ಜಾಲಿ ಯೋಗ ತರಬೇತಿ ಕೇಂದ್ರದಲ್ಲಿ ಗುರುಪೂರ್ಣಿಮೆ ಆಚರಣೆ

KannadaprabhaNewsNetwork |  
Published : Aug 01, 2026, 03:30 AM IST
ಭಟ್ಕಳದ ಜಾಲಿಯ ಯೋಗ ತರಬೇತಿ ಕೇಂದ್ರದಲ್ಲಿ ಗುರು ಪೂರ್ಣಿಮೆ ಆಚರಿಸಲಾಯಿತು. | Kannada Prabha

ಸಾರಾಂಶ

ನಮ್ಮನ್ನು ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನ -ಸುಜ್ಞಾನ -ವಿಜ್ಞಾನದ ಬೆಳಕಿನ ಕಡೆಗೆ ಕರೆದೊಯ್ಯುವ ಗುರುವಿನ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಭಟ್ಕಳ

ಗುರುಪೂರ್ಣಿಮೆ ಕೇವಲ ಹಬ್ಬವಲ್ಲ ಅದು ಗುರು- ಶಿಷ್ಯರ ಪವಿತ್ರ ಸಂಬಂಧವನ್ನು ಸ್ಮರಿಸುವ, ಗುರುವನ್ನು ಗೌರವಿಸುವ ಶುಭ ದಿನ. ನಮ್ಮನ್ನು ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನ -ಸುಜ್ಞಾನ -ವಿಜ್ಞಾನದ ಬೆಳಕಿನ ಕಡೆಗೆ ಕರೆದೊಯ್ಯುವ ಗುರುವಿನ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದು ಸಾಹಿತಿ ಶ್ರೀಧರ್ ಶೇಟ್ ಶಿರಾಲಿ ಹೇಳಿದರು.

ಜಾಲಿಯ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಆವರಣದಲ್ಲಿರುವ ಯೋಗ ತರಬೇತಿ ಕೇಂದ್ರದಲ್ಲಿ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಭಾರತೀಯ ಜ್ಞಾನಪರಂಪರೆಯ ಮಹತ್ವದ ವ್ಯಕ್ತಿಯಾಗಿರುವ, ಮಹಾಭಾರತ ಮತ್ತು ಪುರಾಣಗಳನ್ನು ರಚನೆ ಮಾಡಿ ವೇದಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ವಿಭಾಗಿಸಿ, ಮುಂದಿನ ಪೀಳಿಗೆಗೆ ಜ್ಞಾನ ತಲುಪುವ ಹಾಗೆ ಮಾಡಿದ ಮಹಾನ್ ವ್ಯಕ್ತಿ ಆಗಿರುವ ವೇದವ್ಯಾಸರನ್ನು ಸ್ಮರಿಸಿ ಗೌರವಿಸುವ ದಿನವೇ ಗುರು ಪೂರ್ಣಿಮೆಯಾಗಿದ್ದು, ನಮ್ಮ ಬದುಕಿಗೆ ಬೆಳಕು ತೋರುವ ಎಲ್ಲ ವ್ಯಕ್ತಿಗಳು ಗುರುವಿನ ಸ್ಥಾನದಲ್ಲಿ ನಿಲ್ಲುತ್ತಾರೆ. ನಮ್ಮ ಜೀವನದಲ್ಲಿ ತಾಯಿಯ ಋಣ, ತಂದೆಯ ಋಣ, ಗುರುವಿನ ಋಣ ಮತ್ತು ಸಮಾಜದ ಋಣವನ್ನು ತೀರಿಸಬೇಕಾಗುತ್ತದೆ ಎಂದು ಹೇಳಿದರು. ಭಟ್ಕಳ ಅರ್ಬನ್ ಕೋ- ಆಪರೇಟಿವ್ ಬ್ಯಾಂಕಿನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಸುಭಾಷ್ ಶೆಟ್ಟಿ ಮಾತನಾಡಿ, ಗುರುವು ನಮ್ಮ ಬದುಕನ್ನು ತಿದ್ದಿ -ತೀಡಿ ಹೊಸ ಬದುಕನ್ನು ಕಟ್ಟಿಕೊಡುತ್ತಾನೆ. ಅಂತಹ ಗುರುವಿಗೆ ಗೌರವ ನೀಡಬೇಕಾಗಿದ್ದು ನಮ್ಮ ಆದ್ಯ ಕರ್ತವ್ಯ. ಆದರೆ ಇಂದಿನ ಯುವ ಪೀಳಿಗೆಯಲ್ಲಿ ಅಂತಹ ಸೌಜನ್ಯ ಸಂಸ್ಕಾರ ಕಡಿಮೆಯಾಗುತ್ತಿದ್ದು, ಅವರೆಲ್ಲ ಮೊಬೈಲ್ ನ ದಾಸರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಯೋಗ ಗುರು ಗೋವಿಂದ ಗುರೂಜಿಯವರು ಮಾತನಾಡಿದರು. ಪ್ರಾರಂಭದಲ್ಲಿ ಗುರುವಿನ ಮಹಿಮೆಯನ್ನು ಸಾರುವ ಭಜನೆ ಹಾಡಲಾಯಿತು. ವೇದವ್ಯಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಭಟ್ಕಳ ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಯೋಗಾಭ್ಯಾಸಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಅರಣ್ಯವಾಸಿಗಳ ಆಕ್ರೋಶ
ರೋಟರಿ ಕ್ಲಬ್‌ನಿಂದ ಪತ್ರಕರ್ತರಿಗೆ ಸನ್ಮಾನ