ ಮಂದಿರದಿಂದ ಶಿವಾನಂದ ವೃತ್ತದ ತನಕ ಹಾಗೂ ಊಟಿ ಸರ್ಕಲ್‌ನಿಂದ ಮಹದೇವಪ್ರಸಾದ್ ನಗರ ತನಕದ ಜೋಡಿ ರಸ್ತೆಯಲ್ಲಿ ಬೀದಿ ದೀಪಗಳು ಕೆಟ್ಟಿವೆ. ಅಲ್ಲೊಂದು ಇಲ್ಲೊಂದು ಬೀದಿ ದೀಪಗಳು ಬೆಳುಕು ನೀಡುತ್ತಿವೆ.ರಾತ್ರಿ ವೇಳೆ ವಿದ್ಯುತ್ ಕೈ ಕೊಟ್ಟಾಗ ಮಾತ್ರ ಜೋಡಿ ರಸ್ತೆಗಳು ಸಂಪೂರ್ಣ ಕಗ್ಗತ್ತಲಲ್ಲಿ ಮುಳುಗುತ್ತವೆ. ಈ ವೇಳೆ ವಾಹನ ಸವಾರರು ಹಾಗೂ ಪಾದಚಾರಿಗಳ ಜೊತೆಗೆ ವಾಯು ವಿಹಾರಕ್ಕೆ ಹೋಗುವ ವೃದ್ಧರು, ಮಹಿಳೆಯರಿಗೆ ಬೀದಿ ದೀಪಗಳು ಇಲ್ಲದೆ ತೊಂದರೆಯಾಗಿದೆ.
ಪುರಸಭೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ದೀಪ ದುರಸ್ತಿ ಮಾಡಿಸುವ ಕೆಲಸ ಮಾಡುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.ಶಾಸಕರು ಮತ್ತೊಮ್ಮೆ ಹೇಳಲಿ:ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಗುಂಡ್ಲುಪೇಟೆ ಪಟ್ಟಣದ ನಡುವಿನ ಜೋಡಿ ರಸ್ತೆಯಲ್ಲಿ ಕೆಟ್ಟು ನಿಂತ ಬೀದಿದೀಪಗಳ ದುರಸ್ತಿಗೆ ಕಳೆದ ನಾಲ್ಕು ತಿಂಗಳ ಹಿಂದೆ ಕಾರಣರಾಗಿದ್ದು. ಈಗ ಮತ್ತೊಮ್ಮೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡುವಂತಾಗಲಿ. ಈ ಮೂಲಕ ಶಿವರಾತ್ರಿ ಹಬ್ಬದ ಸಮಯದಲ್ಲಾದರೂ ಬೆಳಕು ಕೊಡಿಸುವ ಪ್ರಯತ್ನ ಮಾಡಲೆಂದು ನಾಗರಿಕರು ಒತ್ತಾಯಿಸಿದ್ದಾರೆ.ಪಟ್ಟಣದ ಜೋಡಿ ರಸ್ತೆಯಲ್ಲಿ ಕೆಟ್ಟಿರುವ ಬೀದಿ ದೀಪಗಳ ದುರಸ್ತಿಗೆ ಪುರಸಭೆ ಕ್ರಮ ವಹಿಸಲಿದೆ. ಪುರಸಭೆಯ 12 ಲಕ್ಷ ಉಳಿತಾಯ ಹಣದಲ್ಲಿ ಟೆಂಡರ್ ಕರೆಯಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಕೆಟ್ಟ ಬೀದಿ ದೀಪಗಳನ್ನು ದುರಸ್ತಿಪಡಿಸಲಾಗುವುದು.
-ಕೆ.ಪಿ.ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ