ಗದಗ: ಸಮಾಜದಲ್ಲಿ ಮೊಬೈಲ್ ಹಾವಳಿಯಿಂದ ಒಳ್ಳೆಯ ಮಾತು ಕೇಳಲು, ಮಾತನಾಡಲು ಹಾಗೂ ಕೆಲಸಕ್ಕೆ ಸಮಯವಿಲ್ಲದಂತಾಗಿದೆ. ಸಾಮಾಜಿಕ ಜಾಲತಾಣದಿಂದ ನಮ್ಮತನ ಕಳೆದುಕೊಳ್ಳುತ್ತಿರುವುದು ವಿಷಾದಕರ ಎಂದು ಹೂವಿನಹಡಗಲಿ ಗವಿಮಠದ ಡಾ. ಹಿರಿಯ ಶಾಂತವೀರ ಸ್ವಾಮಿಗಳು ಹೇಳಿದರು.
ಮೊದಲು ಮನೆ ಚಿಕ್ಕದಾಗಿದ್ದವು.ಈಗ ಮನೆ ದೊಡ್ಡದಾಗಿವೆ. ಮನಸ್ಸು ಚಿಕ್ಕದಾಗುತ್ತಿರುವುದು ವಿಪರ್ಯಾಸವಾಗಿದೆ. ಮನುಷ್ಯನನ್ನು ಎತ್ತರಕ್ಕೆ ಒಯ್ಯಲು ಗುರುನಿಷ್ಠೆ, ಶ್ರದ್ಧೆ ವಿಶ್ವಾಸ, ಬಂಧುತ್ವ, ಪ್ರೇಮತ್ವ ಮುಖ್ಯವಾಗಿದೆ. ಇಂತಹ ಎಲ್ಲ ಅಂಶ ಶ್ರೀ ಶಿವಶಾಂತವೀರ ಶರಣರಲ್ಲಿ ಕಾಣುತ್ತೇವೆ ಎಂದರು.
ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಮಹಾತ್ಮರ ಪ್ರವಚನವು, ಭಕ್ತರಿಗೆ ಸರಿಯಾದ ಮಾರ್ಗಕ್ಕೆ ತರುವುದಾಗಿದೆ. ಪ್ರವಚನದಿಂದ ಸುವ್ಯವಸ್ಥಿತ ಸಮಾಜ ನಿರ್ಮಾಣ ಮಾಡಲು ಸಹಾಯಕವಾಗಿದೆ. ಇಂತಹ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಸಮಾಜದಲ್ಲಿ ಯಾವ ರೀತಿ ಬದುಕಬೇಕೆಂದನ್ನು ತಿಳಿಯುವುದರ ಜತೆಗೆ ಮಾನಸಿಕ ನೆಮ್ಮದಿ ದೊರೆಯುವುದು. ಅಧಿಕಾರ,ಆಸ್ತಿ, ಶ್ರೀಮಂತಿಕೆ ಇದ್ದರೂ ಸಹ ಮಾನಸಿಕ ನೆಮ್ಮದಿ ಇಲ್ಲದಿದ್ದರೆ ಮನುಷ್ಯನ ಜೀವನ ವ್ಯರ್ಥ ಜೀವನದ ಮುಖ್ಯ ಗುರಿ ಮುಕ್ತಿ.ಸಾರ್ಥಕತೆ ಪಡೆಯಲು ಜೀವನ ದರ್ಶನ, ಪ್ರವಚನ ಮಾರ್ಗದರ್ಶನ ನೀಡುತ್ತದೆ ಎಂದರು.ಜೀವನದಲ್ಲಿ ದೀನದಲಿತರ, ಬಡವರ, ಅವಕಾಶ ವಂಚಿತರ ಉಪಕಾರ ಮಾಡಿ ಕಣ್ಣೀರು ಒರಿಸುವ ಕೆಲಸ ಮಾಡಿ, ನಾವು ಬದುಕಿ ಜತೆಗೆ ನಮ್ಮವರನ್ನು ಬದುಕಿಸುವುದು ಎಂಬ ಸಮಷ್ಟಿ ಪ್ರಜ್ಞೆ ಶ್ರೀಮಠ ಮತ್ತು ಶ್ರೀಗಳು ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕೀರ್ತಿ ಉಮೇಶ ಚಟ್ರಿ ಇವಳಿಂದ ಭರತ ನಾಟ್ಯ ಪ್ರದರ್ಶನ ಜರುಗಿತು.
ಶಂಕ್ರಯ್ಯ ಆರ್. ಗುರುಮಠ ಸಂಗೀತ, ಹೇಮಂತಕುಮಾರ ಹಿರೇಮಠ ತಬಲಾಸಾಥ್, ವಿದ್ವಾನ್ ರವಿಕುಮಾರ ಅವರಿಂದ ವಾಯೋಲಿನ್ ವಾದನ ಜರುಗಿತು. ಸದ್ಭಕ್ತರಿಂದ ಶಿವಶಾಂತವೀರ ಶರಣರಿಂದ ತುಲಾಭಾರ ಜರುಗಿದವು. ಪ್ರಾ.ಎಚ್.ಬಿ. ಯಲಬುರ್ಗಿ, ಸುನಂದಾ ಅಲ್ಲಂ ಇದ್ದರು.