ಕನ್ನಡಪ್ರಭ ವಾರ್ತೆ ಇಳಕಲ್ಲ ಸಾರ್ವಜನಿಕರಲ್ಲಿ ಎಚ್‌ಐವಿ ಹಾಗೂ ಏಡ್ಸ್‌ ರೋಗದ ಕುರಿತು ಇರುವ ಭಯ ಮತ್ತು ತಪ್ಪು ಕಲ್ಪನೆಗಳನ್ನು ನಿವಾರಿಸಿ, ರೋಗದ ಹರಡುವಿಕೆ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು ಎಂದು ರಂಗ ಸಂಗಮದ ಸದಸ್ಯ ಮಹಾಂತೇಶ ಗಜೇಂದ್ರಗಡ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಸಾರ್ವಜನಿಕರಲ್ಲಿ ಎಚ್‌ಐವಿ ಹಾಗೂ ಏಡ್ಸ್‌ ರೋಗದ ಕುರಿತು ಇರುವ ಭಯ ಮತ್ತು ತಪ್ಪು ಕಲ್ಪನೆಗಳನ್ನು ನಿವಾರಿಸಿ, ರೋಗದ ಹರಡುವಿಕೆ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು ಎಂದು ರಂಗ ಸಂಗಮದ ಸದಸ್ಯ ಮಹಾಂತೇಶ ಗಜೇಂದ್ರಗಡ ಹೇಳಿದರು.

ನಗರದ ಬಸ್‌ ನಿಲ್ದಾಣ ಸೇರಿದಂತೆ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಎಚ್‌ಐವಿ ಹಾಗೂ ಏಡ್ಸ್‌ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. ಕರ್ನಾಟಕ ಸರ್ಕಾರ, ರಾಜ್ಯ ಏಡ್ಸ್‌ ಪ್ರಿವೆನ್ಷನ್‌ ಸೊಸೈಟಿ ಬೆಂಗಳೂರು, ಬಾಗಲಕೋಟ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಬಾಗಲಕೋಟ, ಸಾರ್ವಜನಿಕ ಆಸ್ಪತ್ರೆ ಇಳಕಲ್ಲ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಳಕಲ್ಲ ಇವರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಇಳಕಲ್ಲ ನಗರದ ಬಸ್‌ ನಿಲ್ದಾಣ, ಕಂಠಿ ವೃತ್ತ, ಗಾಂಧಿ ಚೌಕ ಹಾಗೂ ಬನ್ನಿಕಟ್ಟಿ ಪ್ರದೇಶಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಬೀದಿ ನಾಟಕ ಪ್ರದರ್ಶಿಸಿ ಸಾರ್ವಜನಿಕರಲ್ಲಿ ಎಚ್‌ಐವಿ–ಏಡ್ಸ್‌ ಕುರಿತು ಜಾಗೃತಿ ಮೂಡಿಸಿದರು.ರಂಗ ಸಂಗಮದ ಸದಸ್ಯ ಮಹಾಂತೇಶ ಗಜೇಂದ್ರಗಡ ಅವರು ನಾಟಕವನ್ನು ನಿರ್ದೇಶಿಸಿದ್ದು, ಉಪನ್ಯಾಸಕ ಅಜೀಜ್‌ ಜಮಾದಾರ ಅವರು ನಿರ್ವಹಣೆ ಮಾಡಿದರು. ಕಾಲೇಜಿನ ವಿದ್ಯಾರ್ಥಿನಿಯರು ಅತ್ಯುತ್ತಮ ಅಭಿನಯದ ಮೂಲಕ ಎಚ್‌ಐವಿ–ಏಡ್ಸ್‌ ತಡೆಗಟ್ಟುವಿಕೆ, ಮುಂಜಾಗ್ರತಾ ಕ್ರಮಗಳು ಹಾಗೂ ರೋಗದ ಕುರಿತು ವೈಜ್ಞಾನಿಕ ಅರಿವಿನ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸಿದರು.ಬೀದಿ ನಾಟಕ ವೀಕ್ಷಿಸಿದ ಸಾರ್ವಜನಿಕರು ವಿದ್ಯಾರ್ಥಿನಿಯರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.