ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಂಗಣ ಹಾಗೂ ಈಜು ಕೊಳ ನಿರ್ಮಾಣ ಸೇರಿದಂತೆ ಕ್ರೀಡಾ ಅಭಿವೃದ್ಧಿಗೆ 6 ಕೋಟಿ ರು.ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭರವಸೆ ನೀಡಿದ್ದಾರೆ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಶುಕ್ರವಾರ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ತಮ್ಮ ಭಾಷಣದಲ್ಲಿ ತುಮಕೂರಿನಲ್ಲಿ ವಿವಿಧ ಕ್ರೀಡಾಂಗಣಗಳಿದ್ದು, ಅಂತಾರಾಷ್ಟ್ರೀಯ ಮಟ್ಟದ ಈಜು ಕೊಳ ಹಾಗೂ ಹಾಕಿ ಕ್ರೀಡಾಂಗಣಗಳ ಅವಶ್ಯವಿದ್ದು, ಮಾನ್ಯ ಮುಖ್ಯಮಂತ್ರಿಗಳು 25 ಕೋಟಿ ರು.ಗಳ ಅನುದಾನ ನೀಡುವಂತೆ ಕೋರಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವರ್ಷ ಉಡುಪಿ ಮತ್ತು ಮಂಗಳೂರಿನಲ್ಲಿ ಕರ್ನಾಟಕ ಕ್ರೀಡಾಕೂಟ ನಡೆದ ಸಂದರ್ಭದಲ್ಲಿ 6 ಕೋಟಿ ರು.ಗಳ ಅನುದಾನವನ್ನು ಘೋಷಿಸಲಾಗಿತ್ತು. ಅದರಂತೆ ತುಮಕೂರಿಗೂ ಕ್ರೀಡಾಭಿವೃದ್ಧಿಗಾಗಿ ೬ ಕೋಟಿ ರು. ಅನುದಾನ ನೀಡುವುದಾಗಿ ಭರವಸೆ ನೀಡಿದರು. ವಿದ್ಯಾರ್ಥಿ ಜೀವನದಲ್ಲಿ ಓದಿನ ಜೊತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದ್ದು, ಇದರಿಂದ ಸಮಯ ಪ್ರಜ್ಞೆ, ಶಿಸ್ತು, ಸಮಯ ಪಾಲನೆ ಹಾಗೂ ತಂಡಭಾವನೆ ಬೆಳೆದರೆ ದೇಶಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದ ಅವರು, ಯುವಕರು ಮಾದಕ ವ್ಯಸನಗಳಿಗೆ ತುತ್ತಾಗದೆ, ಕ್ರೀಡೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕೂ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.ನಾನು ಕೂಡ ಕ್ರೀಡಾಪಟುವಾಗಿದ್ದು, ಕ್ರೀಡಾಭಿಮಾನಿಯಾಗಿದ್ದೇನೆ. ನನ್ನ ಶಾಲಾ ದಿನಗಳಲ್ಲಿ ಅಂತರ್ ಶಾಲಾ ಮಟ್ಟದ ಕಬ್ಬಡಿ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ. ಎಷ್ಟೇ ಕೆಲಸದ ಒತ್ತಡ ಇದ್ದರೂ ಕ್ರಿಕೆಟ್ ಹಾಗೂ ಫುಟ್ಬಾಲ್ ಕ್ರೀಡೆಗಳನ್ನು ನೋಡುತ್ತಲೇ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಪ್ರತಿಯೊಬ್ಬ ಕ್ರೀಡಾಪಟು ಗುರಿ ಹಾಗೂ ಪರಿಶ್ರಮದೊಂದಿಗೆ ನಿರಂತರ ತರಬೇತಿ ಪಡೆದರೆ ಏಷ್ಯಾ ಮಟ್ಟದ ಸ್ಪರ್ಧೆಗಳವರೆಗೆ ತಲುಪಲು ಸಾಧ್ಯವಾಗುತ್ತದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅತ್ಯಂತ ಮಹತ್ವದ್ದಾಗಿದ್ದು, ಕ್ರೀಡೆಗೆ ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗ ಸಿಗುವುದಿಲ್ಲ ಎಂಬ ಬೇಸರ ಬೇಡ ಎಂದು ಅವರು ಸ್ಪಷ್ಟಪಡಿಸಿ, ರಾಜ್ಯ ಸರ್ಕಾರವು ಕ್ರೀಡಾಪಟುಗಳಿಗೆ ಪೊಲೀಸ್ ಮತ್ತು ಅರಣ್ಯ ಇಲಾಖೆ ನೇಮಕಾತಿಯಲ್ಲಿ ಶೇ.3ರಷ್ಟು ಮೀಸಲಾತಿ ಹಾಗೂ ಎಲ್ಲಾ ಇಲಾಖೆಗಳ ಉದ್ಯೋಗ ನೇಮಕಾತಿಯಲ್ಲೂ ಶೇ.೨ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದೆ ಎಂದರು.ಅಲ್ಲದೆ, ವಿಶ್ವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದವರಿಗೆ 6 ಕೋಟಿ ರು., ಬೆಳ್ಳಿ ಪದಕ ಗೆದ್ದವರಿಗೆ 4 ಕೋಟಿ ರು. ಹಾಗೂ ಕಂಚಿನ ಪದಕ ಪಡೆದವರಿಗೆ 3 ಕೋಟಿ ರು. ಬಹುಮಾನ ನೀಡಲಾಗುತ್ತಿದೆ. ಇಷ್ಟು ಪ್ರೋತ್ಸಾಹವನ್ನು ಬೇರೆ ಯಾವುದೇ ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ನೀಡುವುದಿಲ್ಲ ಎಂದು ಅವರು ತಿಳಿಸಿದರು. ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ ಅವರು, ಒಲಂಪಿಕ್ ಕ್ರೀಡಾಕೂಟವನ್ನು ನಶೆಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪದೊಂದಿಗೆ ಯುವಜನತೆಗೆ ಮೀಸಲಾಗಿ ಆಯೋಜಿಸಲಾಗಿದ್ದು, ಯುವಕರು ಮಾದಕ ವ್ಯಸನಗಳಿಂದ ದೂರವಿದ್ದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶ ಹೊಂದಿದೆ ಎಂದು ಹೇಳಿದರು.ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿದೆ. ನಮ್ಮ ರಾಜ್ಯದಿಂದ ಏಷ್ಯಾ ಮಟ್ಟದ ಕ್ರೀಡಾಕೂಟಗಳಿಗೆ ಕನಿಷ್ಠ ೫೦೦ ಕ್ರೀಡಾಪಟುಗಳು ಭಾಗವಹಿಸಬೇಕೆಂಬ ಗುರಿಯಿದೆ ಎಂದು ಹೇಳಿದರು.ಎಲ್ಲಾ ಆಟಗಳಲ್ಲಿ ಗೆಲ್ಲುವುದು ಮುಖ್ಯವಲ್ಲ, ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುವುದೇ ಮುಖ್ಯ ಎಂದು ಅಭಿಪ್ರಾಯಪಟ್ಟ ಅವರು, ಕ್ರೀಡೆ ವಿದ್ಯಾಭ್ಯಾಸದ ಜೊತೆಗೆ ಯುವಕರ ಜೀವನ ರೂಪಿಸುವ ಶಕ್ತಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಡಾ. ಕೆ. ಗೋವಿಂದ ರಾಜು, ಸಿರಾ ಶಾಸಕ ಟಿ .ಬಿ ಜಯಚಂದ್ರ, ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಕೆ.ಎನ್ ರಾಜಣ್ಣ, ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್. ಶ್ರೀನಿವಾಸ್, ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್, ಬಿ. ಸುರೇಶ್ ಗೌಡ, ಕೆ. ಷಡಾಕ್ಷರಿ, ಎಚ್.ವಿ. ವೆಂಕಟೇಶ್, ಆರ್. ರಾಜೇಂದ್ರ, ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಕರ್ನಾಟಕ ಒಲಂಪಿಕ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟಿ. ಅನಂತರಾಜ್, ಯುವ ಸಬಲೀಕರಣ ಇಲಾಖೆಯ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತರಾದ ಚೇತನ್ ಆರ್., ಬಿ.ಎಂ.ಟಿ.ಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.