ಗುರು ಸಿದ್ಧರಾಮೋತ್ಸವ ಅಡ್ಡಪಲ್ಲಕ್ಕಿ ಸಾಂಸ್ಕೃತಿಕ ಉತ್ಸವ

KannadaprabhaNewsNetwork |  
Published : May 18, 2026, 01:30 AM IST
ಹಾಸನಾಂಬ ದೇವಿ ಆವರಣದಲ್ಲಿರುವ ಶ್ರೀ ಸಿದ್ಧೇಶ್ವರ ದೇವಾಲಯದಲ್ಲಿ ಪ್ರಥಮ ವರ್ಷದ ಶ್ರೀ ಗುರು ಸಿದ್ದರಾಮೋತ್ಸವವನ್ನು ಆಚರಿಸಿದರು.  | Kannada Prabha

ಸಾರಾಂಶ

ಉತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಯ ಬಸವನಂದ ಸ್ವಾಮೀಜಿ ಮಾತನಾಡಿ, ಪ್ರಥಮ ವರ್ಷದ ಶ್ರೀ ಗುರು ಸಿದ್ಧರಾಮೋತ್ಸವವನ್ನು ಹಾಸನದಲ್ಲಿ ಅತ್ಯಂತ ಭಕ್ತಿಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಸಿಂಹಾಸನಪುರಿ ಎಂಬ ಹೆಗ್ಗಳಿಕೆ ಹೊಂದಿರುವ ಹಾಸನ ಜಿಲ್ಲೆಯಲ್ಲಿ ತಾಯಿ ಹಾಸನಾಂಬೆ ನೆಲೆಸಿದ್ದು, ಈ ಪುಣ್ಯಭೂಮಿಯಲ್ಲಿ ಶ್ರೀ ಗುರು ಸಿದ್ಧರಾಮೇಶ್ವರ ಸ್ವಾಮಿಯವರ ಉತ್ಸವ ನಡೆಯುತ್ತಿರುವುದು ವಿಶೇಷವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಹಾಸನಾಂಬಾ ದೇವಿ ಆವರಣದಲ್ಲಿರುವ ಶ್ರೀ ಸಿದ್ಧೇಶ್ವರ ದೇವಾಲಯದಲ್ಲಿ ಪ್ರಥಮ ವರ್ಷದ ಶ್ರೀ ಗುರು ಸಿದ್ಧರಾಮೋತ್ಸವವನ್ನು ಆಚರಿಸಿದರು.

ಭಾನುವಾರ ಸಂಜೆ ದೇವರ ಉತ್ಸವ ಹಾಗೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ಜರುಗಿತು. ಉತ್ಸವದ ವಿಶೇಷ ಆಕರ್ಷಣೆಯಾಗಿ ದೊಡ್ಡನಹಳ್ಳಿ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಪೂಜಾ ಕುಣಿತ, ವೀರಗಾಸೆ, ನಂದಿಧ್ವಜ ಹಾಗೂ ಮದ್ದು ಗುಂಡಿನ 64 ಪ್ರದರ್ಶನಗಳು ಭಕ್ತರ ಗಮನ ಸೆಳೆದವು. ಬಳಿಕ ಶ್ರೀ ಸ್ವಾಮಿಯವರ ಅದ್ಧೂರಿ ಅಡ್ಡ ಪಲ್ಲಕ್ಕಿ ಉತ್ಸವ ಭಕ್ತರ ಜಯಘೋಷದ ನಡುವೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಭಕ್ತರಿಗೆ ದರ್ಶನ ನೀಡಿತು. ಉತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಯ ಬಸವನಂದ ಸ್ವಾಮೀಜಿ ಮಾತನಾಡಿ, ಪ್ರಥಮ ವರ್ಷದ ಶ್ರೀ ಗುರು ಸಿದ್ಧರಾಮೋತ್ಸವವನ್ನು ಹಾಸನದಲ್ಲಿ ಅತ್ಯಂತ ಭಕ್ತಿಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಸಿಂಹಾಸನಪುರಿ ಎಂಬ ಹೆಗ್ಗಳಿಕೆ ಹೊಂದಿರುವ ಹಾಸನ ಜಿಲ್ಲೆಯಲ್ಲಿ ತಾಯಿ ಹಾಸನಾಂಬೆ ನೆಲೆಸಿದ್ದು, ಈ ಪುಣ್ಯಭೂಮಿಯಲ್ಲಿ ಶ್ರೀ ಗುರು ಸಿದ್ಧರಾಮೇಶ್ವರ ಸ್ವಾಮಿಯವರ ಉತ್ಸವ ನಡೆಯುತ್ತಿರುವುದು ವಿಶೇಷವಾಗಿದೆ ಎಂದರು.

ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ 1948ನೇ ಶ್ರೀ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಅಧಿಕ ಜೇಷ್ಠ ಮಾಸ ಪಾಡ್ಯದ ಅಂಗವಾಗಿ ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮಿಯವರ ಉತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು. ಸೀಗೆಗುಡ್ಡದ ನಂದೇಶ್ವರ ಶಿವಚಾರ್ಯ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ಶರಣರ ಪರಂಪರೆ ಬಸವಣ್ಣನ ತತ್ವಗಳ ಸುತ್ತಲೇ ಬೆಳಗಿದೆ. ಬಸವಣ್ಣ ಮತ್ತು ಬಸವೇಶ್ವರ ಒಂದೇ ಮಹಾನ್ ಚೇತನದ ಹೆಸರುಗಳು. ಎಲ್ಲೆಲ್ಲಿ ಸಿದ್ದರಾಮೇಶ್ವರರ ಕೃಪೆ ಇರುತ್ತದೆಯೋ ಅಲ್ಲಿ ಬರಗಾಲಕ್ಕೂ ಅವಕಾಶ ಇರುವುದಿಲ್ಲ, ಸಮೃದ್ಧಿ ನೆಲೆಸುತ್ತದೆ ಎಂದು ಹೇಳಿದರು. ಈ ಉತ್ಸವದ ಮೂಲಕ ಸಮಾಜದಲ್ಲಿ ಸುಖ, ಶಾಂತಿ ಹಾಗೂ ಧಾರ್ಮಿಕ ಸೌಹಾರ್ದತೆ ಹೆಚ್ಚಲಿ ಎಂದು ಹಾರೈಸಿದರು.

ಬೆಳಿಗ್ಗೆ ಹಾಸನಾಂಬಾ ದೇವಾಲಯಕ್ಕೆ ಶ್ರೀ ಸ್ವಾಮಿಯವರ ಆಗಮನವು ನಡೆಯಿತು. ಬಳಿಕ ಮಧ್ಯಾಹ್ನ1 ಗಂಟೆಯಿಂದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಸನ್ನಿಧಿಯಲ್ಲಿ ಮಹಾ ರುದ್ರಾಭಿಷೇಕ, ಶಿವಾಷ್ಟೋತ್ತರ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿತು. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆಯೂ ಮಾಡಲಾಗಿತ್ತು. ನಂತರ ನಡೆದ ಅದ್ದೂರಿ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಸ್ವಾಮಿಯವರ ಆಶೀರ್ವಾದ ಪಡೆದರು.

ಪೂಜಾ ಕುಣಿತ, ವೀರಗಾಸೆ ಹಾಗೂ ನಂದಿಧ್ವಜ ಪ್ರದರ್ಶನಗಳು ಉತ್ಸವಕ್ಕೆ ಮತ್ತಷ್ಟು ಕಳೆ ತಂದವು. ಈ ಸಂದರ್ಭದಲ್ಲಿ ಶ್ರೀ ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಚಲನಚಿತ್ರ ನಟ ಮನು, ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾದ ಉಪಾಧ್ಯಕ್ಷೆ ಚಂದ್ರಕಲಾ, ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಕಸಾಪ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು, ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ನಾಗೇಂದ್ರಸ್ವಾಮಿ, ಖಜಾಂಚಿ ತ್ಯಾಗರಾಜು, ಸಚಿನ್, ವಿನಯ್, ರೇವಣ್ಣ, ದಯಾನಂದ, ಶ್ರೀ ಸಿದ್ದೇಶ್ವರ ಪ್ರಕಾಶ್, ಹಾಸನಾಂಬಾ ದೇವಾಲಯದ ಅರ್ಚಕ ನಾಗರಾಜು, ಬಸವ ಕೇಂದ್ರದ ಅಧ್ಯಕ್ಷ ಬಸವರಾಜು, ಶೋಭಾ ಮಹೇಶ್, ವೇಧವತಿ, ಶಿವಣ್ಣ, ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಈಶ್ವರ್‌ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎತ್ತಿನಗಾಡಿ ಓಟ ನಮ್ಮ ಗ್ರಾಮೀಣ ಪ್ರದೇಶದ ಸೊಗಡಿನ ಸಂಸ್ಕೃತಿಯ ಪ್ರತಿಬಿಂಬ
ರೈತರ ಆರ್ಥಿಕ ಪ್ರಗತಿಗೆ ಕೈ ಜೋಡಿಸಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ