ಕನ್ನಡಪ್ರಭ ವಾರ್ತೆ ಅರಸೀಕೆರೆ
ಹಾರನಹಳ್ಳಿ ಸಮೀಪದ ಗುತ್ತಿನಕೆರೆ ಗ್ರಾಮದಲ್ಲಿ ನೆಲೆಸಿರುವ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವವು ಪ್ರತಿವರ್ಷದಂತೆ ಮಕರ ಸಂಕ್ರಾಂತಿ ದಿನದಿಂದ ಆರಂಭಗೊಂಡಿದ್ದು, ಬೆಳಿಗ್ಗೆ ಅಂಕುರಾರ್ಪಣೆ ಹಾಗೂ ಸಂಜೆ ಧ್ವಜಾರೋಹಣ ಪೂಜೆ ಕಾರ್ಯಕ್ರಮಗಳು ನೆರವೇರಿದವು. ಬಳಿಕ ಗ್ರಾಮದ ಮಧ್ಯಭಾಗದಲ್ಲಿ ನೆಲೆಸಿರುವ ಶ್ರೀರಂಗನಾಥಸ್ವಾಮಿ, ಶ್ರೀದೇವಿ ಹಾಗೂ ಭೂದೇವಿ ಅಮ್ಮನವರನ್ನು ಸುಮಂಗಲೆಯರು ಮಂಗಳವಾದ್ಯಗಳೊಂದಿಗೆ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಮೆರವಣಿಗೆಯಲ್ಲಿ ಕಲ್ಯಾಣ ಮಂಟಪದ ವೇದಿಕೆಗೆ ಕರೆತರಲಾಯಿತು.ಬೆಂಗಳೂರು ಕೆಂಗೇರಿ ಶ್ರೀರಾಮಾನುಜ ಮಠದ ವಿಪ್ರವಂದದ ಪೌರೋಹಿತ್ಯದಲ್ಲಿ ವರ ಅನ್ವೇಷಣೆ, ವರ ಪರೀಕ್ಷೆ, ವರ ಪೂಜೆ, ವರೋಪಚಾರ, ಕಂಕಣಧಾರಣೆ, ಕನ್ಯಾದಾನ, ಮಾಂಗಲ್ಯಧಾರಣೆ ಹಾಗೂ ಲಾಜಾಹೋಮ ಹವನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆಂಗೇರಿ ಶ್ರೀರಾಮಾನುಜ ಮಠದ ರಾಮಚಂದ್ರ ಭಟ್ಟಾಚಾರ್ಯರು, ವಿಶ್ವದಾದ್ಯಂತ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪಗಳು, ಯುದ್ಧಗಳು ಹಾಗೂ ಅನಿರೀಕ್ಷಿತ ಅವಘಡಗಳು ದೂರವಾಗಿ ಲೋಕದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದರು.ಜಾತ್ರಾ ಮಹೋತ್ಸವದ ಎರಡನೇ ದಿನವಾದ ಶುಕ್ರವಾರ ಮುಂಜಾನೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆದವು. ಮಧ್ಯಾಹ್ನ ಹಾರನಹಳ್ಳಿ ಕೋಡಮ್ಮದೇವಿ, ಯಳವಾರೆ ಹುಚ್ಚಮ್ಮದೇವಿ, ತಳ್ಳೂರು ಬನ್ನಿಕಾಳಮ್ಮ ದೇವಿ, ಹುಲ್ಲೆಕೆರೆ ಗ್ರಾಮದೇವತೆ ಸೇರಿದಂತೆ ಸುತ್ತಮುತ್ತಲ ಗ್ರಾಮ ದೇವತೆಗಳ ಸಮ್ಮುಖದಲ್ಲಿ ಅಲಂಕೃತ ಬ್ರಹ್ಮ ರಥೋತ್ಸವವು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ರಥೋತ್ಸವಕ್ಕೂ ಮುನ್ನ ತಿಮ್ಮಪ್ಪ ದೇವಾಲಯದಿಂದ ಭೂ ನೀಲಾ ಸಮೇತನಾದ ರಂಗನಾಥಸ್ವಾಮಿಯ ಉತ್ಸವ ಮೂರ್ತಿಯನ್ನು ಕರ್ಪೂರ ಸೇವೆಯೊಂದಿಗೆ ಪುಷ್ಪವೃಷ್ಟಿ ನಡುವೆ ರಥ ಮಂಟಪಕ್ಕೆ ತರಲಾಯಿತು. ಮಹಾ ಮಂಗಳಾರತಿ ಬೆಳಗುತ್ತಿದ್ದಂತೆಯೇ “ಗೋವಿಂದ ಗೋವಿಂದ” ನಾಮಸ್ಮರಣೆಯೊಂದಿಗೆ ಭಕ್ತರು ರಥ ಎಳೆದು ಪುನೀತರಾದರು.ಕಾರ್ಯಕ್ರಮದಲ್ಲಿ ಸಂಘಟಕರಾದ ಮೋಹನ್ ಕುಮಾರ್, ಪೌರೋಹಿತರಾದ ರಾಖೇಶ್, ಹರೇ ಶ್ರೀನಿವಾಸ್ ಭಜನಾ ಮಂಡಳಿ ಮಹಿಳೆಯರು, ನಗರಸಭೆ ಉಪಾಧ್ಯಕ್ಷ ಪಾರ್ಥ ಸಾರಥಿ ಶಿರಸ್ತೇದಾರ್, ಶಿವಶಂಕರ್, ಉದ್ಯಮಿ ಶ್ರೀಧರ್ ಮೂರ್ತಿ ಸೇರಿದಂತೆ ಮುಜರಾಯಿ ಇಲಾಖೆ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಹಸ್ರಾರು ಭಕ್ತಾದಿಗಳು ಭಾಗವಹಿಸಿದ್ದರು.