ಕನ್ನಡಪ್ರಭ ವಾರ್ತೆ ನಾಗಮಂಗಲ
ಶ್ರೇಷ್ಠ ಸಂಸ್ಕಾರದೊಂದಿಗೆ ಸಕಲ ವೃತ್ತಿ ಗೌರವ ಕಲಿಸುವ ಜೊತೆಗೆ ಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯುವವನೇ ಗುರು ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಹೇಳಿದರು.ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ಗುರು ಸ್ಮೃತಿ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಬ್ರಹ್ಮ ವಿಷ್ಣು ಮಹೇಶ್ವರ ಎಂಬ ಭಾವನೆ ಮೂಲಕ ನೋಡುವಂತಹ ಶ್ರೇಷ್ಠ ಸ್ಥಾನವನ್ನು ನೀಡಲಾಗಿದೆ ಎಂದರು.
ಶ್ರೇಷ್ಠ ಮೌಲ್ಯಗಳನ್ನು ಬೋಧಿಸಿ, ಮೇರು ಶಿಕ್ಷಕರೆನಿಸಿ, ಭಾರತದ ಪ್ರಥಮ ಉಪ ರಾಷ್ಟ್ರಪತಿ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿದ ಕೃತಾರ್ಥ ಭಾವದೊಂದಿಗೆ ಅವರ ಆದರ್ಶ ಮತ್ತು ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆಯ ವಿಶಿಷ್ಟ ಯುಗವಾದ ಈ 21ನೇ ಶತಮಾನದಲ್ಲಿ ಶಿಕ್ಷಕರಾಗುತ್ತಿರುವ ನಿಮಗೆ ಕಲಿಕಾ ಆಸಕ್ತಿಯಿದ್ದರೆ ಕಲಿಸುವ ಕೌಶಲ್ಯವು ತಾನಾಗೇ ಸಿದ್ಧಿಸುತ್ತದೆ ಎಂದರು.ಪುರಾತನ ಕಾಲದ ಅಪೂರ್ವ ಸಂಸ್ಕೃತಿಯಾದ ಗುರುಕುಲ ಪದ್ಧತಿಯಲ್ಲಿ ಕಲಿತ ಜ್ಞಾನವು ಮಹಾನ್ ಸಾಧಕರನ್ನು ರೂಪುಗೊಳಿಸಿರುವ ಅನೇಕ ಉದಾಹರಣೆಗಳಿವೆ. ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು. ಆದ್ದರಿಂದ ಹೆತ್ತ ತಾಯಿಗೆ ಪ್ರಥಮ ನಮನ ಸಲ್ಲಿಸಿ ಆರಂಭಿಸಿದ ಯಾವ ಕಾರ್ಯಕ್ಕೂ ವಿಘ್ನ ಬರುವುದಿಲ್ಲ ಎಂದರು.
ಇದೇ ವೇಳೆ ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಟಿ.ಎನ್.ಶಿಲ್ಪಾ, ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ವಿ.ಪುಟ್ಟಸ್ವಾಮಿ ಮಾತನಾಡಿದರು. ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಶಿಕ್ಷಕರ ದಿನಾಚರಣೆಯ ಮಹತ್ವವನ್ನು ವಿವಿಧ ರೀತಿಯಲ್ಲಿ ಸಾದರಪಡಿಸಿದರು.ಕಾರ್ಯಕ್ರಮ ಸಂಯೋಜಕ ರಾಜಶೇಖರಮೂರ್ತಿ, ಪ್ರಾಧ್ಯಾಪಕರಾದ ಎ.ಸಿ.ದೇವಾನಂದ್, ಸಿ.ಎಲ್. ಶಿವಣ್ಣ, ಲೋಕೇಶ್ ಕುಮಾರ್, ಹಂಪೇಶ್, ಎಂ.ಶೋಭಾ, ಎನ್.ಎನ್.ಸೌಮ್ಯ, ರವಿಕುಮಾರ್ ಸೇರಿದಂತೆ ಹಲವರು ಇದ್ದರು.