ಮಲೆಮಹದೇಶ್ವರನಲ್ಲಿ ಗುರುಸ್ವಾಮೀಜಿ ಲೀನ

KannadaprabhaNewsNetwork | Published : May 21, 2025 12:08 AM
ಸಾಲೂರು ಬೃಹನ್ ಮಠದ ಪೀಠಾಧ್ಯಕ್ಷ ಶ್ರೀ ಗುರುಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆ ಪೂಜೆ ಸಲ್ಲಿಸಲಾಯಿತು.
Follow Us

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ 17ನೇ ಪೀಠಾಧ್ಯಕ್ಷರಾದ ಗುರುಸ್ವಾಮೀಜಿ ಅವರು ಮಂಗಳವಾರ ಲಿಂಗೈಕ್ಯರಾದರು. ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ವೀರಶೈವ ಸಂಪ್ರದಾಯದಂತೆ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ ಆವರಣದಲ್ಲಿ ಇದುವರೆಗೂ ಪೀಠಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಮೃತಪಟ್ಟಿರುವ ಸ್ವಾಮೀಜಿ ಅವರ ಗದ್ದುಗೆಯ ಸಮೀಪದಲ್ಲಿಯೇ ಶ್ರೀ ಪಟ್ಟದ ಗುರುಸ್ವಾಮಿಗಳ ಅಂತ್ಯಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಮಠದ ಗದ್ದುಗೆ ಆವರಣದಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಕ್ರಿಯಾ ಸಮಾಧಿ ನಿರ್ಮಾಣ ಮಾಡಿ ಮರಳು ಮುಚ್ಚಲಾಗಿತ್ತು. ಇಂದು ಪಟ್ಟದ ಗುರುಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆ ಮರಳು ತೆರವುಗೊಳಿಸಿ ಕ್ರಿಯಾ ಸಮಾಧಿಗೆ ಬಣ್ಣ ಬಳಿದು, ಗದ್ದುಗೆಯ ಮೇಲ್ಭಾಗದಲ್ಲಿ ಹಸಿರು ಚಪರ ಹಾಕಿ ವಿವಿಧ ಫಲ ಪುಷ್ಪಗಳಿಂದ ಅಲಂಕಾರ ಮಾಡಿ ವಿಧಿ ವಿಧಾನಗಳೊಂದಿಗೆ ವೀರಶೈವ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.ಶ್ರೀ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಕನಕಪುರ ದೇಗುಲ ಮಠದ ಶ್ರೀಗಳ ನೇತೃತ್ವದಲ್ಲಿ ವಿವಿಧ ಗ್ರಾಮಗಳ ನೂರಾರು ಮಠಾಧೀಶರ ಸಮ್ಮುಖದಲ್ಲಿ ಮಂತ್ರ ಜಪಿಸಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಕ್ರಿಯಾ ಸಮಾಧಿಗೆ ಪೂಜೆ ಸಲ್ಲಿಸಲಾಯಿತು. ಶ್ರೀಗಳ ಮೆರವಣಿಗೆ:

ಸಾಲೂರು ಬೃಹನ್ ಮಠದ 17ನೇ ಪೀಠಾಧ್ಯಕ್ಷರಾದ ಪಟ್ಟದ ಗುರುಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆ ಟ್ರ್ಯಾಕ್ಟರ್‌ಗೆ ಫಲ ಪುಷ್ಪಗಳಿಂದ ಅಲಂಕಾರ ಮಾಡಿ ಗದ್ದುಗೆ ನಿರ್ಮಾಣ ಮಾಡಿ ಶ್ರೀಗಳನ್ನು ಕೂರಿಸಿ ಮನೆ ಮಹದೇಶ್ವರ ಬೆಟ್ಟದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಹಾಲಿ ಶಾಸಕ ಎಂ.ಆರ್. ಮಂಜುನಾಥ್ ಹಾಗೂ ಮಾಜಿ ಶಾಸಕ ಆರ್ ನರೇಂದ್ರ ಜೊತೆಗೂಡಿ ಮೆರವಣಿಗೆಯಲ್ಲಿ ಸಾಗಿದರು. ಈ ವೇಳೆ ಸಾವಿರಾರು ಭಕ್ತರು ಮೆರವಣಿಗೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮಾಜಿ ಶಾಸಕ ಆರ್ ನರೇಂದ್ರ ಮಂಗಳವಾರ ಬೆಳಗ್ಗೆಯೇ ಶ್ರೀಮಠಕ್ಕೆ ತೆರಳಿ ಅಂತಿಮ ದರ್ಶನ ಪಡೆದ ನಂತರ ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮುಂದೆ ನಿಂತು ಅಚ್ಚುಕಟ್ಟಾಗಿ ನಿಭಾಯಿಸಿದರು.ಅಂತಿಮ ದರ್ಶನ ಪಡೆದ ಗಣ್ಯರು:

ಸ್ಥಳೀಯ ಶಾಸಕರಾದ ಎಂ. ಆರ್.ಮಂಜುನಾಥ್ , ಗಣೇಶ್ ಪ್ರಸಾದ್, ಮಾಜಿ ಶಾಸಕಿ ಪರಿಮಳ ನಾಗಪ್ಪ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಜಿಲ್ಲಾಧಿಕಾರಿ ಸಿಟಿ ಶಿಲ್ಪನಾಗ್, ಸಿಇಒ ಮೋನಾರೋತ್, ಎಸ್ಪಿ ಡಾ.ಬಿ.ಟಿ.ಕವಿತಾ, ಬಿಜೆಪಿ ಮುಖಂಡರಾದ ನಿಶಾಂತ್ ಸೇರಿದಂತೆ ವಿವಿಧ ಗಣ್ಯರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.ಸೂಕ್ತ ಪೊಲೀಸ್ ಬಂದೋಬಸ್ತ್:

ಸಾಲೂರು ಬೃಹನ್ ಮಠದ ಪಟ್ಟದ ಗುರುಸ್ವಾಮಿಗಳು ಲಿಂಗೈಕ್ಯರಾಗಿದ್ದ ಹಿನ್ನೆಲೆ ಮಠದ ಭಕ್ತಾದಿಗಳು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದ್ದ ಹಿನ್ನೆಲೆ ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ ಮೂವರು ಇನ್ಸ್‌ಪೆಕ್ಟರ್ , ಸಬ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಶ್ರೀಗಳ ಅಂತಿಮ ದರ್ಶನ ಪಡೆಯಲು ಸಕಲ ವ್ಯವಸ್ಥೆಯನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಲಾಗಿತ್ತು.ಪ್ರಾಧಿಕಾರದಿಂದ ಸಕಲ ವ್ಯವಸ್ಥೆ:

ಸಾಲೂರು ಬೃಹನ್ ಮಠಕ್ಕೆ ಹಾಗೂ ಶ್ರೀ ಮಲೆಮಹದೇಶ್ವರ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ. ಈ ನಿಟ್ಟಿನಲ್ಲಿ ಪಟ್ಟದ ಗುರುಸ್ವಾಮಿಗಳು ಲಿಂಗೈಕ್ಯರಾಗಿದ್ದ ಹಿನ್ನೆಲೆ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಅಂತ್ಯಕ್ರಿಯೆಗೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಪ್ರಾಧಿಕಾರದ ವತಿಯಿಂದಲೇ ಅಚ್ಚುಕಟ್ಟಾಗಿ ಮಾಡಿಕೊಟ್ಟ ಹಿನ್ನೆಲೆ ಅಂತ್ಯಕ್ರಿಯೆಯು ಯಶಸ್ವಿಯಾಗಿ ನೆರವೇರಿತು. ಕಳೆದ ಎರಡು ದಿನಗಳಿಂದ ಮಲೆಮಹದೇಶ್ವರ ಬೆಟ್ಟದಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ಮಂಗಳವಾರ ಮೋಡ ಕವಿದ ವಾತಾವರಣವಿದ್ದರೂ ಮಳೆ ಬಾರದ ಹಿನ್ನೆಲೆ ಅಂತ್ಯಕ್ರಿಯೆಗೆ ಯಾವುದೇ ತೊಂದರೆ ಆಗಲಿಲ್ಲ. ಮಳೆ ಬರುವ ನಿರೀಕ್ಷೆಯಿದ್ದ ಹಿನ್ನೆಲೆ ಪ್ರಾಧಿಕಾರದ ವತಿಯಿಂದ ಜರ್ಮನ್ ಟೆಂಟ್ ಅಳವಡಿಸಿ ಗಣ್ಯರಿಗೆ ಸೌಲಭ್ಯ ಒದಗಿಸಿಕೊಡಲಾಗಿತ್ತು. ಸಾಲೂರು ಬೃಹನ್ ಮಠದ ಕಿರಿಯ ಶ್ರೀಗಳಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.

ನನಗೆ ಶ್ರೀಗಳ ಮಾರ್ಗದರ್ಶನವಿತ್ತು

ಸಾಲೂರು ಮಠಕ್ಕೂ ನಮ್ಮ ಕುಟುಂಬಕ್ಕೂ ಅವಿನಭಾವ ಸಂಬಂಧವಿದೆ. ಕಳೆದ ಮೂರು ಅವಧಿಯಲ್ಲಿ ಶಾಸಕನಾಗಿದ್ದಾಗ ಸಾಲೂರು ಬೃಹನ್ ಮಠದ ಪೀಠಾಧ್ಯಕ್ಷರಾದ ಶ್ರೀ ಗುರುಸ್ವಾಮಿಗಳ ಮಾರ್ಗದರ್ಶನದಲ್ಲಿಯೇ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟವನ್ನು ಅಭಿವೃದ್ಧಿ ಮಾಡಿದ್ದೇನೆ. ಅವರು ಲಿಂಗೈಕ್ಯರಾಗಿರುವುದು ನಮ್ಮ ಮನೆಯವರನ್ನೇ ಕಳೆದುಕೊಂಡಂತಾಗಿದೆ. -ಆರ್.ನರೇಂದ್ರ, ಮಾಜಿ ಶಾಸಕ, ಹನೂರು