ಹಡಪದ ಅಪ್ಪಣ್ಣ ಕ್ರಾಂತಿಕಾರಿ ಶರಣ: ಶಾಸಕ ಶಿವರಾಮ ಹೆಬ್ಬಾರ

KannadaprabhaNewsNetwork | Published : Sep 11, 2024 1:08 AM

ಸಾರಾಂಶ

ಮಾನವೀಯತೆಯಿಂದ ಮಾತ್ರ ಉತ್ತಮ ಸಮಾಜ ಕಟ್ಟಬಹುದೆಂಬುವುದನ್ನು ಸಾಬೀತು ಮಾಡಿದ ಬಸವಣ್ಣನವರ ಆಸ್ಥಾನದಲ್ಲಿ ಕಾರ್ಯನಿರ್ವಹಿಸಿದ ಹಡಪದ ಅಪ್ಪಣ್ಣ ಅವರು ಸಮಾಜದಲ್ಲಿ ತಲೆದೋರಿದ್ದ ಜಾತಿ ಪದ್ಧತಿಯಂತಹ ಅನಿಷ್ಟ ಸಂಪ್ರದಾಯ ಹೋಗಲಾಡಿಸಲು ಶ್ರಮಿಸಿದರು.

ಮುಂಡಗೋಡ: ೧೨ನೇ ಶತಮಾನದಲ್ಲಿಯೇ ಸಮಾಜದಲ್ಲಿ ಕ್ರಾಂತಿಕಾರಿ ಆದರ್ಶಪ್ರಾಯರಾಗಿದ್ದ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ತನ್ನದೆ ಆದ ಶೈಲಿಯಲ್ಲಿ ಕೆಲಸ ಮಾಡಿ ಛಾಪು ಮೂಡಿಸಿದ ಹಡಪದ ಅಪ್ಪಣ್ಣ ಅವರ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.ಮಂಗಳವಾರ ಪಟ್ಟಣದ ಟೌನ್ ಹಾಲ್ ಸಭಾಂಗಣದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ೮೯೦ನೇ ಜಯಂತ್ಯುತ್ಸವದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಾನವೀಯತೆಯಿಂದ ಮಾತ್ರ ಉತ್ತಮ ಸಮಾಜ ಕಟ್ಟಬಹುದೆಂಬುವುದನ್ನು ಸಾಬೀತು ಮಾಡಿದ ಬಸವಣ್ಣನವರ ಆಸ್ಥಾನದಲ್ಲಿ ಕಾರ್ಯನಿರ್ವಹಿಸಿದ ಹಡಪದ ಅಪ್ಪಣ್ಣ, ಸಮಾಜದಲ್ಲಿ ತಲೆದೋರಿದ್ದ ಜಾತಿ ಪದ್ಧತಿಯಂತಹ ಅನಿಷ್ಟ ಸಂಪ್ರದಾಯ ನಶಿಸಿ ಹೋಗಬೇಕೆಂಬ ಉದ್ದೇಶದಿಂದ ೧೧ ಶತಮಾನದ ಹಿಂದೆಯೇ ಜಾತಿಗೆ ಮೀರಿದ ತಳಹದಿಯ ಮೇಲೆ ಸಮಾಜ ನಿರ್ಮಾಣ ಮಾಡುವಂತಹ ಕಾರ್ಯದಲ್ಲಿ ಕೈಜೋಡಿಸಿದ್ದರಿಂದ ೮೯೦ ವರ್ಷದ ಬಳಿಕವೂ ಇವರು ಅಜರಾಮರವಾಗಿ ಉಳಿದಿದ್ದಾರೆ ಎಂದರು.ವಿಜಯಪುರ ತಾಲೂಕಿನನ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಹಡಪದ ಅಪ್ಪಣ್ಣ ದೇವರ ಸಂಸ್ಥಾನ ಮಠದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮಿಗಳು ಮಾತನಾಡಿ, ಆಚಾರ, ವಿಚಾರ, ಕಾಯಕ ಮತ್ತು ಸತ್ಯದ ಬದುಕು ನಮ್ಮದಾಗಬೇಕಾದರೆ ಲಿಂಗವನ್ನು ಧರಿಸಬೇಕು. ಲಿಂಗ ಧರಿಸಿದವರು ಮಾತ್ರ ಲಿಂಗಾಯತರು. ಲಿಂಗ ಸತ್ಯವನ್ನು ಸಮಾಜಕ್ಕೆ ಸಮರ್ಪಿಸಿದ್ದು ಅಣ್ಣ ಬಸವಣ್ಣ ಎಂಬುದನ್ನು ಅರಿತುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಹಡಪದ ಸಮಾಜದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ್, ಶಿರಸಿ ಉಪ ವಿಭಾಗಾಧಿಕಾರಿ ಕಾವ್ಯರಾಣಿ, ತಹಸೀಲ್ದಾರ್ ಶಂಕರ ಗೌಡಿ, ಹಡಪದ ಸಮಾಜದ ರಾಜ್ಯ ಉಪಾಧ್ಯಕ್ಷ ಸಂತೋಷ ಹಡಪದ, ಜಿಲ್ಲಾಧ್ಯಕ್ಷ ಶಂಕ್ರಪ್ಪ ಹುಲಗೂರ, ತಾಲೂಕಾಧ್ಯಕ್ಷ ಮಂಜುನಾಥ ಹಡಪದ, ಹಿರಿಯರಾದ ನಾಗರಾಜ ಸರ್ಜಾಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನೇಶ್ವರ ಗುಡಿಯಾಳ, ಹುನಗುಂದ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್.ಎಂ. ನಾಯ್ಕ, ರಾಮು ಬೆಳ್ಳನವರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರೂಪಾ ಅಂಗಡಿ, ಬಸವರಾಜ ನಡುವಿನಮನಿ, ವೈ.ಪಿ. ಪಾಟೀಲ್, ದೇವು ಪಾಟೀಲ್ ಉಪಸ್ಥಿತರಿದ್ದರು. ಕೆ.ಕೆ. ಕುರುವಿನಕೊಪ್ಪ ನಿರೂಪಿಸಿದರು. ದಾವಣಗೆರೆಯ ಶಶಿಧರ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಭಾವಚಿತ್ರದ ಮೆರವಣಿಗೆ

ಇದಕ್ಕೂ ಮುನ್ನ ಪಟ್ಟಣದಲ್ಲಿ ಹಡಪದ ಅಪ್ಪಣ್ಣ ನವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಇಲ್ಲಿಯ ಪ್ರವಾಸಿ ಮಂದಿರದಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿತು.

Share this article