- ರೈತ ಯಜಮಾನ ಎಚ್.ಎಸ್. ರುದ್ರಪ್ಪ ಕೃತಿ ಬಿಡುಗಡೆ ಸಮಾರಂಭ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕರ್ನಾಟಕ ರಾಜ್ಯ ರೈತ ಸಂಘದ ಹುಟ್ಟಿಗೆ ಕಾರಣರಾದ ಮೊದಲ ಅಧ್ಯಕ್ಷ ಎಚ್.ಎಸ್. ರುದ್ರಪ್ಪನವರ ಆದರ್ಶಗಳನ್ನು ಅಳವಡಿಸಿಕೊಂಡು ಹೋದರೆ ಮಾತ್ರ ರೈತರ ಹೋರಾಟಕ್ಕೆ ನಿಜವಾದ ಅರ್ಥ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಬಂಡವಾಳಶಾಹಿಗಳ ಕೈ ಮೇಲಾಗಿದೆ. ರೈತರ ಬದುಕು ದುಸ್ತರವಾಗಿದೆ. ರುದ್ರಪ್ಪ ಪ್ರಾಮಾಣಿಕವಾಗಿ ರೈತಪರ ಕೆಲಸ ಮಾಡಿದವರು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ನ್ಯಾಮತಿ ಪಟ್ಟಣದ ಮಹಾಂತೇಶ್ವರ ವೀರಶೈವ ಕಲ್ಯಾಣ ಮಂದಿರದಲ್ಲಿ ಸೋಮವಾರ ರಾಜ್ಯ ರೈತ ಸಂಘ ಹುಟ್ಟುಹಾಕಿದ ರೈತ ಯಜಮಾನ ಎಚ್.ಎಸ್. ರುದ್ರಪ್ಪ ಅವರ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತದಲ್ಲಿ 140 ಕೋಟಿ ಜನಸಂಖ್ಯೆ ಇದೆ. ಇವರಿಗೆಲ್ಲ ಆಹಾರ ಭದ್ರತೆ ಇದೆ. ಜತೆಗೆ ಇಡೀ ವಿಶ್ವಕ್ಕೆ ಆಹಾರ ಕೊಡುವ ಸಾಮರ್ಥ್ಯವನ್ನು ನಮ್ಮ ರೈತರು ಹೊಂದಿದ್ದಾರೆ. ಇಂತಹ ಸಾಮರ್ಥ್ಯ ಹೊಂದಲಿಕ್ಕೆ ಕಾರಣ ರೈತ ಹೋರಾಟದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡ ಮಾಜಿ ಸಚಿವ ಹಾಗೂ ರೈತ ಯಜಮಾನ ಎಚ್.ಎಸ್. ರುದ್ರಪ್ಪನಂಥವರು ಎಂದರು.ಕೇವಲ ರೈತಪರ ಹೋರಾಟದಲ್ಲಿ ತೊಡಗಿದ್ದ ರುದ್ರಪ್ಪನವರು ಸುಖಜೀವನಕ್ಕೆ ಆಸೆ ಪಡಲಿಲ್ಲ. ಇಂಥ ಮೇರು ವ್ಯಕ್ತಿತ್ವ ಹೊಂದಿರುವ ಅವರ ಜೀವನ ನಮಗೆಲ್ಲರಿಗೂ ಆದರ್ಶ. ಸ್ವಾತಂತ್ರ್ಯ ಚಳವಳಿಯಲ್ಲೂ ಭಾಗವಹಿಸಿ ಜೈಲುವಾಸ ಅನುಭವಿಸಿ ರಾಜಕೀಯ ಒಲವು ಬೆಳೆಸಿಕೊಂಡು ರಾಜಕೀಯ ಕ್ಷೇತ್ರಕ್ಕೂ ಪದಾರ್ಪಣೆ ಮಾಡಿದರು. ಸ್ವಾತಂತ್ರ್ಯಾನಂತರ ರಚನೆಯಾದ ರಾಜ್ಯ ಸರ್ಕಾರದ ಮಂತ್ರಿ ಮಂಡಲದಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ, ಕೈಗಾರಿಕೆ, ಪಶು ಸಂಗೋಪನೆ, ಮುಜರಾಯಿ ಸಚಿವರಾಗಿ ಕೆಲಸ ಮಾಡಿದರು. ನಂತರದ ದಿನಗಳಲ್ಲಿ ರೈತಪರ ಹೋರಾಟ ಚಳವಳಿಗಳನ್ನು ಮಾಡಿದ ಮಹಾನ ವ್ಯಕ್ತಿಯಾಗಿದ್ದಾರೆ ಎಂದು ಸ್ಮರಿಸಿದರು.
ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ರೈತಪರ ಹೋರಾಟಗಾರ, ಮಾಜಿ ಮಂತ್ರಿ ಎಚ್.ಎಸ್. ರುದ್ರಪ್ಪನವರ ಬಗೆಗಿನ ಕೃತಿ ಬಿಡುಗಡೆ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಈ ಪುಸ್ತಕ ಬಿಡುಗಡೆ ಮಾಡಿದ್ದು ನನ್ನ ಪುಣ್ಯ. ಸರ್ಕಾರದಲ್ಲಿ ಸಭಾಧ್ಯಕ್ಷರಾಗಿ, ಸಚಿವರಾಗಿ ಕೆಲಸ ಮಾಡಿ ನಮ್ಮ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಇಂತಹ ಮಹನೀಯರು ನಮ್ಮವರೆಂದು ಹೇಳಿಕೊಳ್ಳಲಿಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದರು.ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ಪುಸ್ತಕ ಪರಿಚಯ ಮಾಡಿ ಉಪನ್ಯಾಸ ನೀಡಿದರು. ರೈತ ಮುಖಂಡ ಕುರುವ ಗಣೇಶ್, ಕೃಷಿಕ ಸಮಾಜದ ತಾಲೂಕು ಉಪಾಧ್ಯಕ್ಷೆ ಎಂ.ಎಸ್. ಇಂದಿರಾ, ಬಸವರಾಜಪ್ಪ ಹಿರೇಮಠ, ಜೀನಹಳ್ಳಿ ಸಿದ್ದಲಿಂಗಪ್ಪ, ರೈತ ನಾಯಕ ಕರಿಬಸಪ್ಪ ಗೌಡ, ಕಸಾಪ ಅವಳಿ ತಾಲೂಕಿನ ಅಧ್ಯಕ್ಷರಾದ ಮುರುಗೇಶ್ ಗೌಡ, ಹಾಲಾರಾಧ್ಯ ಉಪಸ್ಥಿತರಿದ್ದರು.
- - -ಬಾಕ್ಸ್ * ಹೋರಾಟದಲ್ಲೇ ಜೀವನ ಕಳೆದ ದೊಡ್ಡಪ್ಪ ನಿವೃತ್ತ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಹಾಗೂ ರೈತ ಯುವ ಯಜಮಾನ ಕೃತಿ ಸಂಪಾದಕ ಡಾ. ಎಚ್.ಎಸ್. ರುದ್ರೇಶ್ ಪ್ರಾಸ್ತವಿಕವಾಗಿ ಮಾತನಾಡಿ, ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಎಚ್.ಎಸ್. ರುದ್ರಪ್ಪ ಹಂತ ಹಂತವಾಗಿ ಬೆಳೆದು ಇತರರಿಗೂ ಮೇಲ್ಪಂಕ್ತಿ ಹಾಕಿದ ಮಹಾನ್ ನಾಯಕ ಹಾಗೂ ಕಾಯಕಯೋಗಿ. ಕುಗ್ರಾಮದಲ್ಲಿ ಹುಟ್ಟಿ ಇರುವ ವ್ಯವಸ್ಥೆಯಲ್ಲೇ ಬೆಳೆದು ವಕೀಲರಾಗಿ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಧೀಮಂತ ವ್ಯಕ್ತಿ. ನಮ್ಮ ದೊಡ್ಡಪ್ಪನವರು ತಮ್ಮ ಜೀವನವನ್ನು ರೈತರ ಪರ ಹೋರಾಟದಲ್ಲೇ ಕಳೆದರು ಎಂದರು.
- - --20ಎಚ್.ಎಲ್.ಐ4:
ಮಾಜಿ ಸಚಿವ, ರೈತ ಯಜಮಾನ ಎಚ್.ಎಸ್.ರುದ್ರಪ್ಪ ಅವರ ಜೀವನಾಧರಿತ ಪುಸ್ತಕವನ್ನು ಶಾಸಕ ಡಿ.ಜಿ.ಶಾಂತನಗೌಡ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಿಡುಗಡೆಗೊಳಿಸಿದರು.