ಗಂಗಾವತಿ: ಹರ ಮುನಿದರೂ ಗುರು ಕಾಯುವನಂತೆ ಎಂಬಂತೆ ಪ್ರತಿಯೊಬ್ಬ ವ್ಯಕ್ತಿಯ ಜೀವನ ಸಾರ್ಥಕತೆಗೆ ಗುರುಗಳ ಅನುಗ್ರಹ ಅತ್ಯವಶ್ಯವಾಗಿದೆ ಎಂದು ಶಂಕರಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.
ಶ್ರೀಮಠದ ನಿರ್ಮಾಣಕ್ಕೆ ಪೂರ್ವದಲ್ಲಿ ಹಲವು ದಶಕಗಳಿಂದ ಶ್ರೀಶಂಕರಾಚಾರ್ಯ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಹಲವು ವೈವಿಧ್ಯಮಯವಾದ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಸುವುದರ ಮೂಲಕ ಧರ್ಮ ಜಾಗೃತಿ ಹಾಗೂ ಸಮಾಜದ ಸಂಘಟನೆಗೆ ಗಮನ ಹರಿಸುತ್ತಾ ಬರಲಾಗಿದೆ. ದಿ.ಭೀಮಸೇನ್‌ರಾವ್ ಅಳವಂಡಿಕರ್ ಪರಿಶ್ರಮದಿಂದ ಹಾಗೂ ಶೃಂಗೇರಿಯ ಜಗದ್ಗುರು ಭಾರತಿತೀರ್ಥ ಮಹಾಸ್ವಾಮಿಗಳ ವಜ್ರೋತ್ಸವ ಹಾಗೂ ವಿದುಶೇಖರ ಮಹಾಸ್ವಾಮಿಗಳ ಅನುಗ್ರಹದ ಮೇರೆಗೆ ಸರ್ವ ಜನಾಂಗದವರ ಸಹಕಾರದಿಂದ ನಗರದಲ್ಲಿ ಶೃಂಗೇರಿ ಪೀಠದ ಉಭಯ ಜಗದ್ಗುರುಗಳ ಅನುಗ್ರಹದಿಂದ ಶ್ರೀಮಠ ಸ್ಥಾಪಿಸಿ ಎಂಟು ವರ್ಷ ಪೂರೈಸಿದ್ದು, ಶ್ರೀಮಠದ ಎಲ್ಲ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸಾಂಗತವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದತ್ತಾತ್ರೇಯ ಪಾದುಕೆಗಳಿಗೆ ಅಭಿಷೇಕ, ಅಷ್ಟೋತ್ತರ ಪಾರಾಯಣ, ಪಲ್ಲಕ್ಕಿ ಉತ್ಸವ, ತೊಟ್ಟಿಲು ಸೇವೆ ಕಾರ್ಯಕ್ರಮವನ್ನು ಮಹೇಶ್ ಭಟ್ ಜೋಷಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ನಡೆಸಿಕೊಟ್ಟರು. ಕಾರ್ಯಕ್ರಮವು ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದರ ಮೂಲಕ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಜಗನ್ನಾಥ್ ಅಳವಂಡಿಕರ್, ಬಾಲಕೃಷ್ಣ ದೇಸಾಯಿ, ಶೇಷಗಿರಿ ಗಡಾದ್, ಶ್ರೀನಿವಾಸ ಕರಮುಡಿ, ಭೀಮಾಶಂಕರ್ ಹೊಸಳ್ಳಿ, ನಾಗೇಶ್, ಅನಿಲ್ ಭಟ್, ಕಾಶಿನಾಥ್ ಭಟ್ ಜೋಶಿ, ಸುದರ್ಶನ ವೈದ್ಯ ಸೇರಿದಂತೆ ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.