ಸಮಾಜದ ಡೊಂಕುಗಳ ತಿದ್ದಿದ ಹಡಪದ ಅಪ್ಪಣ್ಣ: ರಮೇಶ್‌

KannadaprabhaNewsNetwork |  
Published : Jul 11, 2025, 01:47 AM IST
10ಎಚ್ಎಸ್ಎನ್12 :  | Kannada Prabha

ಸಾರಾಂಶ

ಸಮಾಜದಲ್ಲಿದ್ದ ಮೌಢ್ಯ, ತೊಡಕುಗಳನ್ನು ತೊಡೆದು ಹಾಕಲು ೧೨ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿ ಹೋರಾಟ ಮಾಡುವುದರ ಜತೆಗೆ ವಚನಗಳನ್ನು ರಚಿಸಿದ ಹಡಪದ ಅಪ್ಪಣ್ಣನವರ ಹಾದಿಯಲ್ಲಿ ನಾವೆಲ್ಲರೂ ಸಾಗಿ ಕೆಲಸಗಳನ್ನು ನಿರ್ವಹಿಸೋಣ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ತಹಸೀಲ್ದಾರ್‌ ಎಲ್.ಎಸ್.ರಮೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಸಮಾಜದಲ್ಲಿದ್ದ ಮೌಢ್ಯ, ತೊಡಕುಗಳನ್ನು ತೊಡೆದು ಹಾಕಲು ೧೨ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿ ಹೋರಾಟ ಮಾಡುವುದರ ಜತೆಗೆ ವಚನಗಳನ್ನು ರಚಿಸಿದ ಹಡಪದ ಅಪ್ಪಣ್ಣನವರ ಹಾದಿಯಲ್ಲಿ ನಾವೆಲ್ಲರೂ ಸಾಗಿ ಕೆಲಸಗಳನ್ನು ನಿರ್ವಹಿಸೋಣ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ತಹಸೀಲ್ದಾರ್‌ ಎಲ್.ಎಸ್.ರಮೇಶ್ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗುರುವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಇಂತಹ ಸಮಾಜ ಸುಧಾರಕರ ಜಯಂತಿಗಳನ್ನು ಆಚರಣೆ ಮಾಡುವುದರ ಉದ್ದೇಶ ಸಮಾಜದ ಉದ್ಧಾರಕ್ಕಾಗಿ ಯಾರ್‍ಯಾರು ಶ್ರಮಿಸಿರುವರೋ ಅವರನ್ನು ನೆನಪಿಸಿಕೊಂಡು ಗೌರವಿಸಲು ಅವರು ಹಾಕಿಕೊಟ್ಟ ದಾರಿಯಲ್ಲಿ ಮುಂದುವರಿಯಲು ಇಂತಹ ಮಹಾನ್ ವ್ಯಕ್ತಿಗಳ ಜಯಂತಿ ಹಮ್ಮಿಕೊಳ್ಳುತ್ತಿದೆ ಎಂದರು.

ತಹಸೀಲ್ದಾರ್‌ ಹುಲಿವಾಲ ಮೋಹನ್ ಕುಮಾರ್ ಮಾತನಾಡಿ, ಬಸವಣ್ಣನವರನ್ನು ನೆನೆಸುವಾಗ ಹಡಪದ ಅಪ್ಪಣ್ಣನವರನ್ನು ನೆನೆಸದೇ ಇರುವುದಕ್ಕೆ ಸಾಧ್ಯವಿಲ್ಲ. ಬಸವಣ್ಣನವರ ಬಳಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿ ಜಾತಿಯತೆಯಂತಹ ಅನೇಕ ತೊಡರುಗಳನ್ನು ಸರಿಪಡಿಸಲು ಶ್ರಮಿಸಿದವರಲ್ಲಿ ಅಪ್ಪಣ್ಣ ಪ್ರಮುಖರಾಗಿದ್ದಾರೆ ಎಂದು ತಿಳಿಸಿದರು.

ಸಾಹಿತಿ ಪವನ್ ಕುಮಾರ್, ವೈಚಾರಿಕ ಚಿಂತನೆ ಮೂಡಿಸಿದ ಮಹಾನ್ ವ್ಯಕ್ತಿ ಅಡಪದ ಅಪ್ಪಣ್ಣನವರಾಗಿದ್ದಾರೆ. ಇವರ ಖ್ಯಾತಿಯನ್ನು ತಿಳಿದು ಬಸವಣ್ಣನವರೇ ಅನುಭವ ಮಂಟಪದ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿದ್ದರು. ಇವರ ಬಲಗೈ ಬಂಟನಾಗಿದ್ದರು. ಯಾವ ವ್ಯಕ್ತಿಯೂ ಕೀಳಲ್ಲ ಯಾವ ವ್ಯಕ್ತಿಯು ಮೇಲಲ್ಲ ಎಂದು ತಿಳಿಸಿದ ಮಹಾನ್ ವ್ಯಕ್ತಿ. ಅಂದಿನ ಕಾಲದಲ್ಲಿಯೇ ಯುವ ಸಮಾಜದ ಧ್ವನಿಯಾಗಿದ್ದವರು. ಇವರು ೨೫೦ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಜಾತೀಯತೆ ಅಜ್ಞಾನ ಮೂಢನಂಬಿಕೆಗಳನ್ನು ವಿರೋಧಿಸಿ ವೈಚಾರಿಕತೆಯ ಮೂಲಕ ಬೆಳಕು ಚೆಲ್ಲಿದಂತಹ ಮಹಾನ್ ವ್ಯಕ್ತಿ. ಇಂದಿಗೂ ಬನವಾಸಿಯ ಮಧುಕೇಶ್ವರ ದೇವಾಲಯದ ಶಿಯೋತ್ಸವ ಮಂಟಪದ ಗಗ್ಗರಿ ಕಲ್ಲಿನ ಮೇಲೆ ಅಪ್ಪಣ್ಣನವರ ಶಿಲ್ಪಗಳನ್ನು ಕಾಣಬಹುದು ಎಂದರು.

ಹಡಪದ ಎಂದರೆ ಕ್ಷೌರಿಕ ವೃತ್ತಿ ಎಂದರ್ಥ. ಅಪ್ಪಣ್ಣನವರು ಕ್ಷೌರಿಕ ವೃತ್ತಿಯನ್ನು ಮಾಡುತ್ತಿದ್ದರು. ಒಬ್ಬ ಕುರೂಪಿಯಾದ ವ್ಯಕ್ತಿಯನ್ನು ಅಂದ ಚಂದವಾಗಿ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತರುವವರು ನಮ್ಮ ಕ್ಷೌರಿಕ ಸಮಾಜದವರು. ಹಾಗಾಗಿ ಜಾತಿ ಧರ್ಮದಾಚೆ ಮನುಷ್ಯ ಧರ್ಮ ದೊಡ್ಡದು ಎಂದು ಇವರು ತೋರಿಸಿದ್ದಾರೆ ಎಂದು ಉಪನ್ಯಾಸ ನೀಡಿದರು.

ಕಂದಾಯ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಇದೇ ತಿಂಗಳಲ್ಲಿ ನಿವೃತ್ತಿ ಹೊಂದುತ್ತಿರುವ ತಹಸೀಲ್ದಾರ್‌ ಹುಲಿವಾಲ ಮೋಹನ್ ಕುಮಾರ್ ಅವರಿಗೆ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಸನ್ಮಾನ ಮಾಡಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಪಿ ತಾರಾನಾಥ್, ಹಾಸನ ಜಿಲ್ಲಾ ನೌಕರರ ಸಂಘದ ಖಜಾಂಚಿ ಹೇಮಂತ್ ಕೆ.ಆರ್., ಸಮುದಾಯದ ಮುಖಂಡರು ಇದ್ದರು.

PREV