ಬಳ್ಳಾರಿ ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಗುರುಪೂರ್ಣಿಮೆ; ದೇವಸ್ಥಾನದಲ್ಲಿ ಭಕ್ತರ ದಂಡು

KannadaprabhaNewsNetwork |  
Published : Jul 30, 2026, 02:15 AM IST
ಗುರುಪೂರ್ಣಿಮೆ ಹಿನ್ನಲೆಯಲ್ಲಿ ಬಳ್ಳಾರಿಯ ಸಾಯಿಬಾಬಾ ದೇವಸ್ಥಾನದಲ್ಲಿ ಭಕ್ತರು ಪೂಜಾ ಕಾರ್ಯ ಕೈಗೊಂಡು ಬಾಬಾರ ದರ್ಶನ ಪಡೆದರು.  | Kannada Prabha

ಸಾರಾಂಶ

ಮುಂಜಾನೆಯಿಂದಲೇ ದೇವಸ್ಥಾನಗಳಲ್ಲಿ ಭಕ್ತರ ದಂಡು ಸೇರಿದ್ದರಿಂದ ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಬಳ್ಳಾರಿ: ಜಿಲ್ಲೆಯಾದ್ಯಂತ ಗುರುಪೂರ್ಣಿಮೆಯನ್ನು ಬುಧವಾರ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿನ ಸಾಯಿಬಾಬಾ ಮಂದಿರಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಹೋಮ-ಹವನ, ಪಲ್ಲಕ್ಕಿ ಉತ್ಸವ ಹಾಗೂ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಮುಂಜಾನೆಯಿಂದಲೇ ದೇವಸ್ಥಾನಗಳಲ್ಲಿ ಭಕ್ತರ ದಂಡು ಸೇರಿದ್ದರಿಂದ ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ನಗರದ ವಿಶಾಲ್ ನಗರ, ಕೋಟೆ ಪ್ರದೇಶ, ರೇಡಿಯೋ ಪಾರ್ಕ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ಸಾಯಿಬಾಬಾ ಮಂದಿರಗಳು ಭಕ್ತರಿಂದ ಕಿಕ್ಕಿರಿದು ತುಂಬಿದ್ದವು. ಗುರುಪೂರ್ಣಿಮೆ ಅಂಗವಾಗಿ ಬಾಬಾರವರ ಮೂರ್ತಿಗೆ ಪಂಚಾಮೃತ, ಕ್ಷೀರ, ಗಂಗಾಜಲ ಸೇರಿದಂತೆ ವಿವಿಧ ಅಭಿಷೇಕಗಳನ್ನು ನೆರವೇರಿಸಲಾಯಿತು. ಬಣ್ಣ ಬಣ್ಣದ ಹೂವುಗಳಿಂದ ಅಲಂಕೃತಗೊಂಡ ಬಾಬಾರವರ ದಿವ್ಯ ಮೂರ್ತಿ ಭಕ್ತರ ಗಮನ ಸೆಳೆಯಿತು. ದೇವಸ್ಥಾನಗಳನ್ನು ವಿದ್ಯುತ್ ದೀಪಾಲಂಕಾರ ಹಾಗೂ ಹೂವಿನ ತೋರಣಗಳಿಂದ ಸಿಂಗರಿಸಲಾಗಿದ್ದು, ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು.

ವಿಶಾಲ್ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಬೆಳಿಗ್ಗೆ 5 ಗಂಟೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಶ್ರೀಗಣಪತಿ ಪೂಜೆ, ಮಂಗಳ ಸ್ನಾನ, ಕ್ಷೀರಾಭಿಷೇಕ, ಸಂಕೀರ್ತನೆ, ವೇದಘೋಷ, ಪಾದುಕಾ ಪೂಜೆ ಹಾಗೂ ಗಂಗಾಜಲಾಭಿಷೇಕ ನೆರವೇರಿದವು. ನಂತರ ನಡೆದ ಲಘು ಆರತಿ, ಪಲ್ಲಕ್ಕಿ ಉತ್ಸವ ಮತ್ತು ಮಹಾಮಂಗಳಾರತಿಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಸಾಯಿನಾಮ ಸ್ಮರಣೆ ಮಾಡಿದರು. "ಓಂ ಸಾಯಿ ರಾಮ್ " ಎಂಬ ಜಯಘೋಷಗಳಿಂದ ದೇವಸ್ಥಾನದ ಆವರಣ ಮೊಳಗಿತು.

ಗುರುಪೂರ್ಣಿಮೆ ಹಿನ್ನೆಲೆ ಬೆಳಗಿನ ಜಾವದಿಂದಲೇ ಜಿಲ್ಲೆ ಸೇರಿದಂತೆ ನೆರೆಯ ಪ್ರದೇಶಗಳಿಂದಲೂ ಭಕ್ತರು ತಂಡೋಪತಂಡವಾಗಿ ಆಗಮಿಸಿದರು. ಕೆಲವರು ಕುಟುಂಬ ಸಮೇತರಾಗಿ, ಇನ್ನೂ ಕೆಲವರು ಭಜನಾ ಮಂಡಳಿಗಳೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಸರದಿ ಸಾಲಿನಲ್ಲಿ ನಿಂತು ಬಾಬಾರವರ ದರ್ಶನ ಪಡೆದ ಭಕ್ತರು ತಮ್ಮ ಇಷ್ಟಾರ್ಥಗಳು ಈಡೇರಲಿ ಎಂದು ಪ್ರಾರ್ಥಿಸಿದರು.

ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಆಡಳಿತ ಮಂಡಳಿಯು ಸರದಿ ಸಾಲಿನ ವ್ಯವಸ್ಥೆ ಕಲ್ಪಿಸಿತ್ತು. ಕುಡಿವ ನೀರು, ನೆರಳಿನ ವ್ಯವಸ್ಥೆ ಹಾಗೂ ಸ್ವಯಂಸೇವಕರ ಮೂಲಕ ಮಾರ್ಗದರ್ಶನ ನೀಡಲಾಗಿತ್ತು. ಜನದಟ್ಟಣೆ ಹೆಚ್ಚಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕಲ್ಪಿಸಿತ್ತು.

ದರ್ಶನಕ್ಕೆ ಆಗಮಿಸಿದ ಎಲ್ಲ ಭಕ್ತರಿಗೆ ದೇವಸ್ಥಾನದ ಆವರಣದಲ್ಲಿ ಮಹಾಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ನೂರಾರು ಸ್ವಯಂಸೇವಕರು ಪ್ರಸಾದ ವಿತರಣೆ ಹಾಗೂ ಭಕ್ತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಸಾವಿರಾರು ಮಂದಿ ಪ್ರಸಾದ ಸ್ವೀಕರಿಸಿ ಗುರುಪೂರ್ಣಿಮೆಯ ಪುಣ್ಯವನ್ನು ಪಡೆದರು.

ಜಿಲ್ಲೆಯ ವಿವಿಧ ತಾಲ್ಲೂಕು ಹಾಗೂ ಗ್ರಾಮಗಳಲ್ಲಿರುವ ಸಾಯಿ ಮಂದಿರಗಳಲ್ಲೂ ಇದೇ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಜನೆ, ಸಂಕೀರ್ತನೆ, ಸತ್ಸಂಗ, ಪಾರಾಯಣ, ಆರತಿ ಹಾಗೂ ಅನ್ನದಾಸೋಹ ಕಾರ್ಯಕ್ರಮಗಳು ದಿನವಿಡೀ ನಡೆದವು. ಗುರುಪೂರ್ಣಿಮೆ ಅಂಗವಾಗಿ ಅನೇಕ ಭಕ್ತರು ಉಪವಾಸ ಆಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾರ್ಥಕ ಬದುಕಿಗೆ ವಚನಗಳ ಸಾರ ದಾರಿದೀಪ
ನಗರಸಭೆಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ