ಕನ್ನಡಪ್ರಭ ವಾರ್ತೆ ಗುರುಮಠಕಲ್
ಬಿಜೆಪಿ ರಾಜ್ಯ ಘಟಕದ ನೂತನ ಪ್ರಧಾನ ಕಾಯದರ್ಶಿಯಾಗಿ ನಿಯುಕ್ತಿಗೊಂಡ ಮೇಲೆ ಗುರುಮಠಕಲ್ ನಗರಕ್ಕೆ ಆಗಮಿಸಿದ ಲಲಿತಾ ಅನಪೂರ ಅವರು, ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ನಂತರ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ರಾಮುಲು ಕೋಡಗಂಟಿ ಮನೆಗೆ ಭೇಟಿ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಟ್ಟೆ ಗೆದ್ದರೆ ದೇಶ ಗೆಲ್ಲುತ್ತೇವೆ ಎನ್ನುವುದು ರಾಜ್ಯಾಧ್ಯಕ್ಷ ಬಿ. ವಿಜಯೇಂದ್ರ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿಶ್ವಾಸವಾಗಿದೆ. ಅದಕ್ಕೆ ಪೂರಕವಾಗಿ ನಾನು ಕೂಡ ಮತಗಟ್ಟೆ ಹಂತದ ಸಮಿತಿ ಅಧ್ಯಕ್ಷರ ಮನೆಗೆ ಭೇಟಿ ನೀಡುವ ಮೂಲಕವೇ ಕೆಲಸ ಆರಂಭಿಸಿದ್ದೇನೆ ಎಂದರು.ಬಿಜೆಪಿಯಲ್ಲಿ ಕಾರ್ಯಕರ್ತರೆ ಬೆನ್ನೆಲುಬು. ಘಟಾನುಘಟಿ ನಾಯಕರು ಕೂಡ ಬೂತ್ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಸಂಘಟನೆಯಲ್ಲಿ ಬೂತ್ ಮಟ್ಟ ಬಹಳ ಪ್ರಾಮುಖ. ಬಿಜೆಪಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಿಗೆ ಸಿಗುವ ಗೌರವ ಬೂತ್ ಸಮಿತಿ ಅಧ್ಯಕ್ಷರಿಗೂ ಸಿಗುತ್ತದೆ ಎಂದರು.