ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಡಿಜಿಟಲ್ ಮೂಲಕ ದಾಖಲಿಸಲು ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ಎಐ ಆಧಾರಿತ ನಿರಂತರ ಆ್ಯಪ್ ಆರಂಭದಲ್ಲೇ ತಾಂತ್ರಿಕ ಸಮಸ್ಯೆಗಳಿಂದ ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿದೆ.
ಶಾಲೆಯಲ್ಲೇ ಇದ್ದರೂ ಲೊಕೇಶನ್ ದೂರ । ನಿರಂತರ ಆ್ಯಪ್ ಎಡವಟ್ಟು
ರಾಘು ಕಾಕರಮಠ
ಕನ್ನಡಪ್ರಭ ವಾರ್ತೆ ಅಂಕೋಲಾ
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಡಿಜಿಟಲ್ ಮೂಲಕ ದಾಖಲಿಸಲು ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ಎಐ ಆಧಾರಿತ ನಿರಂತರ ಆ್ಯಪ್ ಆರಂಭದಲ್ಲೇ ತಾಂತ್ರಿಕ ಸಮಸ್ಯೆಗಳಿಂದ ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿದೆ. ನೆಟ್ವರ್ಕ್ ಸಮಸ್ಯೆ, ಲೊಕೇಶನ್ ದೋಷ ಹಾಗೂ ಮುಖ ಗುರುತಿಸುವ ಪ್ರಕ್ರಿಯೆಯಲ್ಲಿನ ವ್ಯತ್ಯಯಗಳಿಂದ ಹಾಜರಾತಿ ದಾಖಲಿಸಲು ಶಿಕ್ಷಕರು ಹರಸಾಹಸ ಪಡುವಂತಾಗಿದೆ.
ತಾಲೂಕಿನ ಹಲವು ಶಾಲೆಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಮತ್ತೊಂದೆಡೆ, ಶಾಲೆಯ ಆವರಣದಲ್ಲೇ ಇದ್ದರೂ ನೀವು ಶಾಲೆಯ ಲೊಕೇಶನ್‌ನಿಂದ ದೂರ ಇದ್ದೀರಿ ಎಂಬ ಸಂದೇಶ ಆ್ಯಪ್‌ನಲ್ಲಿ ಕಾಣಿಸಿಕೊಳ್ಳುತ್ತಿದೆ. ಪರಿಣಾಮವಾಗಿ ಶಿಕ್ಷಕರು ವಿದ್ಯಾರ್ಥಿಗಳನ್ನು ಶಾಲೆಯ ಹೊರಭಾಗಕ್ಕೆ ಕರೆದುಕೊಂಡು ಹೋಗಿ ಹಾಜರಾತಿ ದಾಖಲಿಸುವ ಅನಿವಾರ್ಯ ಪರಿಸ್ಥಿತಿ ಎದುರಿಸುವಂತಾಗಿದೆ.
ಆ್ಯಪ್‌ನ ತಾಂತ್ರಿಕ ಸಮಸ್ಯೆಯಿಂದ ವಿದ್ಯಾರ್ಥಿಗಳ ಹಾಜರಾತಿ ಸರಿಯಾಗಿ ಆಗದೇ ಇರುವದರಿಂದ ಮಕ್ಕಳ ಬಿಸಿಯೂಟಕ್ಕೂ ಕೂಡ ಸಮಸ್ಯೆಯಾಗುತ್ತಿದೆ ಎಂದು ಕೆಲವು ಶಿಕ್ಷಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.ಪಾಠಕ್ಕಿಂತ ಹಾಜರಾತಿಗೇ ಹೆಚ್ಚು ಸಮಯ:
ವಿದ್ಯಾರ್ಥಿಗಳ ಡಿಜಿಟಲ್ ಹಾಜರಾತಿಗಾಗಿ ಶಿಕ್ಷಕರು ಪ್ರತಿದಿನ ಸಾಕಷ್ಟು ಸಮಯ ವ್ಯಯಿಸಬೇಕಾಗುತ್ತಿದೆ. ತಾಂತ್ರಿಕ ದೋಷಗಳಿಂದ ವಿದ್ಯಾರ್ಥಿಗಳ ಹಾಜರಾತಿ ತಪ್ಪಿಹೋಗಬಹುದೆಂಬ ಆತಂಕದಲ್ಲಿ ಶಿಕ್ಷಕರು ಪಾಠದ ಮೇಲಿನ ಏಕಾಗ್ರತೆಯನ್ನೇ ಕಳೆದುಕೊಳ್ಳುವಂತಾಗಿದೆ. ಹೀಗಾಗಿ ಬೋಧನಾ ಚಟುವಟಿಕೆಗಳ ಮೇಲೂ ಪರಿಣಾಮ ಉಂಟಾಗುತ್ತಿದೆ ಎನ್ನುವುದು ಶಿಕ್ಷಕರ ಅಳಲಾಗಿದೆ. 6612 ವಿದ್ಯಾರ್ಥಿಗಳ ನೋಂದಣಿ:
ಅಂಕೋಲಾ ತಾಲೂಕಿನಲ್ಲಿ 71 ಕಿರಿಯ ಪ್ರಾಥಮಿಕ, 75 ಹಿರಿಯ ಪ್ರಾಥಮಿಕ ಹಾಗೂ 11 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 157 ಸರ್ಕಾರಿ ಶಾಲೆಗಳಿವೆ. ತಾಲೂಕಿನಲ್ಲಿ 6,664 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ 6,612 ವಿದ್ಯಾರ್ಥಿಗಳು ನಿರಂತರ ಆ್ಯಪ್‌ನಲ್ಲಿ ನೋಂದಣಿಯಾಗಿದ್ದಾರೆ.
ಉಳಿದ 54 ವಿದ್ಯಾರ್ಥಿಗಳು ಇನ್ನೂ ನೋಂದಣಿಯಾಗಿಲ್ಲ. ಕೆಲವು ಮಕ್ಕಳು ವಿಕಲಚೇತನರಾಗಿದ್ದು ಗೃಹಾಧಾರಿತ ಶಿಕ್ಷಣ ಪಡೆಯುತ್ತಿರುವುದರಿಂದ ಹಾಗೂ ಕೆಲವು ಅವಳಿ-ಜವಳಿ ಮಕ್ಕಳ ಮುಖಚಹರೆ ಒಂದೇ ರೀತಿಯಿರುವ ಕಾರಣ ಮುಖ ಗುರುತಿಸುವ ವ್ಯವಸ್ಥೆಯಲ್ಲಿ ನೋಂದಣಿ ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.ಏನಿದು ನಿರಂತರ ಆ್ಯಪ್:
ಈ ಹಿಂದೆ ಶಿಕ್ಷಕರ ಹಾಜರಾತಿಗಾಗಿ ಕರ್ತವ್ಯ ಆ್ಯಪ್ ಬಳಸಲಾಗುತ್ತಿತ್ತು. ಇದೀಗ ಅದೇ ಮಾದರಿಯಲ್ಲಿ ವಿದ್ಯಾರ್ಥಿಗಳಿಗೂ ಎಐ ಆಧಾರಿತ ನಿರಂತರ ಆ್ಯಪ್ ಜಾರಿಗೊಳಿಸಲಾಗಿದೆ. 2026-27ನೇ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಹಾಗೂ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಈ ಆ್ಯಪ್ ಮೂಲಕವೇ ವಿದ್ಯಾರ್ಥಿಗಳ ಹಾಜರಾತಿ ದಾಖಲಿಸಲು ಶಿಕ್ಷಣ ಇಲಾಖೆ ಸೂಚಿಸಿದೆ.
ಹೊಸ ವ್ಯವಸ್ಥೆಯಂತೆ ದಿನಕ್ಕೆ ಎರಡು ಬಾರಿ ವಿದ್ಯಾರ್ಥಿಗಳ ಹಾಜರಾತಿ ಪಡೆಯಲಾಗುತ್ತದೆ. ಶಿಕ್ಷಕರು ತರಗತಿಯಲ್ಲಿರುವ ವಿದ್ಯಾರ್ಥಿಗಳ ಭಾವಚಿತ್ರವನ್ನು ಸೆರೆಹಿಡಿದ ತಕ್ಷಣ ಎಐ ತಂತ್ರಜ್ಞಾನ ಮುಖಗಳನ್ನು ಗುರುತಿಸಿ ಹಾಜರಾತಿಯನ್ನು ಇಲಾಖೆಯ ಸರ್ವರ್ಗೆ ರವಾನಿಸುತ್ತದೆ. ಈ ಮೂಲಕ ಸಾಂಪ್ರದಾಯಿಕ ಹಾಜರಾತಿ ಪುಸ್ತಕಕ್ಕೆ ವಿದಾಯ ಹೇಳಲಾಗಿದೆ.ನಿರಂತರ ಆ್ಯಪ್‌ನ ಪ್ರಕ್ರಿಯೆ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಅಲ್ಲಲ್ಲಿ ಚಿಕ್ಕ ಪುಟ್ಟ ತಾಂತ್ರಿಕ ಸಮಸ್ಯೆಗಳಿವೆ. ಅದನ್ನು ಕೂಡ ಪರಿಶೀಲಿಸಿ ಬಗೆಹರಿಸಿ ಕೊಡುವಂತೆ ತಾಂತ್ರಿಕ ಸಮಿತಿಗೆ ವರದಿ ಮಾಡಲಾಗಿದೆ. ಸದ್ಯದಲ್ಲಿಯೇ ಎಲ್ಲ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನುತ್ತಾರೆ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.