ಕನ್ನಡಪ್ರಭ ವಾರ್ತೆ ಚವವಡಾಪುರ
ಆಷಾಢ ಮಾಸದಲ್ಲಿ ಬರುವ ಗುರುಪೂರ್ಣಿಮೆಯನ್ನು ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದ ನಿರ್ಗುಣ ಮಠ ದತ್ತಾತ್ರೇಯ ದೇವಸ್ಥಾನದಲ್ಲಿ ವೈಭವದಿಂದ ಆಚರಿಸಲಾಯಿತು.ಬೆಳಗಿನ ಜಾವ 3 ಗಂಟೆಗೆ ದೇವಸ್ಥಾನದಲ್ಲಿ ಕಾಕಡಾರತಿ, ರುದ್ರಾಭಿಷೇಕ, ನಿರ್ಗುಣ ಪಾದುಕೆಗಳಿಗೆ ಕೇಸರ ಲೇಪನ ಪೂಜೆ, ಅಲಂಕಾರ ನಡೆಯಿತು. ಬಳಿಕ ದೇವಸ್ಥಾನದ ಅರ್ಚಕರು, ವಿಪ್ರಬಾಂಧವರಿಂದ ವ್ಯಾಸ ಪೂಜೆ ನಡೆಯಿತು. ನಂತರ ಭಕ್ತರಿಗೆ ಅನ್ನ ಪ್ರಸಾದ ನೇರವೇರಿತು. ಸಂಜೆ ವಾದ್ಯಮೇಳಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪಲ್ಲಕ್ಕಿ ಸೇವೆ ನೆರವೇರಿತು.
ಸುಕ್ಷೇತ್ರ ದೇವಲ ಗಾಣಗಾಪೂರದಲ್ಲಿ ನೃಸಿಂಹ ಸರಸ್ವತಿಗಳು ಈ ಪೂರ್ಣಿಮೆಯ ದಿನದಂದು ತಮ್ಮ ಭಕ್ತರಿಗೆ ದರ್ಶನ ಕರುಣಿಸಿ ಉದ್ದರಿಸಿದ ಪ್ರಯುಕ್ತ ದೇಶದ ನಾನಾ ರಾಜ್ಯಗಳ ಭಕ್ತರು ಪೂರ್ಣಿಮೆಯ ದಿನ ಗಾಣಗಾಪೂರಕ್ಕೆ ಬಂದು ಗುರುವಿನ ದರ್ಶನ ಪಡೆದು ಪುನೀತರಾಗುತ್ತಾರೆ. ಅನೇಕ ವರ್ಷಗಳಿಂದ ಈ ಪದ್ದತಿ ನಡೆದುಕೊಂಡು ಬಂದಿದ್ದು ಈ ವರ್ಷವು ಕೂಡ ಸಹಸ್ರಾರು ಸಂಖ್ಯೆಯ ಭಕ್ತರು ಗಾಣಗಾಪೂರಕ್ಕೆ ಆಗಮಿಸಿ ಭೀಮಾ, ಅಮರ್ಜಾ ಸಂಗಮದಲ್ಲಿ ಪುಣ್ಯಸ್ನಾನ ಮಾಡಿಕೊಂಡು ದತ್ತಾತ್ರೇಯ ಮಹಾರಾಜರ ದರ್ಶನಾಶಿರ್ವಾದ ಪಡೆದುಕೊಂಡರು.ವಾಹನ ದಟ್ಟಣೆ, ಮತ್ತು ಜನದಟ್ಟಣೆ ನಿಯಂತ್ರಣಕ್ಕಾಗಿ ದೇವಸ್ಥಾನದ ಆಡಳಿತ ಮಂಡಳಿಯವರು ಬಸ್ ನಿಲ್ದಾಣದಿಂದ ಮುಂದೆ ಯಾವದೇ ಖಾಸಗಿ ವಾಹನಗಳ ಪ್ರವೇಶ ನಿಶೇಧ ಮಾಡಿದ್ದರಿಂದ ಭಕ್ತರು ಸರತಿ ಸಾಲಿನಲ್ಲಿ ಬಸ್ ನಿಲ್ದಾಣದ ರಸ್ತೆಯಿಂದ ದೇವಸ್ಥಾನದ ತನಕ ನಿಂತುಕೊಂಡು ದತ್ತಾತ್ರೇಯರ ದರ್ಶನ ಪಡೆದುಕೊಳ್ಳುವಂತಾಯಿತು. ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗಿಯಾಗಿದ್ದಲ್ಲದೆ ಗ್ರಾಮದ ಅನೇಕ ಕಡೆಗಳಲ್ಲಿ ಭಕ್ತರಿಂದ ಅನ್ನಸಂತರ್ಪಣೆ, ಪ್ರಸಾದ ವಿತರಣೆಗಳು ನಡೆದವು.
ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ, ಸಾಲಕಾರಿ ಕಾರ್ಯದರ್ಶಿ ಶ್ರೀಕಾಂತ ಭಟ್ ಪೂಜಾರಿ, ಅರ್ಚಕರಾದ ಪ್ರಿಯಾಂಕ್ ಪೂಜಾರಿ, ಪ್ರಖ್ಯಾತ ಪೂಜಾರಿ, ಗುರುದತ್ ಪೂಜಾರಿ, ನಾಗೇಶ ಪೂಜಾರಿ, ಸಚಿನ ಪೂಜಾರಿ, ಕಿರಣ ಪೂಜಾರಿ, ಪ್ರಸನ್ನ ಪೂಜಾರಿ, ದೇವಸ್ಥಾನದ ಸಿಬ್ಬಂದಿ ದತ್ತು ನಿಂಬರ್ಗಿ, ದೇವಲ ಗಾಣಗಾಪೂರ ಠಾಣೆ ಪಿಎಸ್‌ಐ ರಾಹುಲ್ ಪವಾಡೆ ಸೇರಿದಂತೆ ಸಿಬ್ಬಂದಿಗಳು, ಗೃಹ ರಕ್ಷಕ ದಳದ ಸಿಬ್ಬಂದಿ ಇದ್ದರು.