ಗುರು ಸಿದ್ಧಾರೂಢರು ನಂದಾದೀಪವಿದ್ದಂತೆ

KannadaprabhaNewsNetwork | Published : Nov 8, 2023 1:00 AM

ಸಾರಾಂಶ

ಹುಬ್ಬಳ್ಳಿಯಲ್ಲಿ ಬಾಳಿ ಬದುಕಿದ ಸದ್ಗುರು ಸಿದ್ಧಾರೂಢರು ನಂದಾದೀಪವಿದ್ದಂತೆ. ಸದಾಕಾಲ ಭಕ್ತರ ಉದ್ಧಾರಕ್ಕಾಗಿಯೇ ಸೇವೆ ಸಲ್ಲಿಸಿದವರು ಇಂದಿಗೂ, ಎಂದೆಂದಿಗೂ ಭಕ್ತರ ಮನದಲ್ಲಿ ನೆಲೆಸಿರುತ್ತಾರೆ ಎಂದು ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ ಗುರೂಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಬಾಳಿ ಬದುಕಿದ ಸದ್ಗುರು ಸಿದ್ಧಾರೂಢರು ನಂದಾದೀಪವಿದ್ದಂತೆ. ಸದಾಕಾಲ ಭಕ್ತರ ಉದ್ಧಾರಕ್ಕಾಗಿಯೇ ಸೇವೆ ಸಲ್ಲಿಸಿದವರು ಇಂದಿಗೂ, ಎಂದೆಂದಿಗೂ ಭಕ್ತರ ಮನದಲ್ಲಿ ನೆಲೆಸಿರುತ್ತಾರೆ ಎಂದು ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ ಗುರೂಜಿ ಹೇಳಿದರು.

ಮಂಗಳವಾರ ಇಲ್ಲಿನ ಸಿದ್ಧಾರೂಢ ಮಠದ ಆವರಣದ ಶಾಂತಾಶ್ರಮದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೊಡ್ಡವರ ದೊಡ್ಡತನ ಇರುವುದು ಅವರ ಕೆಲಸದಲ್ಲಿ. ಗುರು ಸಿದ್ಧಾರೂಢರು ಭಕ್ತರ ಸೇವೆಯಲ್ಲಿಯೇ ಜೀವನ ಸವೆಸಿದವರು. ನಾವೆಲ್ಲ ಶಿವನ ಹುಡುಕಿಕೊಂಡು ಕೈಲಾಸಕ್ಕೆ ಹೋದರೆ, ಸಿದ್ಧಾರೂಢರು ಭಕ್ತರನ್ನು ಅರಸಿ ಹುಬ್ಬಳ್ಳಿಗೆ ಬಂದು ನೆಲೆಸಿದವರು. ರಾಜಕೀಯಕ್ಕೆ ಅಂತ್ಯವಿದೆ. ಆದರೆ, ಧರ್ಮ, ಮಠಮಾನ್ಯಗಳಿಗೆ ಅಂತ್ಯವೆಂಬುದಿಲ್ಲ. ಭಕ್ತರ ಉದ್ಧಾರಕ್ಕಾಗಿಯೇ ಇರುವಂತಹವು ಎಂಬುದನ್ನು ಜನತೆ ಅರಿತುಕೊಳ್ಳಬೇಕಿದೆ ಎಂದರು.

ಮಮತೆಯ ಧಾರೆ ಎರೆಯುವ ತಾಯಿಯು ತನ್ನ ಮುಪ್ಪಾವಸ್ಥೆಯಲ್ಲಿ ತನ್ನನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂಬ ಉದ್ದೇಶದಿಂದ ತನ್ನ ಮಗುವನ್ನು ಕಾಳಜಿಯಿಂದ ಪಾಲನೆ ಮಾಡುತ್ತಾಳೆ. ಆದರೆ, ಗುರು ಎಂದಿಗೂ ತನ್ನ ಶಿಷ್ಯರನ್ನು ಸ್ವಹಿತಾಸಕ್ತಿಯ ಉದ್ದೇಶವನ್ನಿಟ್ಟು ಬೆಳೆಸುವುದಿಲ್ಲ. ಅವರ ಕಾಳಜಿಯಲ್ಲಿ ಗುರುವನ್ನು ಮೀರಿಸುವ ಶಿಷ್ಯನಾಗಲಿ ಎಂಬ ಉದ್ದೇಶ ಅಡಗಿರುತ್ತದೆ. ಗುರುಪಾದರ ಪಾದುಕಾತೀರ್ಥ ಸೇವೆಯಾದರೆ ತೀರ್ಥಯಾತ್ರೆ ಮಾಡಿದಷ್ಟೇ ಪುಣ್ಯಪ್ರಾಪ್ತಿಯಾಗುತ್ತದೆ. ಸನಾತನ ಧರ್ಮ ಎಂದರೆ ಬೆಳಕು ಇದ್ದಂತೆ. ಬೆಳಕಾದವನು ಮಾತ್ರ ಬೆಳಕಿನ ಅರ್ಥ ತಿಳಿಯಲು ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು.

ಈ ವೇಳೆ ಕಾಡನಕೊಪ್ಪದ ದಯಾನಂದ ಸರಸ್ವತಿ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಆಲಮಟ್ಟಿ ಹಿರೇಮಠದ ರುದ್ರಮುನಿ ಶ್ರೀಗಳು, ಗಬ್ಬೂರ ಬೂದಿಬಸವೇಶ್ವರ ಮಠದ ಬೂದಿಬಸವೇಶ್ವರ ಶಿವಾಚಾರ್ಯರು, ಮಿಟ್ಟಿಮಲ್ಕಾಪುರ ಶಾಂತಾಶ್ರಮದ ನಿಜಾನಂದ ಶ್ರೀಗಳು, ಖುರ್ದಕಂಚನಹಳ್ಳಿ ಸಿದ್ಧಾರೂಢ ಮಠದ ಸುಬ್ರಹ್ಮಣ್ಯ ಶ್ರೀಗಳು, ದಯಾನಂದ ಶ್ರೀಗಳು, ಅಭಿನವ ರೇವಣಸಿದ್ದ ಶ್ರೀಗಳು, ನಿರುಪಾಧೀಶ್ವರ ಶ್ರೀಗಳು, ಶಿವಾನಂದ ಶ್ರೀಗಳು, ಸದಾಶಿವ ಶ್ರೀಗಳು, ಡಾ. ಮಹಾಂತಪ್ರಭು ಶ್ರೀಗಳು, ರಾಮಾನಂದಭಾರತಿ ಶ್ರೀಗಳು, ಶಿವಕುಮಾರ ಶ್ರೀಗಳು, ಪ್ರಶಾಂತ ದೇವರು ಸೇರಿದಂತೆ ಹಲವರಿದ್ದರು.

Share this article