ಹಡಪದ ಅಪ್ಪಣ್ಣ ತತ್ವಾದರ್ಶ ಎಲ್ಲರಿಗೂ ಮಾದರಿ

KannadaprabhaNewsNetwork | Published : Jul 21, 2024 1:26 AM

ಸಾರಾಂಶ

12ನೇ ಶತಮಾನದ ಮಹಾ ಮಾನತಾವಾದಿ ಬಸಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದವರು ಶಿವಶರಣ ಹಡಪದ ಅಪ್ಪಣ್ಣ. ಅಪ್ಪಣ್ಣ ಅವರ ತತ್ವಾದರ್ಶ ಎಲ್ಲರಿಗೂ ಮಾದರಿ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

12ನೇ ಶತಮಾನದ ಮಹಾ ಮಾನತಾವಾದಿ ಬಸಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದವರು ಶಿವಶರಣ ಹಡಪದ ಅಪ್ಪಣ್ಣ. ಅಪ್ಪಣ್ಣ ಅವರ ತತ್ವಾದರ್ಶ ಎಲ್ಲರಿಗೂ ಮಾದರಿ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂದಿನ ಕಾಲದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯ ಇರದ ಸಮಯದಲ್ಲಿ ಅಪ್ಪಣ್ಣನವರ ಧರ್ಮ ಪತ್ನಿ ಲಿಂಗಮ್ಮಳಿಗೆ ವಚನ ಮಂಡಿಸುವ ಕಾರ್ಯವನ್ನು ಒದಗಿಸಿಕೊಟ್ಟವರು ಅಪ್ಪಣ್ಣನವರು ಎಂದರು.

ಶರಣರೆಲ್ಲ ಒಂದೆಡೆ ಸೇರಿ ಪ್ರಭುದೇವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಮಹಾ ಮನೆಯ ಸಭೆಯಲ್ಲಿ ಶರಣರು ವಾದಿಸಿದ ವಚನಗಳಿಗೆ ಅಂಕಿತ ಹಾಕುವ ಕಾರ್ಯ ಅಪ್ಪಣ್ಣನವರದಾಗಿತ್ತು. ತದನಂತರವೇ ಆ ವಚನ ಪ್ರಚಲಿತಗೊಳ್ಳುತ್ತಿದ್ದರು. ಶರಣರೆಲ್ಲರ ಭೋಜನವಾದ ಮೇಲೆ ಪ್ರತಿಯೊಬ್ಬರಿಗೂ ತಾಂಬೂಲ ಕೊಡುವ ವ್ಯವಸ್ಥೆ ಅಪ್ಪಣ್ಣನವರದಾಗಿತ್ತು. ನಡೆ-ನುಡಿ, ಆಚಾರ-ವಿಚಾರ, ಲಿಂಗಪೂಜೆ, ಜಂಗಮ ದಾಸೋಹಗಳಂತಹ ಕಾರ್ಯಗಳನ್ನು ಮಾಡಿ ನುಡಿದಂತೆ ನಡೆದವರ ಸಾಲಿನಲ್ಲಿ ಅಪ್ಪಣ್ಣ ಅಗ್ರಗಣ್ಯರಾಗಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ, ಅನಿಷ್ಠತೆ, ಮೇಲು-ಕೀಳು, ಬಡವ ಬಲ್ಲಿದನೆಂಬ ಬೇಧ ಭಾವ ಇರುವಂತಹ ಅಂದಿನ ದಿನಗಳಲ್ಲಿ ಅಂತಹ ಅನಿಷ್ಠ ಪದ್ಧತಿಗಳನ್ನು ನಿರ್ಮೂಲನೆ ಮಾಡಿ ಸರ್ವರೂ ಸಮಾನರು ಎಂದು ಸಾರಿದವರು ಶರಣರು. ಅಂದು ನಡೆದ ಸಾಮಾಜಿಕ ಕ್ರಾಂತಿ ಇಂದು ವಿಶ್ವವೇ ಅನುಸರಿಸುತ್ತಿರುವುದನ್ನು ನೋಡುತ್ತಿದ್ದೇವೆ. ಸಂವಿಧಾನ ಕೂಡಾ ಸಮಾಜದ ಸುಧಾರಣೆಗೆ ಬಂದಿದ್ದು, ಇದು ಕೂಡಾ ಶರಣರಿಂದ ಬಂದಿದ್ದು, ವಚನಗಳು ಜೀವನದ ಸಂವಿಧಾನವಾಗಿದೆ ಎಂದು ತಿಳಿಸಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಬೆಂಗಳೂರು ಗ್ರಾಮಾಂತರ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಹಡಪದ ಮಾತನಾಡಿ, ಶರಣರು ಸಮ ಸಮಾಜ ಕಟ್ಟಲು ಶ್ರಮಿಸಿದವರು. ಅಂದಿನ ಅನುಭವ ಮಂಟಪ ಇಂದು ಸಂಸತ್ತು ಆಗಿದೆ. ವಚನ ಸಾಹಿತ್ಯದ ಅನುಭವ ಬದುಕಿನ ಜೀವನವಾಗಬೇಕು ಎಂದರು.

ಸಮಾಜದ ವತಿಯಿಂದ ನಾಗಪ್ಪ ಹಡಪದ ಮತ್ತು ಶಿವರಾಜ ಅವರನ್ನು ಹಾಗೂ ಎಸ್.ಎಸ್.ಎಲ್.ಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಸಮುದಾಯದ ಮಕ್ಕಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಪಂ ಸಹಾಯಕ ಕಾರ್ಯದರ್ಶಿ ಎಸ್.ಎಂ.ಕಾಂಬಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಸಮುದಾಯ ಮುಖಂಡರಾದ ಎಚ್.ಬಿ.ವೈದ್ಯ, ಮಲ್ಲಣ್ಣ ಹಡಪದ, ಬಸವರಾಜ ಲಂಕೆಪ್ಪ, ಬಸವರಾಜ ಹಡಪದ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಂಕರಲಿಂಗ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾಡಳಿತ ಭವನದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

Share this article