ಹೊಸಪೇಟೆ: ವಿಜಯನಗರ ಜಿಲ್ಲೆಯಾದ್ಯಂತ ಸಾಯಿಬಾಬಾ ಮಂದಿರಗಳಲ್ಲಿ ಗುರು ಪೂರ್ಣಿಮಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಅಪಾರ ಜನಸ್ತೋಮ ಸರತಿ ಸಾಲಿನಲ್ಲಿ ನಿಂತು ಕ್ಷೀರಾಭಿಷೇಕ ಮಾಡಿ ಬಾಬಾ ಅವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು.
ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ ಮತ್ತು ಹೂವಿನಹಡಗಲಿ ತಾಲೂಕುಗಳಲ್ಲೂ ಗುರು ಪೂರ್ಣಿಮೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಶಿರಡಿ ಸಾಯಿಬಾಬಾ ಸೇವಾ ಸಮಿತಿ ಮತ್ತು ಯುವಕ ಮಂಡಳಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಗುರುಪೂರ್ಣಿಮಾ ಮಹೋತ್ಸವನ್ನು ಏರ್ಪಡಿಸಲಾಗಿತ್ತು. ನಗರದ ಸಹಕಾರ ಕಲ್ಯಾಣ ಮಂಟಪದಲ್ಲಿ ಶ್ರೀ ಸಾಯಿಬಾಬಾ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.
ನಗರದ ಕೊಂಡನಾಯಕನಹಳ್ಳಿಯ ಶ್ರೀ ಸಾಯಿಬಾಬಾ ಮಂದಿರ, ರೈಲ್ವೆ ನಿಲ್ದಾಣ ರಸ್ತೆಯ ಸಾಯಿಬಾಬಾ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿಯ ಸಾಯಿಬಾಬಾ ಆಶ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಢದರು.ಸಾಯಿಬಾಬಾ ದೇವಾಲಯಗಳಲ್ಲಿ ಬೆಳಗ್ಗೆ ಬಾಬಾಗೆ ಐದು ಗಂಟೆಗೆ ಪುರೋಹಿತರು ಸುಪ್ರಭಾತ ಸೇವೆ ಕಾಕಡಾರತಿ, ಮೂಲ ದೇವರಿಗೆ ಅಭಿಷೇಕ, ಬೆಳಗ್ಗೆ 5.30 ರಿಂದ 6.30ಕ್ಕೆ ಕ್ಷೀರಾಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಸಾಯಿಬಾಬಾ ಅವರ ಭಜನೆ ಗೀತೆಗಳು ಕೂಡ ನಡೆಯಿತು. ಇನ್ನೂ ಬೆಳಗ್ಗೆ 7 ಗಂಟೆಗೆ ಮಹಾಮಂಗಳಾರತಿ ನಡೆಯಿತು. ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶ್ರೀ ಶಿರಡಿ ಸಾಯಿಬಾಬಾ ಭಕ್ತಾದಿಗಳಿಂದ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಅಪಾರ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಬಾಬಾ ಅವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು.
ಗುರುಪರಂಪರೆ ಸಂಗೀತ ಕಾರ್ಯಕ್ರಮದಲ್ಲಿ ಸಾಯಿ ಭಜನೆ, ಸಾಮೂಹಿಕ ವಿಷ್ಣುಸಹಸ್ರನಾಮ, ದೇವರ ಕೀರ್ತಿನೆಗಳು, ಗುರುದೇವೋತ್ಸವ ಕಾರ್ಯಕ್ರಮಗಳು ಕೂಡ ನಡೆದವು. ಭಕ್ತರು ಮಳೆಯನ್ನು ಲೆಕ್ಕಿಸದೇ ಸಾಯಿಬಾಬಾ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು.