ಲಕ್ಷ್ಮೀ ಹವಗ್ರೀವ ಪದವಿ ಪೂರ್ವ ಕಾಲೇಜಿನಲ್ಲಿ ವಿಶೇಷವಾಗಿ ನಡೆದ ಗುರುವಂದನೆ

KannadaprabhaNewsNetwork | Published : Jan 20, 2025 1:31 AM

ಸಾರಾಂಶ

ಶಿಥಿಲಾವಸ್ಥೆಯಲ್ಲಿ ಕಟ್ಟಡಲ್ಲಿದ್ದ ಕಾಲೇಜನ್ನು ಮುಚ್ಚುವ ನಿರ್ಧಾರ ಮಾಡಿದ ವೇಳೆ ನನ್ನ ಮನವಿಗೆ ಸ್ಪಂದಿಸಿದ ಮೈಸೂರು ಬ್ರಹ್ಮತಂತ್ರ ಪರಕಾಲಶ್ರೀಗಳು ನೂತನ ಕಟ್ಟಡ ಕಟ್ಟಿಸಿ ಲಕ್ಷ್ಮೀಹಯಗ್ರೀವ ಪದವಿ ಪೂರ್ವಕಾಲೇಜು ಎಂದು ನಾಮಕರಣ ಮಾಡಿ ಮರುಜೀವ ನೀಡಿದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮೇಲುಕೋಟೆಯಲ್ಲಿ ಲಕ್ಷ್ಮೀಹಯಗ್ರೀವ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ ಬಹಳ ವಿಶೇಷವಾಗಿ ನಡೆಯಿತು.

ಕಾಲೇಜು ಪ್ರಾರಂಭದಿಂದ 2025ರ ವರೆಗಿನ ಗುರುಗಳು ಒಂದೆ ಕಡೇ ಸೇರಿದರು. ವೀಲ್ ಚೇರಿನಲ್ಲಿ ವೇದಿಕೆಗೆ ಬಂದ ಕಾಲೇಜು ಆರಂಭಿಸಿದ್ದ ಪ್ರಾಂಶುಪಾಲರು ಹಾಗೂ ಗಣ್ಯರನ್ನು ದೇವಾಲಯದಿಂದ ಮಂಗಳವಾದ್ಯ, ಕಳಸ, ಜಾನಪದ ಕಲಾತಂಡಗಳೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.

ನಂತರ ಪ್ರಾಂಶುಪಾಲ ನರಸಿಂಹ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಥಿಲಾವಸ್ಥೆಯಲ್ಲಿ ಕಟ್ಟಡಲ್ಲಿದ್ದ ಕಾಲೇಜನ್ನು ಮುಚ್ಚುವ ನಿರ್ಧಾರ ಮಾಡಿದ ವೇಳೆ ನನ್ನ ಮನವಿಗೆ ಸ್ಪಂದಿಸಿದ ಮೈಸೂರು ಬ್ರಹ್ಮತಂತ್ರ ಪರಕಾಲಶ್ರೀಗಳು ನೂತನ ಕಟ್ಟಡ ಕಟ್ಟಿಸಿ ಲಕ್ಷ್ಮೀಹಯಗ್ರೀವ ಪದವಿ ಪೂರ್ವಕಾಲೇಜು ಎಂದು ನಾಮಕರಣ ಮಾಡಿ ಮರುಜೀವ ನೀಡಿದರು ಎಂದರು.

ರಾಜ್ಯದಲ್ಲೇ ಮೊದಲ ಬಾರಿಗೆ ಕಾಲೇಜಿನಲ್ಲಿ ಮಧ್ಯಾಹ್ನದ ಊಟ ಆರಂಭಿಸಿದರು. ಸರ್ಕಾರ ನಿಗದಿ ಪಡಿಸಿದ ಪರೀಕ್ಷೆ ಹೊರತುಪಡಿಸಿ ಯಾವುದೇ ಶುಲ್ಕ ಪಡೆಯಬಾರದು ಎಂದು ಹೇಳಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಪದವಿ ಪೂರ್ವ ಶಿಕ್ಷಣಪಡೆಯುವ ಅವಕಾಶ ಕಲ್ಪಿಸಿದರು ಎಂದರು.

ಶಿಕ್ಷಣ ಇಲಾಖೆ ಅಧಿಕಾರಿ ಹಾಗೂ ಹಿರಿಯ ವಿದ್ಯಾರ್ಥಿ ಗೋಪಾಲಗೌಡ ಮಾತನಾಡಿ, ಶ್ರೀಯೋಗನರಸಿಂಹಸ್ವಾಮಿ ಬೆಟ್ಟದ ತಪ್ಪಲನ ಪದವಿ ಪೂರ್ವ ಕಾಲೇಜು ಮೇಲುಕೋಟೆ ಸುತ್ತಮುತ್ತಲ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆಧಾರವಾಗಿತ್ತು ಎಂದರು.

ಉಪನ್ಯಾಸಕರು ವಿದ್ಯಾರ್ಥಿಗಳ ಬೆಳವಣಿಗೆಗೆ ಸೇವೆ ಮುಡಿಪಾಗಿಟ್ಟು ಶ್ರಮಿಸಿದ ಕಾರಣ ಶೇ.80 ಮಂದಿ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಶಿಕ್ಷಕರು, ಅಧಿಕಾರಿಗಳು, ವಕೀಲರು, ದೇವಾಲಯದ ಕೈಂಕರ್ಯಪರರು, ಪತ್ರಕರ್ತರು ಸ್ವಯಂ ಉದ್ಯೋಗದಲ್ಲಿರುವ ಎಲ್ಲರೂ ಸೇರಿ ಗುರುವಂದನಾ ಕಾರ್ಯಕ್ರಮ ಏರ್ಪಡಿಸಿದ್ದೇವೆ ಎಂದರು.

ಹಿರಿಯ ಗಾಂಧಿವಾದಿ ಸುರೇಂದ್ರ ಕೌಲಗಿ ಅವರು ಜನಪದ ಸೇವಾ ಟ್ರಸ್ಟ್ ಮೂಲಕ ಆರಂಭಿಸಿದ್ದ ಪದವಿ ಪೂರ್ವಕಾಲೇಜು ಪರಕಾಲ ಮಠದ ಹಳೆಕಟ್ಟಡ ಮತ್ತು ಮಂಟಪದಲ್ಲಿ ನಡೆಯುತ್ತಿತ್ತು. ನಂತರ ಮೈಸೂರು ರಾಜಗುರು ಪರಕಾಲ ಮಠಕ್ಕೆ ವರ್ಗಾವಣೆಯಾದ ನಂತರ ನೂತನ ಕಟ್ಟಡದೊಂದಿಗೆ ಲಕ್ಷ್ಮೀಹಯಗ್ರೀವ ಸ್ವತಂತ್ರ ಪದವಿ ಪೂರ್ವ ಕಾಲೇಜಾಗಿ ಪರಿವರ್ತಿತವಾಗಿ ಶ್ರೀಮಠದ ನಿರ್ವಹಣೆಗೆ ಸೇರಿ ನಡೆಯುತ್ತಿದೆ ಎಂದರು.

ಸಮಾರಂಭದಲ್ಲಿ ಐದು ಮಂದಿ ಹಿರಿಯ ವಿದ್ಯಾರ್ಥಿಗಳು ಕಾಲೇಜು ದಿನಗಳನ್ನು ಮೆಲಕು ಹಾಕಿದರು. ಕಾರ್ಯಕ್ರಮದಲ್ಲಿ 1984 ರಿಂದ 2025ರ ಅವಧಿಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಹಾಗೂ ಹಾಲಿ ಇರುವ ಎಲ್ಲಾ ಪ್ರಾಂಶುಪಾಲರು ಮತ್ತು ಉಪನ್ಯಾಸಕರನ್ನು ಸನ್ಮಾನಿಸಲಾಯಿತು.

ವೀಲ್ ಚೇರಿನಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜು ಆರಂಭದ ಪ್ರಾಂಶುಪಾಲ ನರಸಿಂಹ, ಉಪನ್ಯಾಸಕರಾದ ಮಲ್ಲಿಕಾರ್ಜುನ ಸ್ವಾಮಿ, ಪರಮೇಶ್ವರಾಚಾರಿ, ನಾಗಪ್ಪ, ಸುರೇಶ್, ವೀರಭದ್ರಪ್ಪ, ಸುರೇಶ್, ವೆಂಕಟರಾಮೇಗೌಡ, ಅಂಬಿಕಾ, ಪವಿತ್ರ, ಶರತ್, ಸಿದ್ದೇಶ್, ಶೇಖರ್, ಸೇರಿದಂತೆ ಎಲ್ಲಾ ಉಪನ್ಯಾಸಕರು ಹಾಗೂ ಕಾಲೇಜು ಸಿಬ್ಬಂದಿ ಆಂತೋಣಿಸ್ವಾಮಿ, ಬೆಟ್ಟಯ್ಯರಿಗೆ ಆತ್ಮೀಯವಾಗಿ ಸನ್ಮಾನಿಸಿದರು. ಗುರುವಂದನೆ ಸಲ್ಲಿಸಿದ ವೇಳೆ ಹಾಜರಿದ್ದ ನೂರಾರು ವಿದ್ಯಾರ್ಥಿಗಳು ಭಾವುಕರಾದರು.

Share this article