ಕನ್ನಡಪ್ರಭ ವಾರ್ತೆ ಮದ್ದೂರು
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಚ್ಯುತಿ ತರಲು ಮುಂದಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರನ್ನು ಸಂಪುಟದಿಂದ ವಜಾಗೊಳಿಸಬೇಕು ಮತ್ತು ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷದ ಕಾರ್ಯಕರ್ತರು ಪಟ್ಟಣದಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು.ಮಾಜಿ ಸಚಿವ ಡಿ.ಸಿ. ತಮ್ಮಣ್ಣ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆಗೆ ಇಳಿದ ನೂರಾರು ಕಾರ್ಯಕರ್ತರು, ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ ವಿರುದ್ಧ ಘೋಷಣೆ ಕೂಗಿ ಹೆದ್ದಾರಿಯಲ್ಲಿ ಕೆಲಕಾಲ ಧರಣಿ ನಡೆಸಿದರು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಪ್ರತಿಭಟನೆ ವೇಳೆ ರೊಚ್ಚಿಗೆದ್ದ ಕಾರ್ಯಕರ್ತರು ಉಪಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ಭಾವಚಿತ್ರವುಳ್ಳ ಫ್ಲೆಕ್ಸ್ ಗೆ ಚಪ್ಪಲಿ ಸೇವೆ ಮಾಡಿದರಲ್ಲದೇ ಪ್ರತಿಕೃತಿಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಪ್ರಧಾನಿ ಎಚ್. ಡಿ .ದೇವೇಗೌಡ ಕುಟುಂಬಕ್ಕೆ ಚ್ಯುತಿ ತರಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ. ಆದ್ದರಿಂದ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಹಾಗೂ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಪೆನ್ ಡ್ರೈವ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಪ್ರತಿಭಟಕಾರರು ಆಗ್ರಹ ಪಡಿಸಿದರು.
ಹಾಸನ ವಿಡಿಯೋ ಪ್ರಕರಣದಲ್ಲಿ ಮಹಿಳೆಯರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯದ ಬಗ್ಗೆ ಸರ್ಕಾರ ಈಗಾಗಲೇ ಎಸ್ಐಟಿ ತನಿಖೆಗೆ ಒಳಪಡಿಸಿರುವುದು ಸ್ವಾಗತಾರ್ಹ. ಆದರೆ ಎಸ್ಐಟಿ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ಇದರಿಂದ ನಿಷ್ಪಕ್ಷಪಾತ ತನಿಖೆ ನಡೆಯುವುದು ಅನುಮಾನವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಅಶ್ಲೀಲ ವಿಡಿಯೋವನ್ನು ಪೆನ್ ಡ್ರೈವ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ರಾಜ್ಯಾದ್ಯಂತ ಹಂಚಿದ್ದಾರೆ. ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡ ಬಯಲು ಮಾಡಿದ್ದಾರೆ. ಇಬ್ಬರೂ ನಾಯಕರು ದೇವೇಗೌಡರ ಕುಟುಂಬಕ್ಕೆ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್. ಪುರಸಭಾ ಸದಸ್ಯ ಪ್ರಿಯಾಂಕ ಅಪ್ಪು ಗೌಡ. ಮಾತನಾಡಿ, ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜ್ಯದ ಹೆಣ್ಣು ಮಕ್ಕಳ ಮಾನ ಹರಾಜು ಹಾಕಿದವರಲ್ಲಿ ಕಾಂಗ್ರೆಸ್ ಮುಖಂಡರ ಪಾಲು ಹೆಚ್ಚಿದೆ. ಜೊತೆಗೆ ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತಿದೆ. ಈ ಎಲ್ಲದರ ಸತ್ಯ ಹೊರಬರಬೇಕಾದರೆ ಸಿಬಿಐ ತನಿಖೆಯಿಂದ ಮಾತ್ರ ಸಾಧ್ಯ ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ, ಮಹಿಳಾ ಘಟಕದ ಅಧ್ಯಕ್ಷೆ ದಿವ್ಯ ರಾಮಚಂದ್ರ ಶೆಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ. ಮಾಜಿ ನಿರ್ದೇಶಕ ಹೊನ್ನೇಗೌಡ, ಜಿ.ಟಿ. ಪುಟ್ಟಸ್ವಾಮಿ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಅಶೋಕ್, ಪುರಸಭಾ ಸದಸ್ಯರಾದ ಮಹೇಶ್, ವನಿತಾ, ಸುಮಿತ್ರ ರಮೇಶ್, ಟಿ .ಆರ್. ಪ್ರಸನ್ನ ಕುಮಾರ್, ಎಂ.ಐ.ಪ್ರವೀಣ್, ಬಸವರಾಜು, ಮುಖಂಡರಾದ ರವಿ ಚನ್ನಸಂದ್ರ, ನಗರಕೆರೆ ಸಂದೀಪ, ಕೂಳಗೆರೆ ಶೇಖರ್, ಬಿಜೆಪಿಯ ತ್ರಿವೇಣಿ, ಎಂ .ಸಿ. ಸಿದ್ದು, ಸೌಮ್ಯ, ಲಲಿತಮ್ಮ, ಸಿದ್ದರಾಜು ಸೇರಿ ಜೆಡಿಎಸ್ ಮತ್ತು ಬಿಜೆಪಿಯ ನೂರಾರು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ರಾಜ್ಯ ಸರ್ಕಾರದಿಂದ ಎಸ್ಐಟಿ ದುರ್ಬಳಕೆ: ತಮ್ಮಣ್ಣಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಪೆನ್ ಡ್ರೈವ್ ಪ್ರಕರಣದಲ್ಲಿ ತಪ್ಪು ಮಾಡಿದ್ದಾನೆ ಎನ್ನುವುದು ಎಷ್ಟು ಅಪರಾಧವೋ, ಅದನ್ನು ಹಂಚಿರುವುದು ಅಷ್ಟೇ ಅಪರಾಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.ಪ್ರಾದೇಶಿಕ ಪಕ್ಷ ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ಸಹಿಸದ ಡಿ.ಕೆ. ಶಿವಕುಮಾರ್ ಜೆಡಿಎಸ್ ಅನ್ನು ಮುಗಿಸಲು ವ್ಯವಸ್ಥಿತವಾಗಿ ಇಂತಹ ನೀಚ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಪೆನ್ ಡ್ರೈವ್ ನಲ್ಲಿ ಮಹಿಳೆಯರ ಅಶ್ಲೀಲ ಚಿತ್ರ ಬಿತ್ತರಿಸುವ ಮೂಲಕ ಶಿವಕುಮಾರ್ ಮಹಿಳೆಯರ ಮಾನ ಹರಾಜು ಹಾಕುತ್ತಿದ್ದಾರೆ. ಪ್ರಜ್ವಲ್ ಪ್ರಕರಣದಲ್ಲಿ ರಾಜ್ಯದ ನಾಯಕರು ಎಸ್ಐಟಿಯನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಪೆನ್ ಡ್ರೈವ್ ಪ್ರಕರಣ ಕುರಿತು ಎಸ್ ಐಟಿ ತನಿಖೆಯಿಂದ ಸರ್ವ ಸಮ್ಮತ ನ್ಯಾಯ ದೊರಕುವ ವಿಶ್ವಾಸವಿಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲವಾದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಮೂಲಕ ಸಿಬಿಐಗೆ ವಹಿಸುವರೆಗೆ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಎಚ್ಚರಿಕೆ ನೀಡಿದರು.