ಕನ್ನಡಪ್ರಭ ವಾರ್ತೆ ಮೈಸೂರು
ಗುರು- ಶಿಷ್ಯರ ನಡುವಿನ ಪವಿತ್ರ ಸಂಬಂಧದ ಸಂಕೇತವಾಗಿ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ ಎಂದು ಮೈಸೂರು ಆಕಾಶವಾಣಿಯ ನಿವೃತ್ತ ಹಿರಿಯ ಉದ್ಘೋಶಕ ಪ್ರಭುಸ್ವಾಮಿ ಚ. ಮಳಿಮಠ ತಿಳಿಸಿದರು.ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀಸುತ್ತೂರು ಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗುರುವಾರ ಜರುಗಿದ ಗುರುಪೂರ್ಣಿಮೆ ಹಾಗೂ 281ನೇ ಬೆಳದಿಂಗಳ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಕೃತದಲ್ಲಿ ಗು ಎಂದರೆ ಅಂಧಃಕಾರ ಅಥವಾ ಅಜ್ಞಾನ, “ರು” ಎಂದರೆ ಕಳೆಯುವ ಅಥವಾ ದೂರ ಮಾಡುವ ಎನ್ನುವ ಅರ್ಥವಿದೆ. ಹೀಗಾಗಿ ಗುರು ಅಂಧಃಕಾರ ಮತ್ತು ಅಜ್ಞಾನವನ್ನು ದೂರ ಮಾಡುವವನು ಎಂದರು.
ಭಾರತೀಯ ಪಂಚಾಂಗದಲ್ಲಿ ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರುಪೂರ್ಣೆಮೆ ಎಂದು ಆಚರಿಸುತ್ತೇವೆ. ಈ ದಿನದಂದು ಗುರುವಿನ ಪ್ರಭಾವ ಬೇರೆ ದಿನಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಭಾರತೀಯರು ಈ ದಿನದಂದು ಗುರುವಿಗೆ ಪೂಜೆಯನ್ನು ಸಲ್ಲಿಸುವ ಸಂಪ್ರದಾಯವಿದೆ. ಗುರುಪೂರ್ಣೆಮೆಗೆ ಧಾರ್ಮಿಕವಾಗಿ ಮತ್ತು ಶೈಕ್ಷಣಿಕವಾಗಿಯೂ ಪ್ರಾಮುಖ್ಯತೆ ಇದೆ. ಭಾರತೀಯ ಪರಂಪರೆಯಲ್ಲಿ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿ ಗುರುಪೂರ್ಣಿಮೆಯನ್ನು ಆಚರಿಸಿದರೆ, ಬೌದ್ಧ ಧರ್ಮದಲ್ಲಿ ಬುದ್ಧರು ಪ್ರಥಮ ಧರ್ಮೋಪದೇಶ ನೀಡಿದ ಅಂಗವಾಗಿ ಇದನ್ನು ಆಚರಿಸುತ್ತಾರೆ ಎಂದು ಅವರು ಹೇಳಿದರು.ಭಾರತೀಯ ಶಾಸ್ತ್ರೀಯ ಸಂಗೀತವು ಗುರು- ಶಿಷ್ಯ ಪರಂಪರೆಯನ್ನು ಪಾಲಿಸುವುದರಿಂದ ಸಂಗೀತ ಕಲಿಯುವ ವಿದ್ಯಾರ್ಥಿಗಳು ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಗುರುಗಳಿಗೆ ವಂದಿಸಿ, ಆರಾಧಿಸಿ ಗೌರವಿಸುತ್ತಾರೆ. ಧರ್ಮ ಗ್ರಂಥಗಳಲ್ಲಿ ಗುರುವಿಗೆ ದೇವರಿಗಿಂತಲೂ ಹೆಚ್ಚಿನ ಸ್ಥಾನವಿದೆ. ಗುರುವೇ ಸರ್ವಸ್ವ, ಗುರುವಿಗೆ ನಿಷ್ಠೆಯೇ ಅಂತಿಮ ಧರ್ಮ ಎಂದು ಧರ್ಮ ಗ್ರಂಥಗಳು ಹೇಳುತ್ತವೆ. ಕನಕದಾಸರು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಗುರುವಿನ ಸ್ಥಾನ ಮತ್ತು ಮಹತ್ವವನ್ನು ಹೇಳಿದ್ದಾರೆ ಎಂದು ಅವರು ತಿಳಿಸಿದರು.
ನಂತರ ಜರುಗಿದ 281ನೇ ಬೆಳದಿಂಗಳ ಸಂಗೀತ ಕಾರ್ಯಕ್ರಮದಲ್ಲಿ ವಿದ್ವಾನ್‌ಸಂಪಗೋಡು ಎಸ್.ವಿಘ್ನರಾಜ ಅವರು ಗಾಯನ ಪ್ರಸ್ತುತಿ ಪಡಿಸಿದರು. ಅವರಿಗೆ ವಯೊಲಿನ್ ನಲ್ಲಿ ಎಸ್. ಜನಾರ್ಧನ್, ಮೃದಂಗದಲ್ಲಿ ಅನಿರುದ್ಧ ಎಸ್.ಭಟ್‌ಮತ್ತು ಘಟಂನಲ್ಲಿ ಎಂ.ಆರ್.ಮಂಜುನಾಥ್ ಸಾಥ್‌ನೀಡಿದರು. ಪ್ರೊ.ಕೆ. ರಾಮಮೂರ್ತಿ ರಾವ್ ನಿರೂಪಿಸಿದರು.ಗುರುಪೂರ್ಣಿಮೆ ಅಂಗವಾಗಿ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ
ಕನ್ನಡಪ್ರಭ ವಾರ್ತೆ ಮೈಸೂರುನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಸುಶಮಿಂದ್ರತೀರ್ಥ ಸೇವಾ ಸಮಿತಿಯಿಂದ ಗುರುಪೂರ್ಣಿಮೆ ಅಂಗವಾಗಿ ಶ್ರೀ ರಾಘವೇಂದ್ರಸ್ವಾಮಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಗೌರಿ ಹರೀಶ್ ಗೌಡ, ಕಿಶನ್ ಗೌಡ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಡಿ.ಟಿ. ಪ್ರಕಾಶ್, ಶ್ರೀ ಸುಶಮಿಂದ್ರತೀರ್ಥ ಸೇವಾ ಸಮಿತಿ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ವರುಣ ಮಹದೇವ್, ಕಾರ್ಯದರ್ಶಿ ಮಹದೇವ್, ಓಂಕಾರ್ ಆನಂದ್, ಸ್ವಾಮಿ, ಗಂಟಯ್ಯ, ಅರಮನೆ ಆಡಳಿತ ಗಿರೀಶ್ ಗೌಡ, ಮಹದೇವ್, ಸಂತೋಷ್ ಶಂಭು, ಪರಮೇಶ್ ಗೌಡ, ನವೀನ್ ಕುಮಾರ್, ಸಂದೀಪ್, ಎಸ್.ಎನ್. ರಾಜೇಶ್, ನವೀನ್, ಸುಬ್ಬಣ್ಣ, ಶೇಖರ್, ಕಾರ್ತಿಕ್, ಕಿರಣ್, ಅಕ್ಷಯ್ ಭಾಗವಹಿಸಿದ್ದರು.