ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಲದಿಂದ ಗುರುಭಿಕ್ಷಾ ಸೇವೆ
ಏನನ್ನು ತಿನ್ನಬೇಕು, ಎಷ್ಟು ತಿನ್ನಬೇಕು ಮತ್ತು ಯಾವಾಗ ತಿನ್ನಬೇಕು ಎಂಬ ಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ತಿಳಿದರೆ ಆರೋಗ್ಯಕರ ಜೀವನ ನಡೆಸುವುದು ಸುಲಭವಾಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಆಶೀರ್ವಚನ ಅನುಗ್ರಹಿಸಿದ ಶ್ರೀಗಳು, ಆಯುರ್ವೇದದ ಮಹರ್ಷಿ ವಾಗ್ಭಟರು ಪ್ರತಿಪಾದಿಸಿರುವ ಹಿತವಾದ ಆಹಾರ ಸೇವಿಸಿ, ಮಿತ ಪ್ರಮಾಣದಲ್ಲಿ ತಿನ್ನಿ ಮತ್ತು ಸಕಾಲದಲ್ಲಿ ಊಟ ಮಾಡಿ ಎಂಬ ಸರಳ ಸೂತ್ರವೇ ಆರೋಗ್ಯಕರ ಬದುಕಿನ ಆಧಾರ. ನಮ್ಮ ಶರೀರ ಬೆಲೆಬಾಳುವಂತಹದ್ದು. ದೇಹ ಕೆಡುವಂತಹ ಆಹಾರವನ್ನು ಸೇವಿಸಬಾರದು. ಮಿತಿ ಮೀರಿದ ಸೇವನೆ ಅಪಾಯಕ್ಕೆ ದಾರಿ ಎಂದು ವಿವರಿಸಿದರು.ಪ್ರತಿಯೊಬ್ಬರೂ ಊಟ ಮಾಡುವ ಮುನ್ನ ಇದು ನನಗೆ ಹಿತವೇ? ಎಷ್ಟು ಪ್ರಮಾಣದಲ್ಲಿ ತಿನ್ನಬೇಕು? ಈಗ ಇದನ್ನು ತಿನ್ನಲು ಸರಿಯಾದ ಸಮಯವೇ? ಎಂಬ ಪ್ರಶ್ನೆಗಳನ್ನು ತಮ್ಮನ್ನು ತಾವು ಕೇಳಿಕೊಳ್ಳಬೇಕು. ಆಹಾರದ ಆಯ್ಕೆಗೆ ಹೆಚ್ಚಿನ ಮಹತ್ವ ನೀಡುತ್ತಾ, ಸಿಕ್ಕಿದ್ದನ್ನೆಲ್ಲ ತಿನ್ನುವ ಬದಲು ಆಯ್ಕೆ ಮಾಡಿ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನಮ್ಮ ಮುಂದೆ ಎಷ್ಟೇ ರುಚಿಕರ ಆಹಾರ ಇದ್ದರೂ, ದೇಹಕ್ಕೆ ಹಿತವಾದದ್ದು ಯಾವುದು ಮತ್ತು ಬಿಡಬೇಕಾದದ್ದು ಯಾವುದು ಎಂಬ ವಿವೇಕ ಇರಬೇಕು. ಆಹಾರದ ಆಯ್ಕೆಯೇ ಉತ್ತಮ ಆರೋಗ್ಯದ ಮೊದಲ ಹೆಜ್ಜೆ ಎಂದರು.
ಎಷ್ಟೇ ಉತ್ತಮ ಆಹಾರವಾಗಿದ್ದರೂ ಅಕಾಲದಲ್ಲಿ ಸೇವಿಸಿದರೆ ಅದು ದೇಹಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತದೆ. ಸರಿಯಾದ ಸಮಯದಲ್ಲಿ ಸೇವಿಸಿದ ಆಹಾರ ದೇಹಕ್ಕೆ ಪೋಷಣೆ ನೀಡುತ್ತದೆ. ಆದರೆ ಸಮಯ ಮೀರಿ ಅಥವಾ ಅಸಮಯದಲ್ಲಿ ಸೇವಿಸಿದರೆ ಅದೇ ಆಹಾರ ದುಷ್ಪರಿಣಾಮ ಉಂಟುಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ವೇ. ರವೀಂದ್ರ ಕೊಡ್ಲಕೆರೆ ದಂಪತಿ ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಲದ ಪರವಾಗಿ ಗುರುಭಿಕ್ಷಾಸೇವೆ ನೆರವೇರಿಸಿದರು. ಉಪಾಧಿವಂತ ಮಂಡಲದ ವೇ.ಪರಮೇಶ್ವರ ಭಟ್ ಮಾರ್ಕಂಡೆ, ವೇ.ರಮೇಶ ಪ್ರಸಾದ, ವೇ. ಬಾಲಕೃಷ್ಣ ಜಂಬೆ, ವೇ.ಪ್ರಶಾಂತ ಹಿರೇಗಂಗೆ ಸೇರಿ ಉಪಾಧಿವಂತರು ಉಪಸ್ಥಿತರಿದ್ದರು. ಚಾತುರ್ಮಾಸ್ಯದ ಸಂಯೋಜಕರಾದ ಅಜಿತ ಗುಡ್ಗೆ, ಶ್ರೀಕೃಷ್ಣ ಎಂ. ಶಾಸ್ತ್ರಿ, ಸೌಮ್ಯಾ ಮಧ್ಯಸ್ಥ, ಶ್ರೀವತ್ಸ ಭೀಮನಕೋಣೆ, ದಿನ ಪ್ರಧಾನರಾಗಿ ಈಶ್ವರ ಗಾಂವ್ಕರ್ ದಂಪತಿ ಉಪಸ್ಥಿತರಿದ್ದರು.ದೀರ್ಘಾಯುಷ್ಯ ನೀಡುವುದೇ ಆಹಾರದ ನಿಜವಾದ ಗುರಿ