ಹೌದು. ಶ್ರೀಧರ ಕಾಸರಕೋಡ ರಂಗಕ್ಕೆ ಬಂದರೆಂದರೆ ನಗೆಯ ಬುಗ್ಗೆಯೇ ಎದ್ದುಬಂದಂತೆ. ಅವರ ನಡೆ, ನುಡಿ, ಶರೀರ, ಹಾವ ಭಾವ ಎಲ್ಲದೂ ಹಾಸ್ಯರಸವನ್ನು ಕಟ್ಟಿಕೊಡುತ್ತದೆ.
ಚಂದ್ರಾವಳಿ ವಿಲಾಸದ ಅಜ್ಜಿಯ ಕುಣಿತ, ಗದಾಯುದ್ಧದ ಬೇಹಿನಚರ, ಭೀಷ್ಮ ವಿಜಯದ ಬ್ರಾಹ್ಮಣ, ರಾವಣನೊಂದಿಗೆ ಬರುವ ದೂತ, ದಾರುಕ...... ಹೀಗೆ ಹತ್ತು ಹಲವು ಪಾತ್ರಗಳಿಗೆ ಕಾಸರಕೋಡ ತಮ್ಮ ಅಚ್ಚನ್ನು ಒತ್ತಿದ್ದರು.
ಗುಂಡಬಾಳ, ಮಂದರ್ತಿ, ಸಾಲಿಗ್ರಾಮ, ಜಲವಳ್ಳಿ ಮೇಳಗಳಲ್ಲದೆ ಅತಿಥಿ ಕಲಾವಿದರಾಗಿ ಶ್ರೀಧರ ಭಟ್ ಎಲ್ಲೆಡೆ ವಿಜ್ರಂಭಿಸುತ್ತಿದ್ದರು. ಚಂದ್ರಾವಳಿ ವಿಲಾಸದ ಅಜ್ಜಿಯಾಗಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಕಾಸರಕೋಡ ಶರಸೇತುಬಂಧದ ಬ್ರಾಹ್ಮಣನಾಗಿ ಅಷ್ಟೇ ತೂಕದ ಮಾತುಗಳನ್ನು ಆಡುತ್ತಿದ್ದರು. ಯಕ್ಷಗಾನದಲ್ಲಿ ನಾಯಕ, ಖಳನಾಯಕನ ಪಾತ್ರಕ್ಕಿರುವ ಮಹತ್ವವನ್ನು ಹಾಸ್ಯಪಾತ್ರಕ್ಕೂ ನೀಡುವಂತೆ ಮಾಡಿದ ಹಾಸ್ಯಕಲಾವಿದರಲ್ಲಿ ಶ್ರೀಧರ ಭಟ್ ಅವರದ್ದು ಪ್ರಮುಖ ಹೆಸರು.
ಪ್ರಸಿದ್ಧ ಭಾಗವತರುಗಳಾದ ಸುಬ್ರಹ್ಮಣ್ಯ ಧಾರೇಶ್ವರ, ಕೇಶವ ಹೆಗಡೆ ಕೊಳಗಿ, ರಾಘವೇಂದ್ರ ಆಚಾರ್ಯ ಜನ್ಸಾಲೆ, ಸರ್ವೇಶ್ವರ ಹೆಗಡೆ ಮೂರೂರು ಮತ್ತಿತರ ಭಾಗವತರೊಂದಿಗೆ ರಂಗದಲ್ಲಿ ಶ್ರೀಧರ ಭಟ್ ನಡೆಸುವ ಮಾತುಕತೆ ಪ್ರೇಕ್ಷಕರನ್ನು ತುದಿಗಾಲಿನ ಮೇಲೆ ನಿಲ್ಲಿಸುತ್ತಿತ್ತು.
ದಿ.ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೃಷ್ಣ ಯಾಜಿ ಬಳ್ಕೂರ, ಕೊಂಡದಕುಳಿ ರಾಮಚಂದ್ರ ಹೆಗಡೆ, ವಿದ್ಯಾಧರ ಜಲವಳ್ಳಿ, ಸುಬ್ರಹ್ಮಣ್ಯ ಚಿಟ್ಟಾಣಿ ಮತ್ತಿತರ ಪ್ರಸಿದ್ಧ ಕಲಾವಿದರೊಂದಿಗೆ ಹಾಸ್ಯ ಪಾತ್ರ ಮಾಡಿ ಗಮನ ಸೆಳೆಯುತ್ತಿದ್ದರು.
ವಿಶೇಷವಾಗಿ ಪೌರಾಣಿಕ ಪ್ರಸಂಗಗಳಲ್ಲಿ ಮಿಂಚುತ್ತಿದ್ದ ಅವರ ಹಾಸ್ಯದಲ್ಲಿ ಅಶ್ಲೀಲ ನುಸುಳುತ್ತಿರಲಿಲ್ಲ. ಶಬ್ದಗಳು ಹಾಗೂ ವಾಕ್ಯಗಳ ಬಳಕೆಯಲ್ಲೂ ನಗೆಯ ಅಲೆಯನ್ನು ಎಬ್ಬಿಸುತ್ತಿದ್ದ ಶ್ರೀಧರ ಭಟ್ ಈಗ ನೆನಪಷ್ಟೇ.
ಶ್ರೀಧರ ಭಟ್ ಕಾಸರಕೋಡ ಒಬ್ಬ ಜನ್ಮಜಾತ ಕಲಾವಿದ. ಅವರ ನಿಧನ ಯಕ್ಷರಂಗಕ್ಕಷ್ಟೇ ಅಲ್ಲ. ವೈಯಕ್ತಿಕವಾಗಿ ನನಗೂ ತುಂಬಾ ನೋವು ಉಂಟಾಗಿದೆ. ರಂಗದಲ್ಲಿ ಅವರ ಪ್ರವೇಶವೇ ಪ್ರೇಕ್ಷಕರಲ್ಲಿ ನಗೆಯನ್ನು ಉಕ್ಕಿಸುತ್ತಿತ್ತು ಎನ್ನುತ್ತಾರೆ ಪ್ರಸಿದ್ಧ ಯಕ್ಷಗಾನ ಕಲಾವಿದ ಜಲವಳ್ಳಿ ವಿದ್ಯಾಧರ ರಾವ್.ಹೊನ್ನಾವರ: ಯಕ್ಷಗಾನ ಕಲಾವಿದ ಕಾಸರಕೋಡ್ ಶ್ರೀಧರ್ ಭಟ್ ನಿಧನ;ಯಕ್ಷರಂಗದ ಅಪ್ರತಿಮ ಹಾಸ್ಯ ಚಕ್ರವರ್ತಿ ಎಂದು ಜನಮನ್ನಣೆ ಪಡೆದಿದ್ದ ಯಕ್ಷಗಾನ ಕಲಾವಿದ ಶ್ರೀಧರ ಭಟ್ ಕಾಸರಕೋಡ್ (52) ಶುಕ್ರವಾರ ನಿಧನರಾದರು.
ಕೆಲವು ದಿನಗಳ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಹೋಗುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಪತ್ನಿ ,ಇಬ್ಬರು ಪುತ್ರರು ಸೇರಿ ಅಪಾರ ಅಭಿಮಾನಿ ಬಳಗವಿದೆ
ಸಾವಿರಾರು ಜನರನ್ನು ನಗಿಸಿದ್ದ, ಸಹಜ ಹಾಸ್ಯ ಅಭಿನಯದ ಮೂಲಕ ಎಲ್ಲರ ಮನ ಗೆದ್ದ ಹಿರಿಯ ಹಾಸ್ಯ ಕಲಾವಿದ ಶ್ರೀಧರ್ ಭಟ್ ಕಾಸರಕೋಡು ಮೂರುವರೆ ದಶಕಗಳಿಂದ ಯಕ್ಷ ರಂಗದಲ್ಲಿ ಮಿಂಚುತ್ತಿದ್ದರು. ಜೋಕಮಾರ ಸ್ವಾಮಿ, ಅಜ್ಜಿಯ ಪಾತ್ರ, ಸುತ್ರಧಾರಿ ಸೇರಿ ವಿವಿಧ ಪಾತ್ರದ ಮೂಲಕ ಮಿಂಚುತ್ತಿದ್ದರು. ಸಹಜ ಹಾಸ್ಯ, ತಾಳ್ಮೆ, ಸಮಯಪ್ರಜ್ಞೆ, ಪ್ರೇಕ್ಷಕರೊಂದಿಗೆ ಒಡನಾಟ ಹೊಂದಿರುವ ಕಲಾವಿದರಾಗಿದ್ದರು. ಗುಂಡಬಾಳ, ಮಂದಾರ್ತಿ, ಸಾಲಿಗ್ರಾಮ, ಜಲವಳ್ಳಿ, ಮೇಳದ ಹಾಸ್ಯಕಲಾವಿದರಾಗಿ ಸೇವೆ ಸಲ್ಲಿಸಿದ್ದರು.
ಮೂಲತಃ ಕಾಸರಕೋಡಿನವರಾಗಿ, ಪ್ರಸುತ್ತ ಸಾಲ್ಕೋಡ್ ಗ್ರಾಮದ ಮುಲ್ಲೆಮಕ್ಕಿಯಲ್ಲಿ ವಾಸವಾಗಿದ್ದರು. ಇವರ ಅಂತ್ಯಕ್ರಿಯೆ ಸಾಲ್ಕೋಡ್ ಗ್ರಾಮದ ತಮ್ಮ ಸ್ವಗೃಹದ ಸಮೀಪ ನಡೆಯಲಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಯಕ್ಷಗಾನ ಕಲಾವಿದರಾದ ವಿದ್ಯಾಧರ ಜಲವಳ್ಳಿ, ಶಿವಾನಂದ ಹೆಗಡೆ ಕೆರೆಮನೆ, ಶಂಕರ ಹೆಗಡೆ ನೀಲ್ಕೋಡ್, ಕಲಾ ಪೋಷಕರಾದ ಶಿವಾನಂದ ಹೆಗಡೆ ಕಡತೋಕಾ, ರಾಜು ಭಂಡಾರಿ, ನಾಗರಾಜ ಹೆಗಡೆ ಖಾಸ್ಕಂಡ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.