ಗುಟ್ಕಾ ಬ್ಯಾನ್ ಮಾಡಿಲ್ಲ, ಪ್ರತಿ ವರ್ಷ ಮಾಡುವಂತೆ ರಿನಿವೆಲ್ ಮಾಡಿದ್ದಾರಷ್ಟೇ. ಅಡಕೆ ಬೆಳೆಗಾರರು ಆತಂಕಪಡಬೇಕಾಗಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಗುಟ್ಕಾ ಬ್ಯಾನ್ ಮಾಡಿಲ್ಲ, ಪ್ರತಿ ವರ್ಷ ಮಾಡುವಂತೆ ರಿನಿವೆಲ್ ಮಾಡಿದ್ದಾರಷ್ಟೇ. ಅಡಕೆ ಬೆಳೆಗಾರರು ಆತಂಕಪಡಬೇಕಾಗಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು.
ನಗರದ ಜಿಎಂ ವಿವಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗುಟ್ಕಾ ಯಾವತ್ತಿದ್ದರೂ ಬ್ಯಾನ್ ಇದ್ದೇ ಇದೆ. ಪಾನ್ ಮಸಾಲಾ, ತಂಬಾಕು ಪ್ರತ್ಯೇಕವಾಗಿದೆ. ಇದೇನೂ ಬ್ಯಾನ್ ಆಗಿಲ್ಲ ಎಂದರು.
ಸುಮ್ಮನೇ ಮಾಧ್ಯಮಗಳಲ್ಲಿ ಗುಟ್ಕಾ ಬ್ಯಾನ್ ಅಂತೆಲ್ಲಾ ಬಂದು, ರೈತರಿಗೂ ಗಾಬರಿ ಮಾಡುತ್ತಿದ್ದಾರೆ. ರೈತರು ಯಾರೂ ಗಾಬರಿಯಾಗಬೇಕಾದ ಅವಶ್ಯಕತೆ ಇಲ್ಲ. ಅಡಕೆ ದರವೇನೂ ಕಡಿಮೆಯೂ ಆಗಿಲ್ಲ. ರೈತರು ನಿಶ್ಚಿಂತೆಯಿಂದ ಇರಿ. ಅಡಕೆ ರೇಟ್‌ನಲ್ಲಿ 2-3 ಸಾವಿರ ವೇರಿಯೇಷನ್ ಆಗುತ್ತದಷ್ಟೇ ಎಂದರು.
ಪ್ರತಿ ವರ್ಷವೂ ರಿನ್ಯೂವೆಲ್ ಮಾಡುವಂತೆ ಈಗಲೂ ಮಾಡಿದ್ದಾರಷ್ಟೇ. ಶಾಸಕರ ನಿಯೋಗವು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರಗೆ ಭೇಟಿ ಮಾಡಿದ್ದನ್ನು ಮಾಧ್ಯಮಗಳಲ್ಲಿ ನಾನೂ ಸಹ ಗಮನಿಸಿದ್ದೇನೆ. ಅಡಕೆ ಬೆಳೆಯುವ ಕ್ಷೇತ್ರದ 50-60 ಶಾಸಕರು, 10 ಜನ ಲೋಕಸಭಾ ಸದಸ್ಯರೂ ಇದ್ದಾರೆ. ಹಾಗಾಗಿ ರೈತರು ಯಾವುದೇ ಗಾಬರಿಯಾಗಬೇಕಾದ ಪರಿಸ್ಥಿತಿಯೂ ಇಲ್ಲ ಎಂದು ಹೇಳಿದರು.
ಅಡಕೆಯ ಮೇಲೆ ಅವಲಂಬಿತ 10ರಿಂದ 15 ಲಕ್ಷ ಜನರು ಗುಟ್ಕಾ ಬ್ಯಾನ್ ಆದರೆ ಬೀದಿ ಪಾಲಾಗುತ್ತಾರೆ. ಹಾಗಾಗಿ ಗುಟ್ಕಾ ಬ್ಯಾನ್ ಆಗುವುದಕ್ಕೆ ಸಾಧ್ಯವೂ ಇಲ್ಲ. ಗುಟ್ಕಾ ಬ್ಯಾನ್ ಮಾಡುವುದೂ ಇಲ್ಲ. ರೈತರು ಯಾವುದೇ ಭಯ, ಆತಂಕವಿಲ್ಲದೇ ಇರಬೇಕು ಎಂದು ಹಿರಿಯ ಅಡಕೆ ಬೆಳೆಗಾರ, ಅಡಕೆ ವರ್ತಕರೂ ಆಗಿರುವ ಜಿ.ಎಂ.ಸಿದ್ದೇಶ್ವರ ರೈತರಿಗೆ ಆತ್ಮಸ್ಥೈರ್ಯ ತುಂಬಿದರು.
ಎಸ್‌ಟಿಪಿಐಗೆ ಹಿಂದೆ 10 ಸಾವಿರ ಅಡಿ ಜಾಗ ಕೊಡಿಸಿದ್ದೆ:
ದಾವಣಗೆರೆಯಲ್ಲಿ ಜಿಎಂ ವಿವಿಯಲ್ಲಿ ಎಚ್ಆರ್ ಮಹಾ ಸಮಾವೇಶದಲ್ಲಿ 75ಕ್ಕೂ ಹೆಚ್ಚು ಎಚ್ಆರ್‌ಗಳು, 25 ಕಂಪನಿಗಳೂ ಹೆಚ್ಚಾಗಿ ಬಂದಿದ್ದು, ದಾವಣಗೆರೆಯಲ್ಲಿ ಇಂತಹದ್ದೊಂದು ಮಹಾ ಸಮಾವೇಶ ಇದೇ ಮೊದಲ ಸಲ ನಡೆಯುತ್ತಿದೆ ಎಂದು ಡಾ.ಜಿ.ಎಂ.ಸಿದ್ದೇಶ‍್ವರ ತಿಳಿಸಿದರು.
ನಮ್ಮ ಕ್ಯಾಂಪಸ್ ನಲ್ಲಿ 50-60 ಕಂಪನಿಗಳು 300-400 ವಿದ್ಯಾರ್ಥಿಗಳನ್ನು ನೇಮಕ ಮಾಡುತ್ತಿದ್ದರು. ನಮ್ಮಲ್ಲಿ ಹೆಚ್ಚು ಎಂಜಿನಿಯರಿಂಗ್ ವಿದ್ಯಾರ್ಥಿಗಳಿದ್ದು, ಈ ಮಹಾ ಸಮಾವೇಶದ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವ ಅವಕಾಶ ಹೆಚ್ಚಾಗಿದೆ ಎಂದರು.
ಜಿಎಂ ವಿವಿಯ ಡಾ.ಜಿ.ಎಂ.ಗಂಗಾಧರಸ್ವಾಮಿ ಇದ್ದರು.
ಭದ್ರಾ ನೀರಿನ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿ
ಭದ್ರಾ ಡ್ಯಾಂನಿಂದ ನಾಲೆಗಳಿಗೆ ನೀರು ಬಿಡುಗಡೆ ಬಗ್ಗೆ ರಾಜ್ಯ ಸರ್ಕಾರ, ಜಲ ಸಂಪನ್ಮೂಲ ಸಚಿವರು ಹಾಗೂ ಭದ್ರಾ ಕಾಡಾ ಸಮಿತಿ ಚರ್ಚೆ ಮಾಡಿ, ರೈತರಿಗೆ ಸೂಕ್ತ ಮತ್ತು ಒಳ್ಳೆಯ ತೀರ್ಮಾನ ಮಾಡಬೇಕು ಎಂದು ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ.
ಭದ್ರಾ ಡ್ಯಾಂನಿಂದ ನಾಲೆಗಳಿಗೆ ನೀರು ಬಿಡುಗಡೆ ವಿಚಾರವಾಗಿ ರೈತರ ಮಧ್ಯೆ ಗೊಂದಲವಿದ್ದು, ಈ ವಿಚಾರದಲ್ಲಿ ಸರ್ಕಾರ, ಜಲ ಸಂಪನ್ಮೂಲ ಸಚಿವರು, ಭದ್ರಾ ಕಾಡಾ ಸಮಿತಿ ಚರ್ಚಿಸಿ, ಒಳ್ಳೆಯ ಕೆಲಸ ಮಾಡಲಿ ಎಂದರು.
ಡ್ಯಾಂನಿಂದ ಭದ್ರಾ ನಾಲೆಗಳಿಗೆ ನೀರು ಬಿಡುಗಡೆ ಮಾಡಬೇಕೋ ಅಥವಾ ಬೇಡವೋ ಅಂತಾ ಹೇಳುವುದಕ್ಕೆ ನಾನು ತಜ್ಞ ಅಲ್ಲ. ಭದ್ರಾ ಡ್ಯಾಂನಲ್ಲಿ 172 ಅಡಿಗೂ ಅದಿಕ ನೀರು ಸಂಗ್ರಹ ಇದ್ದು, ಅದರಲ್ಲಿ ಡೆಡ್ ಸ್ಟೋರೇಜ್ ಎಷ್ಟಿದೆಯೆಂಬುದನ್ನೂ ನೋಡಬೇಕು. ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಸಿಗುತ್ತದೋ ಇಲ್ಲವೋ ಚರ್ಚಿಸಿ, ನಿರ್ಧಾರ ಕೈಗೊಳ್ಳಲಿ ಎಂದರು.
ಭದ್ರಾ ಡ್ಯಾಂ ನೀರು ಸಂಗ್ರಹ, ಬೇಸಿಗೆ ದಿನಮಾನದ ಕುಡಿಯುವ ನೀರಿನ ವಿಚಾರ ಎಲ್ಲವನ್ನೂ ಕೂಲಂಕುಷವಾಗಿ ಚರ್ಚಿಸಿ, ಡ್ಯಾಂನಲ್ಲಿ ನೀರು ಇದ್ದರೆ ಬಿಡುಗಡೆ ಮಾಡಬೇಕು. ಭದ್ರಾ ಡ್ಯಾಂನಿಂದ ನೀರು ಬಿಡುಗಡೆ ವಿಚಾರವಾಗಿ ಪರ-ವಿರೋಧ ಚರ್ಚೆಯಾಗುತ್ತಿರುವ ವಿಚಾರವು ರಾಜಕೀಯವಾಗಿದೆ ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.